ಕ್ರೀಡೆ

17 ವರ್ಷಗಳ ಅಜೇಯ ಓಟ: ಟೀಮ್ ಇಂಡಿಯಾಗೆ ಸರಣಿ ಗೆಲುವಿನ ಹಂಬಲ, ಇಂದು ಆಸೀಸ್ ಎದುರು ಅಂತಿಮ ಟಿ20

ಬ್ರಿಸ್ಬೇನ್: ಚುಟುಕು ಕ್ರಿಕೆಟ್‌ನಲ್ಲಿ ತನ್ನ ಅಜೇಯ ಓಟವನ್ನು ಸತತ 13 ಸರಣಿಗೆ ವಿಸ್ತರಿಸಿರುವ ಭಾರತ ತಂಡ, ಮತ್ತೊಂದು ಸರಣಿ ಗೆಲುವಿನ ಸನಿಹದಲ್ಲಿದೆ. ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಪುನರಾಗಮನ ಕಂಡಿರುವ ಭಾರತ ತಂಡ ಗಾಬಾದಲ್ಲಿ ಶನಿವಾರ ನಡೆಯಲಿರುವ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಸೆಣಸಲಿದೆ. ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿರುವ ಸೂರ್ಯಕುಮಾರ್ ಬಳಗ ಹ್ಯಾಟ್ರಿಕ್ ಗೆಲುವಿನೊಂದಿಗೆ, ಸರಣಿ ಕೈ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಇದುವರೆಗೆ ಒಂದೂ ಟಿ20 ಸರಣಿ ಸೋತಿಲ್ಲ.

ಆರಂಭಿಕ ಪಂದ್ಯದ ಸೋಲಿನ ಬಳಿಕ ಆಸ್ಟ್ರೇಲಿಯಾದಲ್ಲಿ 17 ವರ್ಷಗಳಿಂದ ಟಿ20 ಸರಣಿ ಸೋಲದ ದಾಖಲೆಯನ್ನು ಕಾಯ್ದುಕೊಳ್ಳುವಲ್ಲಿ ಸೂರ್ಯಕುಮಾರ್ ಪಡೆ ಯಶಸ್ವಿಯಾಗಿದೆ. ಸೂರ್ಯಕುಮಾರ್ ಗೋಲ್ಡ್‌ಕೋಸ್ಟ್‌ನಲ್ಲಿ ವೈಯಕ್ತಿಕ ರನ್ ಕೊರತೆಯ ನಡುವೆಯೂ ನಾಯಕತ್ವದಿಂದ ಗಮನಸೆಳೆದಿದ್ದಾರೆ. ಮುಂದಿನ ವರ್ಷದ ಚುಟುಕು ವಿಶ್ವಕಪ್‌ಗೆ ಮುನ್ನ ಉಭಯ ತಂಡಗಳ ನಡುವಿನ ಕೊನೇ ಕಾದಾಟ ಇದಾಗಿರಲಿದ್ದು, ಶುಭಮಾನ್ ಗಿಲ್ ಮತ್ತು ಸೂರ್ಯಕುಮಾರ್ ಬ್ಯಾಟಿಂಗ್ ಮೇಲೆ ಎಲ್ಲರ ಗಮನವಿರಲಿದೆ. ಉಪನಾಯಕ ಶುಭಮಾನ್ ಗಿಲ್ ಕಳೆದ 7 ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಿಲ್ಲ, ಹಿಂದಿನ ಪಂದ್ಯದಲ್ಲಿ 46 ರನ್‌ಗಳಿಸಿದ್ದು ಗರಿಷ್ಠ ಮೊತ್ತವಾಗಿದೆ. ಸೂರ್ಯಕುಮಾರ್ ನಾಯಕ ಸ್ಥಾನಕ್ಕೇರಿದ ನಂತರ ಹೆಚ್ಚಿನ ರನ್‌ಗಳಿಸಿಲ್ಲ. ಜತೆಗೆ ತಿಲಕ್ ವರ್ಮ ಹಿಂದಿನ ಲಯ ಕಂಡುಕೊಳ್ಳುವಲ್ಲಿ ವಿಲರಾಗಿದ್ದಾರೆ.

ಸಂಜು ಸ್ಯಾಮ್ಸನ್‌ರಿಂದ ಪೈಪೋಟಿ ಎದುರಿಸುತ್ತಿರುವ ಜಿತೇಶ್ ಶರ್ಮ ಮೇಲೆ ಹೆಚ್ಚಿನ ಒತ್ತಡವಿದ್ದು, 2ನೇ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಳ್ಳಲು ಪರಿಣಾಮಕಾರಿ ಪ್ರದರ್ಶನ ಮೂಡಿಬರಬೇಕಿದೆ. ಅಕ್ಷರ್ ಪಟೇಲ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ 7 ಹಾಗೂ 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಕ್ರಮಾಂಕ ಹೊಂದಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಅರ್ಷದೀಪ್ ಸಿಂಗ್ ಹನ್ನೊಂದರ ಬಳಗದಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ ಸರಣಿಯಲ್ಲಿ ಮೂರು ವಿಕೆಟ್ ಮಾತ್ರ ಕಬಳಿಸಿದ್ದಾರೆ. ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ ಸ್ಪಿನ್ ವಿಭಾಗಕ್ಕೆ ಬಲ ತುಂಬಿದ್ದಾರೆ.

ತವರಿನಲ್ಲಿ ಸರಣಿ ಸೋಲಿನ ಭೀತಿಯಲ್ಲಿರುವ ಆಸ್ಟ್ರೇಲಿಯಾ 2021ರ ನಂತರ ಸತತ ಮೂರು ಟಿ20 ಪಂದ್ಯ ಸೋತಿಲ್ಲ. ಜೋಶ್ ಹ್ಯಾಸಲ್‌ವುಡ್ ನಿರ್ಗಮನದಿಂದ ಆಸೀಸ್ ಬೌಲಿಂಗ್ ವಿಭಾಗ ಬಲ ಕಳೆದುಕೊಂಡಿದೆ. ನಾಥನ್ ಎಲ್ಲಿಸ್ ಮಾತ್ರ ಪರಿಣಾಮಕಾರಿ ಎನಿಸಿದ್ದು, ಬೆನ್ ಡ್ವಾರ್ಶುಯಿಸ್ ಬದಲಿಗೆ ಮಹ್ಲಿ ಬಿರ್ಯಡ್‌ಮನ್ ಆಸೀಸ್ ಪರ ಚೊಚ್ಚಲ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ.

17 ವರ್ಷಗಳ ಅಜೇಯ ಓಟ

2008ರಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯದಾಗಿ ಟಿ20 ಸರಣಿ ಸೋತಿರುವ ಭಾರತ,ನಂತರ ಆಡಿರುವ ಮೂರು ಸರಣಿಗಳಲ್ಲೂ ಅಜೇಯವಾಗಿದೆ. 2012 ಮತ್ತು 2018ರಲ್ಲಿ ಆಡಿದ ಸರಣಿಗಳು 1-1ರಿಂದ ಸಮಬಲಗೊಂಡರೆ, 2016ರಲ್ಲಿ 3-0ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದ್ದ ಭಾರತ, 2020ರಲ್ಲಿ 2-1 ರಿಂದ ಗೆದ್ದುಕೊಂಡಿತ್ತು. ಹಾಲಿ ಸರಣಿಯ ಕೊನೇ ಪಂದ್ಯದಲ್ಲಿ ಭಾರತ ಸೋಲು ಕಂಡರೂ ಅಜೇಯ ಓಟ ಅಭಾದಿತವಾಗಿರಲಿದೆ.

ಟೀಮ್‌ನ್ಯೂಸ್

ಭಾರತ: ಗೆಲುವಿನ ತಂಡದ ಹನ್ನೊಂದರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಶಿವಂ ದುಬೆ ದುಬಾರಿಯಾದರೂ, ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ ಹಿಂದಿನ ಪಂದ್ಯದ ವೈಲ್ಯದ ನಡುವೆ ಮತ್ತೊಂದು ಅವಕಾಶ ಪಡೆಯಲಿದ್ದಾರೆ.

ಆಸ್ಟ್ರೇಲಿಯಾ: ಆಶಸ್ ಸರಣಿ ಸಿದ್ಧತೆಗಾಗಿ ಪ್ರಮುಖ ಆಟಗಾರ ಅಲಭ್ಯತೆ ಹಿನ್ನಡೆ ತಂದಿದೆ. ಟ್ರಾವಿಸ್ ಹೆಡ್ ಬದಲಿಗೆ ಮ್ಯಾಟ್ ಶಾರ್ಟ್ ಆರಂಭಿಕನಾಗಿ ಮುಂದುವರಿಯಲಿದ್ದಾರೆ. ಎರಡು ವರ್ಷಗಳ ಬಳಿಕ ಮೊದಲ ಟಿ20 ಆಡಿದ ಜೋಶ್ ಫಿಲಿಪ್, ಆಲ್ರೌಂಡರ್ ಮಿಚ್ ಓವನ್‌ಗೆ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ.

ಆರಂಭ: ಮಧ್ಯಾಹ್ನ 1.45

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

ಪಿಚ್ ರಿಪೋರ್ಟ್

ಬ್ರಿಸ್ಬೇನ್ ಮೈದಾನವು ಸಾಂಪ್ರದಾಯಿಕವಾಗಿ ವೇಗಿಗಳಿಗೆ ಹೆಚ್ಚು ನೆರವು ನೀಡಲಿದ್ದು, ವೇಗದ ಜತೆಗೆ ಉತ್ತಮ ಬೌನ್ಸ್ ಸಹ ಹೊಂದಿದೆ. ಆದರೆ ಬಿಗ್‌ಬ್ಯಾಷ್‌ನಲ್ಲಿ ಈ ಕ್ರೀಡಾಂಗಣದಲ್ಲಿ ಗರಿಷ್ಠ ಮೊತ್ತವೂ ದಾಖಲಾಗಿದ್ದು, ಬ್ಯಾಟರ್‌ಗಳಿಗೂ ನೆರವಾಗುವ ಸಾಧ್ಯತೆಗಳಿವೆ. ಬ್ರಿಸ್ಬೇನ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.

1. ಆಸೀಸ್ ವಿರುದ್ಧದ ಕೊನೇ ಪಂದ್ಯದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಇನ್ನೊಂದು ವಿಕೆಟ್ ಪಡೆದರೆ, 100 ವಿಕೆಟ್ ಪೂರೈಸಲಿದ್ದು, ಮೂರೂ ಮಾದರಿಯಲ್ಲಿ (ಟಿ20, ಟೆಸ್ಟ್, ಏಕದಿನ) ಕನಿಷ್ಠ 100 ವಿಕೆಟ್ ಪಡೆದ ಭಾರತದ ಮೊದಲ ವೇಗಿ ಎನಿಸಲಿದ್ದಾರೆ.

3. ಭಾರತ ತಂಡ 2016ರ ಜನವರಿ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ಸರಣಿಯಲ್ಲಿ ಸತತ ಮೂರು ಪಂದ್ಯ ಜಯಿಸಿಲ್ಲ.

2. ಭಾರತ-ಆಸ್ಟ್ರೇಲಿಯಾ ತಂಡಗಳು ಗಾಬಾದಲ್ಲಿ ಎರಡನೇ ಬಾರಿಗೆ ಟಿ20 ಪಂದ್ಯವನ್ನಾಡಲಿದ್ದು, 2018ರಲ್ಲಿ ನಡೆದ ಹಿಂದಿನ ಮುಖಾಮುಖಿಯಲ್ಲಿ ಆಸೀಸ್ 4 ರನ್‌ಗಳ ಗೆಲುವು ಸಾಧಿಸಿತ್ತು.