ಕ್ರೀಡೆ

ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು ಹಣ ಸಿಗಲಿದೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ…

ಮುಂಬೈ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ-20 ವಿಶ್ವಕಪ್‌ನಲ್ಲಿ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟ್ರೋಫಿಯನ್ನು ಎತ್ತಿಹಿಡಿದ ಟೀಮ್​ ಇಂಡಿಯಾಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಬಹುಮಾನ ಮೊತ್ತ ಘೋಷಣೆಯಾದಾಗಿನಿಂದ ಆಟಗಾರರಿಗೆ ಹಣವನ್ನು ಹೇಗೆ ಹಂಚುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ಆಡಿದ ಹನ್ನೊಂದು ಆಟಗಾರರಿಗೆ ಮಾತ್ರಾನಾ ಅಥವಾ ಆಡಲು ಅವಕಾಶ ಸಿಗದವರಿಗೂ ಹಣ ಸಿಗುತ್ತದಾ ಎಂಬ ಅನುಮಾನ ಮೂಡಿತ್ತು. ಏಕೆಂದರೆ, ಸಂಜು ಸ್ಯಾಮ್ಸನ್​, ಯಜುವೇಂದ್ರ ಚಹಾಲ್​ ಹಾಗೂ ಯಶಸ್ವಿ ಜೈಸ್ವಾಲ್​ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಅವರಿಗೂ ಹಣ ಸಿಗುತ್ತಾ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಇಂಡಿಯಾ ಟುಡೆ ಮಾಧ್ಯಮ ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ.

ಬಿಸಿಸಿಐ ಘೋಷಣೆ ಮಾಡಿರುವ 125 ಕೋಟಿ ರೂ.ಗಳಲ್ಲಿ ತಂಡದ 15 ಮಂದಿಗೆ ತಲಾ 5 ಕೋಟಿ ರೂ. ಸಿಗಲಿದೆ. ಇವರಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಸೇರಿದ್ದಾರೆ. ಇದರೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ ಅವರಿಗೆ ಐದು ಕೋಟಿ ರೂ. ಸಿಗಲಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ. ಸಿಗಲಿದೆ.

ತಂಡದ ಆಯ್ಕೆ ನಡೆಸಿದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಐವರು ಸದಸ್ಯರು ತಲಾ ಒಂದು ಕೋಟಿ ಪಡೆಯಲಿದ್ದಾರೆ. ಫಿಸಿಯೋ ಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್, ತುಳಸಿ ರಾಮ್ ಯುವರಾಜ್, ಥ್ರೋ ಡೌನ್ ಸ್ಪೆಷಲಿಸ್ಟ್‌ಗಳಾದ ರಾಘವೇಂದ್ರ ಡಿವಿಜಿ, ನುವಾನ್ ಉದೆನೆಕೆ, ದಯಾನಂದ್ ಗರಣಿ, ಮಸಾಜ್‌ದಾರರಾದ ರಾಜೀವ್ ಕುಮಾರ್, ಅರುಣ್ ಕಾನಡೆ ಮತ್ತು ಸ್ಟ್ರೆಂತ್ ಅಂಡ್​ ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರು ಬಹುಮಾನದ ಮೊತ್ತದಿಂದ ತಲಾ 2 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಇದಲ್ಲದೇ ವಿಶ್ವಕಪ್ ತಂಡದ ಮೀಸಲು ಆಟಗಾರರಾಗಿದ್ದ ಶುಭಮನ್ ಗಿಲ್, ರಿಂಕು ಸಿಂಗ್, ಜೋಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ ಒಂದು ಕೋಟಿ ಬಹುಮಾನ ಮೊತ್ತವನ್ನು ಪಡೆಯಲಿದ್ದಾರೆ. 42 ಸದಸ್ಯರ ಭಾರತ ತಂಡ ಸ್ಪರ್ಧೆಗೆ ತೆರಳಿತ್ತು. ತಂಡದ ವಿಡಿಯೋ ವಿಶ್ಲೇಷಕ, ಮಾಧ್ಯಮ ಅಧಿಕಾರಿ ಮತ್ತು ಲಾಜಿಸ್ಟಿಕ್ಸ್ ಮ್ಯಾನೇಜರ್ ಕೂಡ ಮೊತ್ತದ ಒಂದು ಭಾಗವನ್ನು ಪಡೆಯುತ್ತಾರೆ. ಬಹುಮಾನ ಮೊತ್ತದ ಜೊತೆಗೆ ಮಹಾರಾಷ್ಟ್ರ ಸರ್ಕಾರ ಭಾರತ ತಂಡಕ್ಕೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. 2013ರಲ್ಲಿ ವಿಶ್ವಕಪ್ ಗೆದ್ದಾಗ ತಂಡದ ಎಲ್ಲ ಸದಸ್ಯರಿಗೂ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗಿತ್ತು. (ಏಜೆನ್ಸೀಸ್​)