ಯಾವ ಮೋಹನ ಮುರಳಿ ಕರೆಯಿತು ಪೋಸ್ಟರ್
- ಪ್ರಾಣಿ- ಮಾನವ ಸಂಬಂಧ ಸಾರುವ ಚಿತ್ರ
- ತಂದೆ-ಮಗಳ ಭಾವನಾತ್ಮಕ ಪಯಣ
- ಗಮನಸೆಳೆಯುವ ರಾಕಿ ಎಂಬ ಶ್ವಾನ
ಚಿತ್ರ: ಯಾವ ಮೋಹನ ಮುರಳಿ ಕರೆಯಿತು
ತಾರಾಗಣ: ಮಾಧವ್, ಪಟೇಲ್ ವರುಣ್ ರಾಜ್, ಪ್ರಕೃತಿ ಶರಣ್, ಸ್ವಪ್ನಾ ಶೆಟ್ಟಿಗಾರ್, ಶಶಿಧರ್ ಭಟ್ ಮತ್ತಿತರರು
‘ಒಮ್ಮೆ ಕಳೆದುಕೊಂಡ ಸಂಪತ್ತು ಅಥವಾ ವ್ಯಕ್ತಿ ಯಾವುದೇ ಆಗಲಿ ಅದನ್ನು ಮರಳಿ ಪಡೆಯಲು ಹೋದರೆ, ಆಗ ಅನುಭವಿಸುವುದು ಪಶ್ಚಾತ್ತಾಪ ಇಲ್ಲವೇ ಸಂಕಟ’ ಎಂಬ ಸಾಲಿನಲ್ಲಿ ಮೂಡಿಬಂದಿರುವ ಚಿತ್ರ ವಿಶ್ವಾಸ್ ಕೃಷ್ಣ ನಿರ್ದೇಶನದ ‘ಯಾವ ಮೋಹನ ಮುರಳಿ ಕರೆಯಿತು’. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಜತೆಗೆ ತಂದೆ-ಮಗಳ ಸುಂದರವಾದ ಜರ್ನಿ ಈ ಕಥೆಯಲ್ಲಿದೆ.
ಕಾರ್ಗಲ್ ಎಂಬ ಊರಿನ ಧಣಿಯ ಮಗ ಮೋಹನ (ಮಾಧವ). ಪತ್ನಿ ಸಿಂಧು (ಸ್ವಪ್ನಾ), ಮಗಳು ಪ್ರಕೃತಿ ಇರುವ ಸುಂದರ ಕುಟುಂಬ. ಆದರೆ, ಮೋಹನನಿಗೆ ಮಗಳು ಅಂಗವಿಕಲೆ ಎಂಬ ನೋವು. ಆದರೂ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಪ್ರೀತಿಯಿಂದ ಬೆಳೆಸುತ್ತಾರೆ. ಹೀಗಿರುವಾಗ, ರಾಕಿ ಎಂಬ ಶ್ವಾನವು ಪ್ರಕೃತಿ ಬದುಕಿನಲ್ಲಿ ಎಲ್ಲ ಕೊರತೆ ಮೀರಿಸುವ ಖುಷಿ ಹೊತ್ತು ತರುತ್ತದೆ. ಈ ವೇಳೆ ಕಾರ್ಗಲ್‌ಗೆ ಮುರಳಿ (ವರುಣ್) ಆಗಮನವಾಗುತ್ತದೆ. ಆತ ಬಂದೂಕು ಹಿಡಿದು ಹಠ ಸಾಧಿಸಲೇಬೇಕು ಎಂದು ಬಂದಿರುವಾತ. ಇಂತಹ ಮುರಳಿ, ಮೋಹನ್‌ಗೆ ಪರಿಚಯವಾಗಿ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಹಾಗಾದರೆ, ಮುರಳಿ ಕಾರ್ಗಲ್‌ಗೆ ಬರಲು ಕಾರಣವೇನು? ಆತ ಮೋಹನನ ಕುಟುಂಬಕ್ಕೆ ತೊಂದರೆ ಮಾಡುತ್ತಾನಾ? ಈ ಮಧ್ಯೆ, ಪ್ರಕೃತಿ ಮತ್ತು ರಾಕಿ ಕಥೆ ಏನಾಗುತ್ತದೆ? ತಿಳಿಯಲು ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ನೋಡಬೇಕಷ್ಟೇ. ಇದೊಂದು ಭಾವನಾತ್ಮಕ ಕೌಟುಂಬಿಕ ಕಥೆ. ಇಲ್ಲಿ ರಾಕಿ ಎಂಬ ಶ್ವಾನ ಅಂಗವಿಕಲಳಾದ ಪ್ರಕೃತಿ ಬದುಕಿನಲ್ಲಿ ಖುಷಿ ತರಲೆಂದೇ ಬಳಸಿಕೊಂಡಂತಿದೆ. ಅವರ ಭಾವನಾತ್ಮಕ ಪಯಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ಕೀರ್ತನ್ ಪೂಜಾರಿ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಹಬ್ಬದಂತೆ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಅನಿಲ್ ಸಿಜೆ ಹಿನ್ನೆಲೆ ಸಂಗೀತ ಭಾವನಾತ್ಮಕ ದೃಶ್ಯಗಳಿಗೆ ಪೂರಕವಾಗಿದೆ. ಮಾಧವ ಮತ್ತು ವರುಣ್ ರಾಜ್ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಬೇಬಿ ಪ್ರಕೃತಿ ಪಾತ್ರಕ್ಕೆ ಇನ್ನೊಂದಿಷ್ಟು ತಯಾರಿ ಬೇಕಿತ್ತು ಅನಿಸುತ್ತದೆ. ಸ್ವಪ್ನಾ ಶೆಟ್ಟಿಗಾರ್, ಶಶಿಧರ್ ಭಟ್ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಹೀಗಾಗಿ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರವನ್ನು ಒಮ್ಮೆ ನೋಡಬಹುದು.