ಟಾಕ್ಸಿಕ್‌ ಸಿನಿಮಾದಲ್ಲಿ ನಟ ಯಶ್​ 
ಸ್ಯಾಂಡಲ್‌ವುಡ್

ಯಶ್ ‘ಟಾಕ್ಸಿಕ್’ಗೆ ಮುಗಿಯದ ಸಂಕಷ್ಟ: ಧಾರ್ಮಿಕ ಭಾವನೆ ಧಕ್ಕೆ; ಕ್ರಿಶ್ಚಿಯನ್ ಸಮುದಾಯದಿಂದ ದೂರು ದಾಖಲು | Toxic

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್​ ಸ್ಟಾರ್​ ಯಶ್​ ಅವರ ಬಹುನೀರಿಕ್ಷಿತ ಸಿನಿಮಾ ಟಾಕ್ಸಿಕ್‌
  • ಟೀಸರ್​ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ವಿಚಾರ
  • ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್​ನಿಂದ ಸಿನಿಮಾ ವಿರುದ್ಧ ದೂರು ದಾಖಲು
ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅವರ ಬಹುನೀರಿಕ್ಷಿತ ಟಾಕ್ಸಿಕ್‌ (Toxic) ನಿಮಾದ ಟೀಸರ್​ ಬಿಡುಗಡೆಯಾದ ದಿನದಿಂದ ಒಂದಲ್ಲ ಒಂದು ಆರೋಪ, ವಿವಾದಗಳು ಭುಗಿಲೆಳುತ್ತಿವೆ.
ಈಗ ಈ ಸಿನಿಮಾಗೆ ಹೊಸ ತಲೆನೋವೊಂದು ಪ್ರಾರಂಭವಾಗಿದ್ದು, ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್ ಈಗ ದೂರನ್ನು ದಾಖಲಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ದೂರು ಸಲ್ಲಿಸಲಾಗಿದೆ.
ಈ ಸಿನಿಮಾದ ಕೆಲವು ದೃಶ್ಯಗಳು ಕ್ರಿಶ್ಚಿಯನ್ನರಿಗೆ ಆಕ್ಷೇಪಾರ್ಹ ಮತ್ತು ಅವರ ಧಾರ್ಮಿಕ ನಂಬಿಕೆಗಳಿಗೆ ಅಗೌರವವನ್ನುಂಟುಮಾಡುತ್ತವೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್ ಆರೋಪಿಸಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸುವ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸುವ ದೃಶ್ಯಗಳಿವೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ದೇವತೆಗಳ ಸಮ್ಮುಖದಲ್ಲಿ ಆಕ್ಷೇಪಾರ್ಹ ಮತ್ತು ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದ್ದು, ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದೆ. ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಸಂಬಂಧಿತ ವಿಷಯ ಸೇರಿದಂತೆ ವಿವಾದಿತ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕೆಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್ ಒತ್ತಾಯಿಸಿದೆ.
ರಾಷ್ಟ್ರೀಯ ಕ್ರಿಶ್ಚಿಯನ್ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಈ ದೂರನ್ನು ಸಲ್ಲಿಸಿದ್ದು, ಅವರು ಚಿತ್ರದ ತಂಡವು ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಬೇಕು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತು ಆಪಾದಿತ ಆಕ್ಷೇಪಾರ್ಹ ವಿಷಯವನ್ನು ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಸಿನಿಮಾ ತಂಡಕ್ಕೆ ಎಚ್ಚರಿಸಿದೆ,(ಏಜನ್ಸೀಸ್​).