- ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಟಾಕ್ಸಿಕ್
- ಕೇರಳ ಸೇರಿ ವಿದೇಶದಲ್ಲಿ ವಿತರಣೆ ಬಹುಮೌಲ್ಯಕ್ಕೆ ಮಾರಾಟ
- ಟಾಕ್ಸಿಕ್ ತಂಡ ಸೇರಿದ ಸುದೇವ್ ನಾಯರ್, ಅಕ್ಷಯ್ ಒಬೇರಾಯ್, ಬಾಲಾಜಿ ಮನೋಹರ್
ಬೆಂಗಳೂರು: ‘ಕೆಜಿಎಫ್’ ಸರಣಿ ಬಳಿಕ ನಟ ಯಶ್ ಅಭಿನಯಿಸಿರುವ ‘ಟಾಕ್ಸಿಕ್: ದ ಫೇರಿಟೇಲ್ ಫಾರ್ ಗ್ರೋನಪ್ಸ್’ ಇದೇ ಮಾರ್ಚ್ 19ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಇನ್ನು ತಿಂಗಳು ಇರುವಾಗಲೇ ಚಿತ್ರ ವಿಶ್ವಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿರುವ ತಂಡ ದಿನಕ್ಕೊಂದು ಅಪ್‌ಡೇಟ್ ನೀಡುತ್ತಿದೆ. ಇತ್ತೀಚೆಗಷ್ಟೇ ಮೂರನೇ ಟೀಸರ್ ರಿಲೀಸ್ ಮಾಡಿತ್ತು. ಅದರಲ್ಲಿ ನಟ ಯಶ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮುಂಚೆ ‘ರಾಯ’ ಎಂಬ ಪಾತ್ರ ಪರಿಚಯಿಸಲಾತ್ತು. ಹೊಸ ಟೀಸರ್‌ನಲ್ಲಿ ಇನ್ನೂ ಎರಡು ಶೇಡ್‌ಗಳಲ್ಲಿ ಯಶ್ ಮಿಂಚಿದ್ದಾರೆ. ಅದರಲ್ಲಿ ಕ್ಲೀನ್ ಶೇವ್ ಮಾಡಿಕೊಂಡು ಯುವಕನ ಲುಕ್‌ನಲ್ಲಿರುವ ಪಾತ್ರಕ್ಕೆ ‘ಟಿಕೆಟ್’ ಎಂದು ಹೆಸರಿಡಲಾಗಿದೆ. ಯಶ್ ಮೂರನೇ ಪಾತ್ರದ ಹೆಸರು ‘ರೂಮಿ’ ಎನ್ನಲಾಗಿದೆ. ಇದೀಗ ‘ಟಿಕೆಟ್’ ಹೇರ್‌ಸ್ಟೈಲ್ ಎಲ್ಲೆಡೆ ವೈರಲ್ ಆಗಿದೆ. ಯಶ್‌ಗೆ ಈ ಮೂರೂ ಹೇರ್‌ಸ್ಟೈಲ್‌ಗಳನ್ನು ಮಾಡಿದ್ದು, ಹೈದರಾಬಾದ್ ಮೂಲದ ಅಲೆಕ್ಸ್ ವಿಜಯ್‌ಕಾಂತ್ ಎಂಬುವವರು. ಸುದೀಪ್, ಅಲ್ಲು ಅರ್ಜುನ್, ಸಿಂಬು, ಶ್ರೀಲೀಲಾ, ವಿಶ್ವಕ್ ಸೇನ್‌ಸೇರಿ ಹಲವು ಸ್ಟಾರ್‌ಗಳಿಗೆ ಇವರೇ ಕೇಶವಿನ್ಯಾಸ ಮಾಡುವುದು. ಇದುವರೆಗೆ ಯಶ್ ಹೊರತುಪಡಿಸಿದರೆ ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿ ಎಲ್ಲ ಮಹಿಳೆಯರ ಪಾತ್ರಗಳನ್ನಷ್ಟೇ ‘ಟಾಕ್ಸಿಕ್’ ಟೀಮ್ ಪರಿಚಯಿಸಿತ್ತು. ಇದೀಗ ಯಶ್ ಹೊರತುಪಡಿಸಿ ಮೊದಲ ಬಾರಿಗೆ ಎರಡು ಪುರುಷ ಪಾತ್ರವನ್ನು ಪರಿಚಯಿಸಲಾಗಿದೆ. ಮಾಲಿವುಡ್ ನಟ ಸುದೇವ್ ನಾಯರ್ ಇಲ್ಲಿ ‘ಕರ್ಮಾಡಿ’ ಹಾಗೂ ಬಾಲಿವುಡ್ ನಟ ಅಕ್ಷಯ್ ಒಬೇರಾಯ್ ‘ಟೋನಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೇವ್‌ಗೆ ಇದು ಮೂರನೇ ಕನ್ನಡ ಸಿನಿಮಾ. ಈ ಹಿಂದೆ ‘ಓಲ್ಡ್‌ಮಾಂಕ್’ ಮತ್ತು ಕನ್ನಡ- ಮಲಯಾಳಂನಲ್ಲಿ ಸಿದ್ಧವಾಗಿದ್ದ ‘ಟ್ವೆಂಟಿ ಒನ್ ಅವರ್ಸ್’ ಚಿತ್ರಗಳಲ್ಲಿ ಸುದೇವ್ ನಟಿಸಿದ್ದರು. ಇನ್ನು ಅಕ್ಷಯ್ ಈ ಹಿಂದೆ ಹಿಂದಿಯ ‘ಪಿಕು’, ‘ಐ ಲವ್ ಯು’, ‘ಫೈಟರ್’ ಚಿತ್ರಗಳಲ್ಲಿ ನಟಿಸಿದ್ದರು. ಮಲಯಾಳಂ ಮೂಲದ ಗೀತು ಮೋಹನ್‌ದಾಸ್ ‘ಟಾಕ್ಸಿಕ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನಟ ಯಶ್ ಈ ಚಿತ್ರಕ್ಕೆ ಕಥೆ ಬರೆದು, ನಟಿಸುವ ಜತೆಗೆ ಸಹ ನಿರ್ಮಾಪಕರು ಆಗಿದ್ದಾರೆ. ಕೆವಿಎನ್ ಬ್ಯಾನರಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಟಾಕ್ಸಿಕ್’ ಚಿತ್ರದ ಆಡಿಯೋ ರೈಟ್ಸ್ ಹೆಸರಾಂತ ಜೀ ಮ್ಯೂಸಿಕ್ ಪಾಲಾಗಿದೆ. ಇನ್ನು ಈ ಚಿತ್ರಕ್ಕಾಗಿ ಐವರು ಸಂಗೀತ ನಿರ್ದೇಶಕರು ಕಾರ್ಯನಿರ್ವಹಿಸಿರುವುದು ವಿಶೇಷ. ರವಿ ಬಸ್ರೂರು ‘ಟಾಕ್ಸಿಕ್’ಗೆ ಒಂದು ಸಾಂಗ್ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಾಲಿವುಡ್ ಕಂಪೋಸರ್ ವಿಶಾಲ್ ಮಿಶ್ರಾ ನಾಲ್ಕು ಸಾಂಗ್ ಹಾಗೂ ಇನ್ನೋರ್ವ ಸಂಗೀತ ನಿರ್ದೇಶಕ ತನಿಷ್ಕ್ ಬಾಗ್ಜಿ ಒಂದು ಹಾಡನ್ನು ಸಂಯೋಜಿಸಿದ್ದಾರೆ. ತನಿಷ್ಕ್ ಬಾಗ್ಜಿ ಜತೆ ಅಸ್ರಲಾನ್ ನಿಜಾಮಿ, ಹೀಮ್ ಅಬ್ದುಲ್ಲಾ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
‘ಟಾಕ್ಸಿಕ್’ ಬಿಡುಗಡೆಗೆ ಇನ್ನೂ ಒಂದು ತಿಂಗಳು ಇರುವಾಗಲೇ ಬಹುತೇಕ ವಿತರಣೆ ಅಂತಿಮಗೊಂಡಿದೆ. ಈಗಾಗಲೇ ಆಂಧ್ರ-ತೆಲಂಗಾಣ ರಾಜ್ಯದ ವಿತರಣೆ ಹಕ್ಕುಗಳನ್ನು ದಿಲ್ ರಾಜು, ಹೊರದೇಶದಲ್ಲಿ ಭಾರತೀಯ ಭಾಷೆಗಳ ವಿತರಣೆ ಹಕ್ಕು ‘ಫಾರ್ಸ್’ ಫಿಲಂಸ್ ಪಾಲಾಗಿತ್ತು. ಇದೀಗ ಕೇರಳ ರಾಜ್ಯದ ವಿತರಣೆ ಹಕ್ಕುಗಳು ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರಡಿಯಲ್ಲಿ ಮುಕೇಶ್ ಮೆಹ್ತಾ ಹಾಗೂ ಸಿ.ವಿ.ಸಾರಥಿ ಪಡೆದುಕೊಂಡಿದ್ದು, 350ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.