ಸಂಗೀತಾ 
ಸ್ಯಾಂಡಲ್‌ವುಡ್

Actress Sangeetha - 25 ವರ್ಷಗಳ ನಂತರ ಕಮ್​ಬ್ಯಾಕ್​ ಮಾಡಿದ "ಯಾರೇ ನೀನು ಚೆಲುವೆ ನಟಿ'

ಕನ್ನಡದ "ಶಾಂತಿ ಕ್ರಾಂತಿ'ಯಲ್ಲಿ ಬಾಲನಟಿಯಾಗಿ, ನಂತರ ನಾಯಕಿಯಾಗಿ "ಯಾರೇ ನೀನು ಚೆಲುವೆ', ಸೇರಿ 60ಕ್ಕೂ ಅಧಿಕ ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತಿಯ ನಟಿ ಸಂಗೀತಾಗೆ ಸಲ್ಲುತ್ತದೆ. ಇಂತಹ ಸಂಗೀತಾ 2000ರಲ್ಲಿ ಬಿಡುಗಡೆಯಾದ "ಯಾರೇ ನೀ ಅಭಿಮಾನಿ' ಬಳಿಕ ಮತ್ತೆ ಕನ್ನಡದಲ್ಲಿ ನಟಿಸಿರಲಿಲ್ಲ. ಅದೇ ವರ್ಷ ಛಾಯಾಗ್ರಾಹಕ ಎಸ್​. ಸರವಣನ್​ ಜತೆ ಸಪ್ತಪದಿ ಇಟ್ಟ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದರು. 2002ರಲ್ಲಿ ಪುತ್ರಿ ಸಾಯಿ ತೇಜಸ್ವತಿ ಜನಿಸಿದ ಬಳಿಕ ಸಿನಿಮಾಗಳಿಂದ ಮತ್ತಷ್ಟು ಅಂತರ ಕಾದುಕೊಂಡಿದ್ದರು. 2014ರಲ್ಲಿ 14 ವರ್ಷಗಳ ನಂತರ ಸಂಗೀತಾ ಮಲಯಾಳಂನ "ನಗರ ವಾರಿದಿ ನಡುವಿಲ್​ ಎನ್ಜಾನ್​' ಮೂಲಕ ಕಮ್​ಬ್ಯಾಕ್​ ಮಾಡಿದರು. ಇನ್ನೇನು ಚಿತ್ರರಂಗದಲ್ಲಿ ಮತ್ತೆ ಬಿಜಿಯಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಒಂದೇ ಚಿತ್ರದಲ್ಲಿ ನಟಿಸಿದ ಸಂಗೀತಾ ಮತ್ತೆ ಚಿತ್ರರಂಗದಿಂದ ದೂರ ನಡೆದುಬಿಟ್ಟರು. ಅದಾಗಿ 9 ವರ್ಷಗಳ ಬಳಿಕ 2023ರಲ್ಲಿ ಇನ್ನೊಮ್ಮೆ ಕಮ್​ಬ್ಯಾಕ್​ ಮಾಡಿದ ಅವರು ಮೂರನೇ ಇನ್ನಿಂಗ್ಸ್​ನಲ್ಲೂ ಮಲಯಾಳಂನಲ್ಲೇ ಬಿಜಿಯಾಗಿದ್ದಾರೆ. "ಚಾವರ್​', "ಪರಾಕ್ರಮಂ', "ಆನಂದ ಶ್ರೀಬಾಲ' ಸೇರಿ ಕಳೆದ ವರ್ಷ ತೆರೆಕಂಡ "ಯುನೈಟೆಡ್​ ಕಿಂಗ್ಡಮ್​ ಆ್​ ಕೇರಳ', "ಹೃದಯಪೂರ್ವಂ', "ಹಾಲ್​' ಚಿತ್ರಗಳಲ್ಲಿ ನಟಿಸಿದ್ದಾರೆ. ಅದರ ನಡುವೆಯೇ ಇತ್ತೀಚೆಗಷ್ಟೆ ಕನ್ನಡ ಚಿತ್ರವೊಂದನ್ನು ಒಪ್ಪಿರುವ ಅವರು, ಬರೋಬ್ಬರಿ 25 ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡಲು ಸಿದ್ಧತೆ ನಡೆಸಿದ್ದಾರೆ.
ಇದೇ ಆ ಕನ್ನಡದ ಚಿತ್ರ...
"ರನ್ನ', "ವಿಕ್ಟರಿ' ಸೇರಿ ಹಲವು ಚಿತ್ರಗಳಲ್ಲಿ ಸಹ&ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ, ನಟ ಕಿಚ್ಚ ಸುದೀಪ್​ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್​ ವಿಶ್ನನಾಥ್​ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಅವರ ಚಿತ್ರಕ್ಕೆ "ಏಳುಮಲೆ' ನಟಿ ಪ್ರಿಯಾಂಕಾ ಆಚಾರ್​ ನಾಯಕಿಯಾಗಿ ಆಯ್ಕೆಯಾಗಿರುವ ಬಗ್ಗೆ ಇತ್ತೀಚೆಗಷ್ಟೆ ಘೋಷಿಸಲಾಗಿತ್ತು. ಇದೀಗ ಇದೇ ಸಿನಿಮಾಗಾಗಿ ಕಿರಣ್​ 25 ವರ್ಷಗಳ ನಂತರ ಸಂಗೀತಾ ಮಾಧವನ್​ರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಸಂಗೀತಾ ಈ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಚಿತ್ರದ ನಾಯಕ ಯಾರು ಎಂಬುದರ ಬಗ್ಗೆ ಚಿತ್ರತಂಡ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ಸಿನಿಮಾ ಟೈಟಲ್​ ಮತ್ತು ನಾಯಕನ ಕುರಿತು ಘೋಷಣೆ ಮಾಡುವ ಯೋಜನೆ ಕಿರಣ್​ ಮತ್ತು ತಂಡದ್ದು.