ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (ಚಿತ್ರ Instagram)
- ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ
- ಈ ವಿವಾಹವು ಅತ್ಯಂತ ಖಾಸಗಿ ಸಮಾರಂಭದಲ್ಲಿ ಒಂದಾಗಬೇಕು ಎಂದು ಈ ಜೋಡಿ ನಿರ್ಧರಿಸಿದೆ
- ಮದುವೆಯ ಫೋಟೊಗ್ರಾಫಿ ಆರ್ಡರ್ ಪಡೆದಿರುವವರು ಫೋಟೋಗಳನ್ನು ಬಹಿರಂಗಪಡಿಸಬಾರದೆಂದು ಸಹಿ ಹಾಕಿಸಿಕೊಂಡಿದ್ದಾರೆ
Vijay Deverakonda: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದು, ಈ ವಿವಾಹವು ಅತ್ಯಂತ ಖಾಸಗಿ ಸಮಾರಂಭದಲ್ಲಿ ಒಂದಾಗಬೇಕು ಎಂದು ಈ ಜೋಡಿ ನಿರ್ಧರಿಸಿದೆ.
ಮದುವೆಯ ಚಿತ್ರಗಳು ಮತ್ತು ವಿಡಿಯೋಗಳು ಎಲ್ಲಿಯೂ ಸೋರಿಕೆಯಾಗದಂತೆ ತಡೆಯಲು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ತಾರಾಜೋಡಿ, ಸಮಾರಂಭದಲ್ಲಿ ಭಾಗವಹಿಸುವವರು ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.
ವಿವಾಹಕ್ಕೆ ಸಂಬಂಧಪಟ್ಟ ಪೂರ್ವ ತಯಾರಿ ಫೆಬ್ರವರಿ 24 ರಿಂದ ಪ್ರಾರಂಭವಾಗಲಿದ್ದು, ಈ ಸಮಾರಂಭಕ್ಕೆ ತೀರಾ ಆಪ್ತರಿಗಷ್ಟೆ ಆಮಂತ್ರಣ ನೀಡಲಾಗಿದೆ ಎಂದು ತಿಳಿದುಬಂದಿದೆ. ಮದುವೆಯ ಫೋಟೊಗ್ರಾಫಿ ಆರ್ಡರ್ ಪಡೆದಿರುವವರು ಫೋಟೋಗಳನ್ನು ಬಹಿರಂಗಪಡಿಸಬಾರದೆಂದು ಸಹಿ ಹಾಕಿಸಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ವಿಶೇಷ ವೈಶಿಷ್ಟ್ಯಗಳಿಂದ ಕೂಡಿದ ಮದುವೆ
ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಇತರ ನಟರನ್ನು ಮದುವೆಗೆ ಆಹ್ವಾನಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. ಆದಾಗ್ಯೂ, ಈಗಾಗಲೇ ಎರಡು ಪೂರ್ವ ವಿವಾಹ ಸಮಾರಂಭಗಳು ಪ್ರತ್ಯೇಕವಾಗಿ ನಡೆಸಲಾಗಿದ್ದು, ವಿಜಯ್ ಮತ್ತು ರಶ್ಮಿಕಾ ತಮ್ಮ ಸ್ನೇಹಿತರಿಗೆ ಕೈಬರಹದ ಟಿಪ್ಪಣಿಗಳನ್ನು ಕಳುಹಿಸಿದ್ದಾರೆ. ಅದರಲ್ಲಿ ಯಾವುದೇ ಉಡುಗೊರೆಗಳ ಅಗತ್ಯವಿಲ್ಲ, ಬದಲಾಗಿ ಎಲ್ಲರ ಆಶೀರ್ವಾದ ಸಾಕು ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಸತತ ಚಿತ್ರೀಕರಣ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದ ದಣಿದಿರುವ ಈ ಜೋಡಿ, ಮದುವೆಯ ನಂತರ ಪೂರ್ತಿ ಒಂದು ತಿಂಗಳು ಕೆಲಸದಿಂದ ದೂರವಿರಲು ನಿರ್ಧರಿಸಿದ್ದಾರೆ. ಇದು ಅವರಿಬ್ಬರು ಸ್ವಲ್ಪ ಸಮಯ ಒಟ್ಟಿಗೆ ಕಳೆಯಲು ಬಯಸಿದ್ದಾರೆ ಎಂಬುದನ್ನು ತಿಳಿಸಿದೆ.
ಉದಯಪುರದಲ್ಲಿ ವಿವಾಹವು ಖಾಸಗಿಯಾಗಿದ್ದರೂ, ಚಲನಚಿತ್ರೋದ್ಯಮದ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗಾಗಿ ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬೆಳ್ಳಿತೆರೆಯ ಮೇಲೆ ಎಷ್ಟು ಅದ್ಭುತವಾಗಿದೆಯೋ, ಅಷ್ಟೇ ಕುತೂಹಲ ಅವರ ನಿಜ ಜೀವನದ ಬಗ್ಗೆಯೂ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅವರಿಬ್ಬರ ಪ್ರಯಾಣ, ಒಟ್ಟಿಗೆ ಕಳೆಯುತ್ತಿರುವ ಫೋಟೋಗಳು, ಎಲ್ಲೆಡೆ ಸದ್ದು ಮಾಡುತ್ತಿದ್ದರು ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಈ ಜೋಡಿ ಬಿಟ್ಟುಕೊಡುತ್ತಿರಲಿಲ್ಲ. ಆದಾಗ್ಯೂ, ತೆಲುಗು ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರರಾದ ಈ ಜೋಡಿ ನಿಜ ಜೀವನದಲ್ಲಿ ಒಂದಾಗುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ (ಏಜೆನ್ಸೀಸ್).