ವೀರ ಕಂಬಳ ಪೋಸ್ಟರ್​ 
ಸ್ಯಾಂಡಲ್‌ವುಡ್

veera kambala movie review: ಸಂಸ್ಕೃತಿ, ಭಾವನೆ, ಸಂಘರ್ಷ

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ಕಂಬಳ ಹೋರಾಟ ನೆನಪಿಸುವ ವೀರ ಕಂಬಳ
  • ತುಳುನಾಡಿನ ಸಂಸ್ಕೃತಿ, ಬದುಕಿನ ಅನಾವರಣ
  • ಕರಾವಳಿ ಕಲಾವಿದರ ಕಮಾಲ್​
ಚಿತ್ರ: ವೀರ ಕಂಬಳ
ನಿರ್ದೇಶನ: ರಾಜೇಂದ್ರ ಸಿಂಗ್ ಬಾಬು
ತಾರಾಗಣ: ಆದಿತ್ಯ, ಪ್ರಕಾಶ್ ರಾಜ್, ರವಿಶಂಕರ್, ನವೀನ್ ಡಿ.ಪಡೀಲ್, ರಾಧಿಕಾ ನಾರಾಯಣ್, ಗೋಪಿನಾಥ್ ಭಟ್ ಮತ್ತಿತರರು.
ಶಿವ ಸ್ಥಾವರಮಠ
ಕೆಲವು ವರ್ಷಗಳ ಹಿಂದೆ ತುಳುನಾಡಿನ ಜನಪದ ಕ್ರೀಡೆ ‘ಕಂಬಳ’ಕ್ಕೆ ಕಾನೂನು ಸಂಕಷ್ಟ ಎದುರಾಗಿತ್ತು. ಈ ಕ್ರೀಡೆ ವಿರುದ್ಧ ಕೆಲವರು ನ್ಯಾಯಾಲಯದ ಮೊರೆಹೋಗಿ, ತಡೆಯಾಜ್ಞೆ ತಂದಿದ್ದರು. ಆಗ ಇಡೀ ತುಳುನಾಡಿನ ಜನತೆ ಬೀದಿಗಿಳಿದು ಹೋರಾಟ ಮಾಡಿ, ಕಾನೂನು ಮೂಲಕವೇ ಗೆದ್ದು ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳವನ್ನು ಉಳಿಸಿಕೊಂಡಿದ್ದರು. ಆ ಹೋರಾಟ ಇಂದಿಗೂ ಸ್ಮರಣೀಯ. ಇದೀಗ ಆ ಸಂಘರ್ಷದ ಕಥೆಯ ಎಳೆಯನ್ನಿಟ್ಟುಕೊಂಡು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ‘ವೀರ ಕಂಬಳ’ವನ್ನು ತೆರೆ ಮೇಲೆ ತಂದಿದ್ದಾರೆ.
ಮಂಜೊಟ್ಟುಗುತ್ತು ಕುಟುಂಬದ ಯಜಮಾನ ರಾಮಣ್ಣ (ಗೋಪಿನಾಥ್) ಕುಟುಂಬಕ್ಕೆ ಒಂದಲ್ಲ ಒಂದು ರೀತಿಯ ಕಾಡುವಿಕೆ. ಇದು ಆತನ ಬೇಸರಕ್ಕೂ ಕಾರಣವಾಗುತ್ತದೆ. ಆಗ ತಾಯಿ ಈ ಬಗ್ಗೆ ದೇವರಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳು ಎಂದು ಸಲಹೆ ನೀಡುತ್ತಾಳೆ. ಅದರಂತೆ ದೇವರಲ್ಲಿ ಕೇಳಿದಾಗ ಕುಟುಂಬ ನಡೆಸಿಕೊಂಡು ಬರುತ್ತಿದ್ದ ಕಂಬಳ ನಿಂತು 68 ವರ್ಷಗಳಾಗಿವೆ. ಇದರಿಂದಾಗಿ ಕುಟುಂಬಕ್ಕೆ ತೊಂದರೆಗಳಾಗುತ್ತಿವೆ ಎಂದು ತಿಳಿದುಬರುತ್ತದೆ. ಇದನ್ನರಿತ ರಾಮಣ್ಣ ಮತ್ತು ಸಹೋದರ ಸತ್ಯ (ಆದಿತ್ಯ) ಕಂಬಳ ನಡೆಸಲು ಮುಂದಾಗುತ್ತಾರೆ. ಇದು ವಿರೋಧಿಗಳಿಗೆ ಬಿಸಿತುಪ್ಪವಾಗಿ ತಡೆಯಲು ಸಂಚು ಹೂಡುತ್ತಾರೆ. ವಿರೋಧಿಗಳ ಸಂಚಿನಿಂದಾಗಿ ಕಂಬಳಕ್ಕೆ ಕಾನೂನು ತೊಡಕು ಎದುರಾಗುತ್ತದೆ. ಬಂದ ಸಂಕಷ್ಟವನ್ನು ಇಡೀ ಊರಿನ ಜನತೆ ಹೇಗೆ ಗೆಲ್ಲುತ್ತಾರೆ ಎನ್ನುವುದೇ ‘ವೀರ ಕಂಬಳ’ದ ಸಾರ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ‘ವೀರ ಕಂಬಳ’ ಮೂಲಕ ತುಳುನಾಡಿನ ಜನರ ಬದುಕು ಹಾಗೂ ಭಾವನೆಗಳನ್ನು ತೋರಿಸಿದ್ದಾರೆ. ಈ ಚಿತ್ರಕಥೆಗಾಗಿ ಸಾಕಷ್ಟು ಅಧ್ಯಯನ ನಡೆಸಿರುವುದು ಗೊತ್ತಾಗುತ್ತದೆ. ಕಂಬಳಕ್ಕೂ ಮುನ್ನ ನಡೆಯುವ ಧಾರ್ಮಿಕ ಆಚರಣೆ, ನಂಬಿಕೆಗಳನ್ನು ಸೂಕ್ಷ್ಮವಾಗಿ ಅರಿತು ಸೆರೆಹಿಡಿದಿದ್ದಾರೆ. ಇಡೀ ಕಥೆ ಸಂಘರ್ಷ ಹಾಗೂ ಭಾವನೆಗಳಿಂದ ಮೇಳೈಸಿದೆ. ಕಂಬಳ ಬಗೆಗಿನ ಪಕ್ಕಾ ಪ್ಯಾಕೇಜ್ ಚಿತ್ರ ಇದಾಗಲಿದೆ. ಹಲವು ತುಳುನಾಡಿನ ಕಲಾವಿದರು ಅಭಿನಯಿಸಿರುವುದರಿಂದ ಕಥೆಗೆ ಹೆಚ್ಚು ಜೀವಂತಿಕೆ ಸಿಕ್ಕಿದೆ. ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಗೋಪಿನಾಥ್ ಭಟ್ ಗಮನಸೆಳೆಯುತ್ತಾರೆ. ನಟ ಆದಿತ್ಯ ಕಾಣಿಸಿಕೊಂಡಿರುವ ಸತ್ಯ ಎಂಬ ಪಾತ್ರ ಮುತ್ತಪ್ಪ ರೈ ನೆನಪಿಸುತ್ತದೆ. ಪ್ರಕಾಶ್ ರಾಜ್, ರವಿಶಂಕರ್ ವಕೀಲರಾಗಿ ಇಷ್ಟವಾಗುತ್ತಾರೆ. ಮಣಿಕಾಂತ್ ಕದ್ರಿ ಸಂಗೀತ ಆಪ್ತವಾಗುತ್ತದೆ.
ರೇಟಿಂಗ್​: 3.5