- ಎರಡೂವರೆ ವರ್ಷಗಳ ಬಳಿಕ ಕನ್ನಡಕ್ಕೆ ಬಂದ ನಟ ವಶಿಷ್ಠ
- ಟಾಲಿವುಡ್ ಸವಾರಿ ಮುಗಿಸಿ ಕನ್ನಡ ಸಿನಿಮಾದಲ್ಲಿ ಬಿಜಿ
- ಗ್ಯಾಂಗ್ ಸ್ಟರ್ ಚಿತ್ರದಲ್ಲಿ ಚಿಟ್ಟೆ
ಬೆಂಗಳೂರು: ‘ಲವ್ ಲೀ’ ಬಳಿಕ ನಟ ವಸಿಷ್ಠ ಸಿಂಹ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಕಳೆದ ಎರಡು ವರ್ಷಗಳಲ್ಲಿ ನಟನ ನಾಲ್ಕು ತೆಲುಗು ಚಿತ್ರಗಳು ರಿಲೀಸ್ ಆಗಿವೆ. ಇದೀಗ ಒಂದೂವರೆ ವರ್ಷಗಳ ಬಳಿಕ ನಟ ಸ್ಯಾಂಡಲ್‌ವುಡ್‌ಗೆ ಮರಳಿದ್ದು, ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಹೆಸರು ‘ಕಡಲ್ ಕೋಟೆ’. ಇದು ಕರಾವಳಿಯ ಗ್ಯಾಂಗ್‌ಸ್ಟರ್ ಕಥೆಯಾಗಿದ್ದು, ವಸಿಷ್ಠಗೆ ಸುಷ್ಮಿತಾ ಭಟ್ ಜೋಡಿಯಾಗಿದ್ದಾರೆ. ರಂಜಿತ್ ಕುಮಾರ್ ಗೌಡ ನಿರ್ದೇಶನವಿರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ಲೋಕಾಯುಕ್ತ ಎಸ್‌ಪಿ ಬಿ.ಪಿ.ದಿನೇಶ್ ಕುಮಾರ್ ಕ್ಯಾಮರಾಗೆ ಚಾಲನೆ ನೀಡಿದರು. ನಿರ್ದೇಶಕ ರಂಜಿತ್, ‘ದುಡ್ಡಿನ ಹಿಂದೆ ಬಿದ್ದರೆ, ಆತನ ಜೀವನದಲ್ಲಿ ಏನೆಲ್ಲಾ ಘಟಿಸುತ್ತದೆ ಎಂಬುದನ್ನು ಹೇಳುತ್ತಿದ್ದೇವೆ. ಹಾರ್ಬರ್ ಮೇಲೆ ಹಿಡಿತ ಸಾಧಿಸುವ ಕಥೆ ಇದು. ಹಾರ್ಬರ್‌ನಲ್ಲಿ ನಡೆಯುವ ಶೋಷಣೆ ಮತ್ತು ಸಂಘರ್ಷದ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಎನ್ನುವಂತೆ ನಾಯಕ ಹೇಗೆ ಎದ್ದು ಬರುತ್ತಾನೆ ಎಂಬುದೇ ಚಿತ್ರದ ತಿರುಳು. ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಕೆಲ ನೈಜ ಘಟನೆಗಳನ್ನು ಆಧರಿಸಿ ಕಥೆ ಮಾಡಲಾಗಿದೆ. ಉಡುಪಿ, ಸುರತ್ಕಲ್, ಮಂಗಳೂರು ಹಾರ್ಬರ್, ಬೇಂಗ್ರೆ ಸೇರಿ ಹಲವೆಡೆ 65 ದಿನಗಳಲ್ಲಿ ಚಿತ್ರೀಕರಣ ಮಾಡುವ ಯೋಚನೆಯಿದೆ’ ಎಂದು ಮಾಹಿತಿ ನೀಡಿದರು. ವಸಿಷ್ಠ, ‘ಅಚ್ಚುಕಟ್ಟಾದ ಚಿತ್ರಕಥೆ ನೋಡಿ ಈ ಚಿತ್ರ ಒಪ್ಪಿಕೊಂಡೆ. ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ. ಗ್ಯಾಂಗ್‌ಸ್ಟರ್ ಕಥೆಯಾದರೂ, ಒಳ್ಳೆಯ ಮೌಲ್ಯಗಳಿವೆ. ಬಹಳ ದಿನಗಳ ಬಳಿಕ ಮಾಸ್ ಪಾತ್ರವನ್ನು ಮಾಡುತ್ತಿದ್ದೇನೆ’ ಎಂದು ಖುಷಿ ಹಂಚಿಕೊಂಡರು. ವಸಿಷ್ಠ, ಸುಷ್ಮಿತಾ ಜತೆ ರವಿಶಂಕರ್, ಅಚ್ಯುತ್ ಕುಮಾರ್, ಸ್ವರಾಜ್ ಶೆಟ್ಟಿ, ಶರತ್ ಲೋಹಿತಾಶ್ವ, ತಾರಾ, ಬಲ ರಾಜವಾಡಿ, ಯಶ್ ಶೆಟ್ಟಿ ಕಲಾಬಳಗದಲ್ಲಿದ್ದಾರೆ.