- ಮಲೆನಾಡಿನ ಸೌಂದರ್ಯದ ದೃಶ್ಯರೂಪ
- ಹಸು ಗೌರಾ ಹಾಗೂ ಕುಂಡೇಶಿ ನಡುವಿನ ಬಾಂಧವ್ಯದ ಕಥೆ
- ನಟನೆಯಲ್ಲಿ ಮಿಂಚಿದ ವೇದಿಕೆ ಕೌಶಲ್
ತಾರಾಗಣ: ಮಾ.ವೇದಿಕ್ ಕೌಶಲ್, ಮಾ.ಶಯನ್, ಹರ್ಷಿತಾ ಗೌಡ, ಮಾಲತೇಶ್, ಅಭಯ್ ಮತ್ತಿತರರು.
ವಿಭಿನ್ನ ಟೈಟಲ್ ಮೂಲಕವೇ ಗಮನಸೆಳೆದಿದ್ದ ಚಿತ್ರ ‘ವಲವಾರ’. ಮಲೆನಾಡಿನ ಭಾಗದಲ್ಲಿ ವಲವಾರ ಪದ ಬಳಕೆ ಹೆಚ್ಚಾಗಿದ್ದು, ‘ದೃಷ್ಟಿಕೋನ’ ಎಂದರ್ಥ. ಇಬ್ಬರು ಮಕ್ಕಳಲ್ಲಿ ತಂದೆಗೆ ಚಿಕ್ಕವನ ಮೇಲೆ ಮುದ್ದು ಹೆಚ್ಚು. ದೊಡ್ಡವನು ತಪ್ಪು ಮಾಡದಿದ್ದರೂ, ನಿಂದನೆಗೊಳಾಗುತ್ತಾನೆ. ತಂದೆಯ ಈ ಮನೋಭಾವಕ್ಕಾಗಿಯೇ ಈ ಶೀರ್ಷಿಕೆ ಇಟ್ಟಿರಬಹುದು. ಉಳಿದಂತೆ ಸುಂದರವಾದ ಹಳ್ಳಿ. ಬೆಟ್ಟ-ಬಯಲು, ಹಾರಾಡುವ ಬಾನಾಡಿಗಳು, ಹರಿಯುವ ಝರಿ ಹಾಗೂ ಹಸಿರು ಹೊದ್ದ ಹೊಲ-ಗದ್ದೆಗಳು ಸೇರಿ ಮಲೆನಾಡಿನ ಸೌಂದರ್ಯವನ್ನು ‘ವಲವಾರ’ದಲ್ಲಿ ಕಣ್ತುಂಬಿಕೊಳ್ಳಬಹುದು.
ಬಡ ದಂಪತಿಯ ಇಬ್ಬರು ಮಕ್ಕಳು ಕುಂಡೇಶಿ (ವೇದಿಕ್), ಕೋಸುಡಿ (ಶಯನ್). ಕುಂಡೇಶಿ ತಾಯಿಗೆ ಪ್ರೀತಿಯ ಮಗನಾದರೆ, ಚಿಕ್ಕವ ಕೋಸುಡಿ ಮೇಲೆ ತಂದೆಯ ಮುದ್ದು ಹೆಚ್ಚು. ಈ ಇಬ್ಬರು ಮಹಾನ್ ಜಗಳಗಂಟರು. ಒಮ್ಮೆ ಮನೆಯ ಹಸು ಗೌರಾಳನ್ನು ಮೇಯಿಸಿಕೊಂಡು ಬರಲು ಹೋಗುವ ಅವರು, ಮೈ ಮರೆತು ಆಟ ಆಡಲು ಮುಂದಾಗುತ್ತಾರೆ. ಗೌರ ಬೇರೆಯವರ ಹೊಲದಲ್ಲಿ ಮೇದಿದೆ ಎಂದು ಅದನ್ನು ‘ದನದ ದೊಡ್ಡಿ’ಗೆ ಸೇರಿಸಿಬಿಡುತ್ತಾರೆ. ಆಗ ಕುಂಡೇಶಿ ಪಜೀತಿಗೆ ಬೀಳುತ್ತಾನೆ. ಊರಿಗೆ ಹೋದ ಅಪ್ಪ ಮನೆಗೆ ಬರುವಷ್ಟರಲ್ಲಿ ಹಟ್ಟಿಯಲ್ಲಿ ಹಸು ಇರಬೇಕು. ಇಲ್ಲವಾದರೆ ಕಥೆ ಮುಗಿಸಿಬಿಡುತ್ತಾನೆ. ಈ ಸಂಕಟದಲ್ಲಿ ಸಿಕ್ಕ ಕುಂಡೇಶಿ ಹಸು ಬಿಡಿಸಿಕೊಂಡು ಬರಲು ಮಾಡುವ ಉಪಾಯಗಳೇ ‘ವಲವಾರ’ ಕಥೆ. ಸುತನ್ ಗೌಡ ಕಥೆಯನ್ನು ಸುಂದರ, ಭಾವನಾತ್ಮಕವಾಗಿ ನಿರೂಪಿಸಿದ್ದಾರೆ. ತಾಯಿ-ಮಗ ಹಾಗೂ ಮಕ್ಕಳು-ಪ್ರಾಣಿಗಳ ಸಂಬಂಧವನ್ನು ಬಹು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ಧ ಸ್ವಲ್ಪ ನಿಧಾನ ಅನಿಸಿದರೂ ಸಾಗುತ್ತಾ ಸಿನಿಮಾ ಸೂಕ್ಷ್ಮ ವಿಷಯಗಳಿಂದ ಗಮನಸೆಳೆಯುತ್ತದೆ. ‘ಬೈಯ್ತ ಹೇಳೋದು, ಬದುಕೋಕೆ ಅಂತೆ’ ಇಂತಹ ಹಲವು ಸಂಭಾಷಣೆಗಳು ಹೆಚ್ಚು ಇಷ್ಟವಾಗುತ್ತವೆ. ಮಾ.ವೇದಿಕ್ ಕೌಶಲ್ ಕಣ್ಣಿನಲ್ಲಿಯೇ ನಟಿಸಿದ್ದಾನೆ. ಸಿಟ್ಟು, ಆಕ್ರೋಶವನ್ನು ಕಣ್ಣಿನಲ್ಲಿಯೇ ವ್ಯಕ್ತಪಡಿಸುತ್ತಾನೆ. ತಾಯಿ ಪಾತ್ರಧಾರಿ ಹರ್ಷಿತಾ ಗೌಡ ನಟನೆಯಲ್ಲಿ ಗಮನಸೆಳೆಯುತ್ತಾರೆ. ಕೆಲವೇ ಕೆಲವು ಪಾತ್ರಗಳಿದ್ದರೂ, ಕಥೆಯಲ್ಲಿ ಒತ್ತು ಸಿಕ್ಕಿದೆ. ಬಾಲರಾಜ್ ಗೌಡ ಛಾಯಾಗ್ರಹಣ ಮಲೆನಾಡಿನ ಸೌಂದರ್ಯವನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ.