ಮಾರ್ಕ್, 45 ಸಿನಿಮಾ ಪೋಸ್ಟರ್
- ಒಂದೇ ದಿನ ಎರಡು ಕನ್ನಡದ ಬಹುನಿರೀಕ್ಷಿತ ಚಿತ್ರಗಳು ರಿಲೀಸ್
- ಕಿಚ್ಚನ 'ಮಾರ್ಕ್', ತ್ರಿಮೂರ್ತಿಗಳ '45' ಏಕಕಾಲಕ್ಕೆ ತೆರೆಕಾಣಲು ಸಿದ್ಧ
- ಬಾಕ್ಸ್ ಆಫೀಸ್ನಲ್ಲಿ ಕನ್ನಡ ಚಿತ್ರಗಳದ್ದೇ ಪೈಪೋಟಿ
ಬೆಂಗಳೂರು: ವರ್ಷದ ಕೊನೆಯ ಘಟ್ಟವನ್ನು ತಲುಪಿರುವ ಜನರು, ಹೊಸ ವರ್ಷ, ಹೊಸ ಹರ್ಷಕ್ಕೆ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಒಂದೆಡೆ, 2025ರಲ್ಲಿ ಏನೇನಾಯಿತು? ಎಂಬುದನ್ನು ಮೆಲುಕು ಹಾಕುತ್ತ ಕುಳಿತಿರುವ ಜನತೆ, ತಾವು ನೋಡಿದ ನೆಚ್ಚಿನ ಸಿನಿಮಾಗಳು ಮತ್ತು ಆ ಚಿತ್ರದ ಸ್ಟಾರ್ಗಳನ್ನು ಸಂಭ್ರಮಿಸುತ್ತಿದ್ದಾರೆ. ಹೀಗಿರುವಾಗಲೇ, ಅವರ ಮುಂಬರುವ ಚಿತ್ರಗಳು ಯಾವುದು? ಡಿಸೆಂಬರ್ನಲ್ಲಿ ರಿಲೀಸ್ ಸಾಧ್ಯತೆಗಳಿವೆಯೇ? ಎಂದು ಚೆಕ್ ಮಾಡುತ್ತಿದ್ದಾರೆ. ಅಷ್ಟಕ್ಕೂ, ಕನ್ನಡ ಸಿನಿಪ್ರಿಯರಿಗೆ ವರ್ಷದ ಕೊನೆ ತಿಂಗಳಲ್ಲಿ ಭರ್ಜರಿ ಮನರಂಜನೆ, ಆ್ಯಕ್ಷನ್ ಪ್ಯಾಕ್ಡ್ ಖಂಡಿತ ಸಿಗಲಿದೆ ಎಂಬುದಕ್ಕೆ ಈ ಎರಡು ಬಹುನಿರೀಕ್ಷಿತ ಸಿನಿಮಾಗಳೇ ಕಾರಣ ಎನ್ನಬಹುದು.
ಇತ್ತೀಚೆಗಷ್ಟೇ, ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಡೆವಿಲ್' ಸಿನಿಮಾ ತೆರೆಕಂಡು, ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನನ ಚಿತ್ರವನ್ನು ಅವರ ಉಪಸ್ಥಿತಿ ಇಲ್ಲದೆ, ಚಿತ್ರಮಂದಿರಗಳಲ್ಲಿ ನೋಡಿದ್ದು ಕೆಲ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರೆ, ಹಲವರು ಥಿಯೇಟರ್ಗಳ ಮುಂದೆ ದರ್ಶನ್ ಹೆಸರು ಹೇಳಿಕೊಂಡು ಹುಚ್ಚೆದ್ದು ಕುಣಿದಿದ್ದಾರೆ. ಚಿತ್ರಕ್ಕೆ ಸದ್ಯ ಮಿಶ್ರ ಪ್ರತಿಕ್ರಿಯೆಗಳು ಲಭಿಸಿದ್ದು, ಕಲೆಕ್ಷನ್ ವಿಚಾರದಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು.
ಮೂರರಲ್ಲಿ 1 ರಿಲೀಸ್, 2 ಬಾಕಿ
ಈ ತಿಂಗಳು ಮೂರು ಸಿನಿಮಾಗಳು ಚಿತ್ರರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿವೆ. ಆ ಪೈಕಿ 'ಡೆವಿಲ್' ಈಗಾಗಲೇ ತೆರೆಕಂಡಿದೆ. ಇನ್ನೂ ಬಾಕಿ ಉಳಿದಿರುವುದು ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಮತ್ತು ಶಿವರಾಜ್ಕುಮಾರ್, ರಾಜ್ ಬಿ.ಶೆಟ್ಟಿ ಮತ್ತು ಉಪೇಂದ್ರ ನಟಿಸಿರುವ '45' ಸಿನಿಮಾಗಳು. ಈ ಎರಡು ಚಿತ್ರಗಳು ಸದ್ಯ ಸಖತ್ ಹೈಪ್ ಮೂಡಿಸಿದ್ದು, ಟ್ರೇಲರ್ನಿಂದಲೇ ನೋಡುಗರ ನಿರೀಕ್ಷೆಗಳನ್ನು ಡಬಲ್ ಮಾಡಿವೆ.
ಕಿಚ್ಚನ 'ಮಾರ್ಕ್'
ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವು ಇದೇ ಡಿಸೆಂಬರ್ 25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಈಗಾಗಲೇ ಟ್ರೇಲರ್ನಿಂದ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿರುವ ಮಾರ್ಕ್, ಕಳೆದ ವರ್ಷ 'ಮ್ಯಾಕ್ಸ್' ತೆರೆಕಂಡ ದಿನದಂದೇ ರಿಲೀಸ್ಗೆ ಎದುರುನೋಡುತ್ತಿದೆ. ಇದು ಸುದೀಪ್ ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. 2024ರ ಡಿ.25ರಂದು ಬಿಡುಗಡೆಯಾಗಿದ್ದ ಮ್ಯಾಕ್ಸ್, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಹಾಗೂ ಒಳ್ಳೆಯ ಪ್ರತಿಕ್ರಿಯೆಗಳಿಂದ ಹಿಟ್ ಸಾಲಿಗೆ ಸೇರಿತು. ಈಗ 'ಮಾರ್ಕ್' ಎಂಟ್ರಿಯೂ ಅದೇ ದಿನ ಇರುವುದು ಸದ್ಯ ಗಮನಾರ್ಹ. ಇದು ಕನ್ನಡದ '45' ಚಿತ್ರದೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿಗಿಳಿಯಲಿದ್ದು, ಹೇಗೆ ಕಮಾಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ.
'45' ತ್ರಿಮೂರ್ತಿಗಳ ಸಂಗಮ
ಇನ್ನು ನಿನ್ನೆ (ಡಿ.15) ಟ್ರೇಲರ್ ಬಿಡುಗಡೆಗೊಳಿಸಿರುವ 45 ಚಿತ್ರವು, ಶಿವರಾಜ್ಕುಮಾರ್, ರಾಜ್ ಬಿ.ಶೆಟ್ಟಿ ಮತ್ತು ಉಪೇಂದ್ರ ಅವರ ಸಂಗಮಕ್ಕೆ ಸಾಕ್ಷಿಯಾಗಿದೆ. ಸ್ಯಾಂಡಲ್ವುಡ್ನ ಸ್ಟಾರ್ ನಟರ ಕಾಂಬೊ ಮೇಲೆ ಸದ್ಯ ಚಿತ್ರಪ್ರೇಮಿಗಳ ಕಣ್ಣು ಬಿದ್ದಿದ್ದು, ಚೊಚ್ಚಲ ಚಿತ್ರದ ಮೂಲಕ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹೊರಬಿದ್ದಿರುವ ಟ್ರೇಲರ್ ಹಲವು ವಿಶೇಷತೆಗಳಿಂದ ಕೂಡಿದ್ದು, ವಿಎಫ್ಎಕ್ಸ್ ಕೆಲಸಗಳಿಂದ ನೋಡುಗರ ಗಮನವನ್ನು ಸೆಳೆದಿದೆ.