'ಲವ್ ಮಾಕ್ಟೇಲ್ 3' ಮತ್ತು 'ಆಕಾಶ್'
- ಮಾ.13ಕ್ಕೆ ಪುನೀತ್ ರಾಜ್ಕುಮಾರ್ ಅಭಿನಯದ 'ಆಕಾಶ್' ರೀ-ರಿಲೀಸ್
- ಅದೇ ಮುಂದಿನ ವಾರಕ್ಕೆ ಬಹುನಿರೀಕ್ಷಿತ ಲವ್ ಮಾಕ್ಟೇಲ್ 3 ರಿಲೀಸ್
- ಕನ್ನಡ ಸಿನಿಪ್ರಿಯರಿಗೆ ಡಬಲ್ ಮನರಂಜನೆ ಖಚಿತ
ಬೆಂಗಳೂರು: ಮಾ.19 ಮತ್ತು ಅದರ ಹಿಂದಿನ ವಾರದಲ್ಲಿ ಹಿಂದಿ, ತೆಲುಗು ಮತ್ತು ತಮಿಳಿನ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇದು ಆಯಾ ಭಾಷೆಯ ಚಿತ್ರಪ್ರೇಮಿಗಳಿಗೆ ಕುತೂಹಲ ಕೆರಳಿಸಿದರೆ, ಕನ್ನಡ ಸಿನಿಪ್ರಿಯರಿಗೆ ಮಾತ್ರ ಡಬಲ್ ಮನರಂಜನೆ ಸಿದ್ಧವಾಗಿದೆ. ಅದು ಎರಡು ನೆಚ್ಚಿನ ಸಿನಿಮಾಗಳೇ ರಿಲೀಸ್ ಆಗುತ್ತಿರುವುದು ಖುಷಿ ತಂದಿದೆ.
ಕನ್ನಡ ಚಿತ್ರರಂಗದ ನೆಚ್ಚಿನ 'ಪವರ್ಸ್ಟಾರ್', ಅಭಿಮಾನಿಗಳ ಪ್ರೀತಿಯ 'ಅಪ್ಪು', ಡಾ. ಪುನೀತ್ ರಾಜ್ಕುಮಾರ್ ಅಭಿನಯದ 2005ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಹಿಟ್ 'ಆಕಾಶ್' ಸಿನಿಮಾ ಇದೀಗ ರೀ-ರಿಲೀಸ್ಗೆ ಎದುರುನೋಡುತ್ತಿದೆ. ಇದು ಪುನೀತ್ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಮತ್ತೊಂದೆಡೆ, ನಟ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 3' ಚಿತ್ರ ಇದೇ ಮಾ.19ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ಕರುನಾಡಿನಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಈ ಬಾರಿ ಇನ್ನೂ ವಿಶೇಷವಾಗಿ ಸಂಭ್ರಮಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಹಾಗೂ ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಪುನೀತ್ ಅವರ ಪತ್ನಿ, ನಿಮಾರ್ಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು, ಅಪ್ಪು ಹುಟ್ಟುಹಬ್ಬಕ್ಕೆ ಅವರ ಫ್ಯಾನ್ಸ್ಗಳಿಗೆ 'ಆಕಾಶ್' ಸಿನಿಮಾವನ್ನು ಮರುಬಿಡುಗಡೆ ಮಾಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಕಳೆದ ವರ್ಷಗಳಲ್ಲಿ ಪುನೀತ್ ಅವರ ಹುಟ್ಟುಹಬ್ಬಕ್ಕೆ 'ಜಾಕಿ' ಮತ್ತು 'ಅಪ್ಪು' ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿತ್ತು. ಈ ಚಿತ್ರಗಳನ್ನು ಸಿನಿಪ್ರಿಯರು ಮತ್ತು ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಹೊಡೆದು, ಕುಣಿದು ಸಂಭ್ರಮಿಸಿದ್ದು ವಿಶೇಷ. ಈಗ, ಆಕಾಶ್ ಸರದಿಯಾಗಿದ್ದು, 4ಕೆ ರೀ-ಮಾಸ್ಟರಿಂಗ್ ಸೇರಿ ಆಧುನಿಕ ಟೆಕ್ನಾಲಜಿ ಬಳಸಿಕೊಂಡು ಮತ್ತೆ ತೆರೆಗೆ ತರಲಾಗುತ್ತಿದೆ.
ಇನ್ನು ಇತ್ತೀಚೆಗಷ್ಟೇ 'ಲವ್ ಮಾಕ್ಟೇಲ್ 3' ಟ್ರೇಲರ್ ಬಿಡುಗಡೆಗೊಳಿಸಿರುವ ನಟ ಕೃಷ್ಣ, ತಮ್ಮ ಸಿನಿಮಾ ಇದೇ ಮಾ.19ಕ್ಕೆ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಲವ್ ಮಾಕ್ಟೇಲ್ ಭಾಗ 1 ಮತ್ತು 2 ಭರ್ಜರಿ ಯಶಸ್ಸು ಕಂಡ ಹಿನ್ನೆಲೆ ಇದೀಗ ಪಾರ್ಟ್ 3 ರಿಲೀಸ್ಗೆ ಕೃಷ್ಣ-ಮಿಲನ ಜೋಡಿ ಸಜ್ಜಾಗಿದೆ. ಇದೇ ಕೊನೆಯ ಅಧ್ಯಾಯ ಎಂದು ಟ್ರೇಲರ್ನಲ್ಲಿ ಹೇಳಲಾಗಿದೆ. ಅಲ್ಲಿಗೆ 'ಲವ್ ಮಾಕ್ಟೇಲ್ 4' ಬರೋದಿಲ್ಲ ಎಂದರ್ಥ. ಹಾಸ್ಯ, ಲವ್ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.