- ಓವರ್ ಸೀಸ್ ವಿತರಣೆ ಹಕ್ಕು 105 ಕೋಟಿ ರೂ.ಗೆ ಮಾರಾಟ
- ಟಾಕ್ಸಿಕ್ ಚಿತ್ರದ ಮತ್ತೊಂದು ದಾಖಲೆ
- ರಿಲೀಸ್ ಗೆ ಮುನ್ನವೇ ಕ್ರೇಜ್ ಹೆಚ್ಚಿಸಿದ ಯಶ್ ಸಿನಿಮಾ
ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ವರ್ಲ್ಡ್ ‘ಟಾಕ್ಸಿಕ್: ದ ಫೇರಿಟೇಲ್ ಫಾರ್ ಗ್ರೋನಪ್ಸ್’ ಬಿಡುಗಡೆಗೆ ದಿನಗಣನೆ ಎಣಿಸುತ್ತಿದೆ. ಇದಕ್ಕೂ ಮುನ್ನವೇ ಚಿತ್ರ ವಿಶ್ವಾದ್ಯಂತ ಸದ್ದು ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹೊಸ ಹೆಗ್ಗುರುತುಗಳನ್ನು ಮೂಡಿಸುತ್ತಿದೆ. ಇತ್ತೀಚೆಗೆಷ್ಟೇ ‘ಟಾಕ್ಸಿಕ್’ ಚಿತ್ರದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣಾ ಹಕ್ಕನ್ನು ನಿರ್ಮಾಪಕ ದಿಲ್ ರಾಜು ಬರೋಬ್ಬರಿ 120 ಕೋಟಿ ರೂ. ತೆತ್ತು, ದಾಖಲೆ ಮೊತ್ತಕ್ಕೆ ಖರೀದಿಸಿದ್ದರು. ಆ ಮೂಲಕ ತೆಲುಗುಯೇತರ ಚಿತ್ರವೊಂದಕ್ಕೆ ಭರಿಸಿದ ಅತಿ ದೊಡ್ಡ ಮೊತ್ತ ಎಂಬ ದಾಖಲೆ ‘ಟಾಕ್ಸಿಕ್’ ಪಾಲಾಗಿತ್ತು. ಇದೀಗ ಓವರ್‌ಸೀಸ್ ವಿತರಣಾ ಹಕ್ಕುಗಳು ಇನ್ನೊಂದು ದಾಖಲೆ ಬರೆದಿವೆ. ಚಿತ್ರದ ಭಾರತೀಯ ಭಾಷೆಯ (ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ) ವಿದೇಶದ ವಿತರಣೆ ಹಕ್ಕುಗಳನ್ನು ಹಿಂದಿಯ ‘ಫಾರ್ಸ್ ಫಿಲಂಸ್’ ಖರೀದಿಸಿದೆ. ಅದಕ್ಕಾಗಿ ಸುಮಾರು 105 ಕೋಟಿ ರೂ. ನೀಡಲಾಗಿದೆ. ಒಪ್ಪಂದದಂತೆ ಫಾರ್ಸ್ ಫಿಲಂಸ್ ಇಂಗ್ಲೀಷ್ ಹೊರತುಪಡಿಸಿ, ವಿದೇಶದಲ್ಲಿ ಭಾರತೀಯ ಭಾಷೆಯಲ್ಲಿ ಸಿನಿಮಾ ವಿತರಣೆ ಮಾಡಲಿದೆ. ಇಷ್ಟು ದೊಡ್ಡ ಮೊತ್ತಕ್ಕೆ ವಿತರಣಾ ಹಕ್ಕು ಮಾರಾಟ ಆಗಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ‘ಕೆಜಿಎಫ್ ಚಾಪ್ಟರ್ 2’ ಬಳಿಕ ಯಶ್ ಜಾಗತಿಕ ಮಾರುಕಟ್ಟೆ ಕೂಡ ವೃದ್ಧಿಯಾಗಿದೆ.
ಈ ಹಿನ್ನೆಲೆಯಲ್ಲಿ ‘ಫಾರ್ಸ್ ಫಿಲಂಸ್’ ದಾಖಲೆ ಮೊತ್ತದಲ್ಲಿ ವಿತರಣೆ ಹಕ್ಕುಗಳನ್ನು ಖರೀದಿಸಿದೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಮೂಲಕ ಗಡಿ ಮೀರಿ ಕಥೆಯನ್ನು ಹೇಳುವ ಗುರಿ ನಮ್ಮದು. ಈ ಚಿತ್ರದ ಆಶಯವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಲು ಕೇಂದ್ರಬಿಂದುಗಳಾಗಿದ್ದೇವೆ. ಜಾಗತಿಕ ವಿತರಣೆ ಹಕ್ಕುಗಳನ್ನು ಫಾರ್ಸ್ ಫಿಲಂಸ್ ಖರೀದಿಸಿರುವುದು ಮೈಲಿಗಲ್ಲಾಗಲಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಸಿಇಒ ಆಹ್ಮದ್ ಗೋಲ್ಚಿನ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ನಲ್ಲಿ ಯಶ್ ಜತೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ತಾರಾಗಣದಲ್ಲಿದ್ದಾರೆ. ಕನ್ನಡ, ಇಂಗ್ಲೀಷ್, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ವಿಶ್ವಾದ್ಯಂತ ಹಲವು ಭಾಷೆಗಳಲ್ಲಿ ಸಿನಿಮಾ ಇದೇ ಮಾರ್ಚ್19ರಂದು ರಿಲೀಸ್ ಆಗಲಿದೆ.
‘ಟಾಕ್ಸಿಕ್’ ಚಿತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಲವು ಪಾಲುದಾರರ ಅಗತ್ಯವಿದೆ. ಇದೀಗ ‘ಫಾರ್ಸ್ ಫಿಲಂಸ್’ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮೊಂದಿಗೆ ಒಪ್ಪಂದ ಮಾಡಿರುವುದು ಹೊಸ ಹೆಗ್ಗುರುತು ಆಗಲಿದೆ. ಹಾಗೆಯೇ ಅವರ ಜತೆ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ವಿಷಯ. ಇದರಿಂದಾಗಿ ‘ಟಾಕ್ಸಿಕ್’ ವಿಶ್ವ ಸಿನಿಮಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಲಿದೆ.
ಸಾವಿರ ಕೋಟಿ ಗಳಿಕೆಯ ನಿರೀಕ್ಷೆ
‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ಹೆಚ್ಚು ಸದ್ದು ಮಾಡುತ್ತಿದ್ದು, ಸಾವಿರ ಕೋಟಿ ಗಳಿಸುವ ಮುನ್ಸೂಚನೆ ನೀಡಿದೆ. ಈಗಾಗಲೇ ತೆಲುಗು ಹಾಗೂ ಭಾರತೀಯ ಭಾಷೆಗಳ ವಿದೇಶಿ ವಿತರಣೆ ಹಕ್ಕುಗಳು ಸೇರಿ 225 ಕೋಟಿ ರೂ. ಗಳಿಕೆ ಮಾಡಿದೆ. ಇನ್ನು ಕನ್ನಡ, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ ಸೇರಿ ಜಾಗತಿಕ ಭಾಷೆಯ ವಿತರಣೆ ಹಕ್ಕುಗಳು ಸೇಲ್ ಆಗಬೇಕಿದೆ. ಅಲ್ಲದೇ ಆಡಿಯೋ, ಒಟಿಟಿ ಹಾಗೂ ಟಿವಿ ರೈಟ್ಸ್ ಸೇರಿ ರಿಲೀಸ್‌ಗೆ ಮುನ್ನವೇ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗುವ ನಿರೀಕ್ಷೆಯಿದೆ.