- ಮಾ.19ಕ್ಕೆ ಯಶ್ 'ಟಾಕ್ಸಿಕ್' ತೆರೆಗೆ ಬರಲು ಸಿದ್ಧ
- ಈಗಾಗಲೇ ಮೊದಲ ಟೀಸರ್ ಭಾರೀ ವಿವಾದ, ಟೀಕೆಗಳಿಗೆ ಗುರಿ
- ರಕ್ತಸಿಕ್ತ ದೃಶ್ಯಗಳು, ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರ!
- ಟೀಸರ್ನಲ್ಲಿ ಎಲ್ಲಾ ಓಕೆ ಆದರೆ ಅದೊಂದು ಮಾತ್ರ ಬೇಡವಾಗಿತ್ತು
ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಸಖತ್ ಜೋರಾಗಿದೆ. ಈಗಾಗಲೇ ಚಿತ್ರದ ಮೊದಲ ಟೀಸರ್ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಆದ ವಿವಾದಗಳು ಒಂದೆರೆಡಲ್ಲ. ಈಗ ಎರಡನೇ ಟೀಸರ್ ಹೊರಬಿದ್ದಿದ್ದು, ಚಿತ್ರದ ಮೇಲಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಕಿಂಗ್ ಸ್ಟಾರ್ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಟೀಸರ್ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಕಾನೂನು ದೂರುಗಳಿಗೂ ಕಾರಣವಾಯಿತು. ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿತು. ಈಗ ಎರಡನೇ ಟೀಸರ್ ಯಶ್ ಪಾತ್ರದ ಮೇಲೆ ಭಾರೀ ಕುತೂಹಲವನ್ನು ಕೆರಳಿಸಿದೆ. ಕಾರಣ, ಇದರಲ್ಲಿ ತೋರಿಸಲಾದ ಸ್ಟಾರ್ ನಟನ ದ್ವಿಪಾತ್ರ.
ಹಾಲಿವುಡ್ ರೇಂಜ್!
ಟೀಸರ್ನ ಆರಂಭದಲ್ಲೇ ರಕ್ತಸಿಕ್ತ ದೃಶ್ಯಗಳು ಮತ್ತು ಯಶ್ ಅವರ ರಗಡ್ ಲುಕ್ ಅನ್ನು ರಿವೀಲ್ ಮಾಡಿದೆ. ಇದರೊಟ್ಟಿಗೆ ದೊಡ್ಡ ಸಾಮ್ರಾಜ್ಯವನ್ನೇ ಆಳುವ ಕಿಲಾಡಿಯ ಪಾತ್ರದಲ್ಲಿ 'ರಾಯ' ಮಿಂಚಿದ್ದಾರೆ ಅನ್ನೋದು ಸ್ಪಷ್ಟ. ಹೆಚ್ಚಿನ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿರುವ ಟೀಸರ್ ನೋಡಿದರೆ, ಇದು ಹಾಲಿವುಡ್ಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಒತ್ತಿ ಹೇಳುವಂತಿದೆ.
ಇದು ಬೇಕಿತ್ತೇ?
ಹಸಿಬಿಸಿ ದೃಶ್ಯಗಳ ಜತೆಗೆ ಯಶ್ ಗಡ್ಡವಿಲ್ಲದೆ ಕಾಣಿಸಿಕೊಂಡಿರುವ ಪಾತ್ರ, ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಅವರದ್ದು ದ್ವಿಪಾತ್ರ ಎಂಬ ಸಂಗತಿಯನ್ನು ಖಚಿತ ಪಡಿಸಿದೆ. ಇದೆಲ್ಲ ಓಕೆ ಆದರೆ, ಟೀಸರ್ನ ಕೊನೆಯಲ್ಲಿ ಬರುವ ****** ಮ್ಯಾನರ್ಸ್ ಎಂಬ ಅಶ್ಲೀಲ ಪದ ನಿಜಕ್ಕೂ ಬೇಕಿತ್ತೇ? ಇದು ಅವಶ್ಯಕತೆಯೇ? ಅನ್ನೋ ಪ್ರಶ್ನೆ ಸದ್ಯ ನೋಡುಗರಲ್ಲಿ ಕಾಡತೊಡಗಿದೆ. ಇದು ಸಿನಿಮಾದಲ್ಲಿ ಹಲವೆಡೆ ಬಳಸಿದ್ದೇ ಆದರೆ, ಖಂಡಿತ ಚಿತ್ರಪ್ರೇಮಿಗಳು ಬೇಸರಕ್ಕೆ ಒಳಗಾಗೋದು ಖಚಿತ.
ಮಾ.19 ಡ್ಯಾಡಿ ಕಮ್ಸ್ ಹೋಮ್
2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ಗೆ ಸಜ್ಜಾಗಿರುವ 'ಟಾಕ್ಸಿಕ್' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್, ಅಕ್ಷಯ್ ಓಬ್ರಾಯ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).