ನಟ ಯಶ್​ಗೆ ಹುಟ್ಟುಹಬ್ಬ ಶುಭಕೋರಿದ ಸುದೀಪ್​​ 
ಸ್ಯಾಂಡಲ್‌ವುಡ್

ಟಾಕ್ಸಿಕ್​ ಟೀಸರ್ ನೋಡಿದ ಕಿಚ್ಚನಿಂದ ಅಚ್ಚರಿ ಹೇಳಿಕೆ! ನಟ ಯಶ್​ಗೆ ಹುಟ್ಟುಹಬ್ಬ ಶುಭಕೋರಿದ ಸುದೀಪ್​​! Toxic

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್​ ಸ್ಟಾರ್​ ಯಶ್​ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ
  • ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯು ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ
  • ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಯಶ್​ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ
  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕೂಡ ಯಶ್​ ಅವರಿಗೆ ಹುಟ್ಟುಹಬ್ಬ ಶುಭಕೋರಿದ್ದಾರೆ
ಬೆಂಗಳೂರು: ಕೆಜಿಎಫ್​ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ರಾಕಿಂಗ್​ ಸ್ಟಾರ್​ ಯಶ್​ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯು ನಟ ಯಶ್​​, ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದನ್ನು ಸ್ವತಃ ಯಶ್​ ಅವರೇ ತಿಳಿಸಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಯಶ್​ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ಯಶ್​ ಅವರಿಗೆ ಹುಟ್ಟುಹಬ್ಬ ಶುಭಕೋರಿ, ಇಂದು ಬಿಡುಗಡೆಯಾಗಿರುವ ಟಾಕ್ಸಿಕ್ ( Toxic )​ ಸಿನಿಮಾದಲ್ಲಿ ಯಶ್​ ಲುಕ್​ ಅನ್ನು ಕೊಂಡಿದ್ದಾರೆ.

ಕಿಚ್ಚ ಹೇಳಿದ್ದೇನು?

ನಟ ಯಶ್​ಗೆ ಹುಟ್ಟುಹಬ್ಬದ ಶುಭಾಶಯಗಳು. ಭಾರಿ ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಧೈರ್ಯಬೇಕು. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ. ನೀವು ನಿಮ್ಮ ಕಣ್ಣುಗಳನ್ನು ಅದರ ಮೇಲೆ ಇಟ್ಟಿದ್ದೀರಿ ಎಂದು ಎಕ್ಸ್​ ಖಾತೆಯಲ್ಲಿ ಸುದೀಪ್​ ಬರೆದುಕೊಂಡಿದ್ದಾರೆ. ಇಲ್ಲಿ ಕಿಚ್ಚನ ಮಾತಿನ ಅರ್ಥವೇನೆಂದರೆ, ಇಂದು ಬಿಡುಗಡೆಯಾದ ಟಾಕ್ಸಿಕ್​ ಟೀಸರ್​ ನೋಡಿರುವ ಕಿಚ್ಚ, ನಟ ಯಶ್ ಅವರು​ ಬೋಲ್ಡ್​ ಆಗಿ ನಟಿಸಿರುವುದನ್ನು ಮೆಚ್ಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಯಶ್​, ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಇಂತಹ ಪಾತ್ರಗಳನ್ನು ಮಾಡಲು ಒಂದು ಧೈರ್ಯಬೇಕು ಎನ್ನುವ ಅರ್ಥದಲ್ಲಿ ಕಿಚ್ಚ ಕೊಂಡಾಡಿದ್ದಾರೆ.
ಸಖತ್​ ಸದ್ದು ಮಾಡುತ್ತಿರುವ ಟಾಕ್ಸಿಕ್​ ಟೀಸರ್​
ಅಂದಹಾಗೆ, ಇಂದು ಬಿಡುಗಡೆಯಾಗಿರುವ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಸಂಚಲನ ಮೂಡಿಸಿದೆ. ಟೀಸರ್ ಮೂಲಕ ಯಶ್ ಅವರ ಪಾತ್ರದ ಹೆಸರನ್ನು 'ರಾಯ' ಎಂದು ಪರಿಚಯಿಸಲಾಗಿದೆ. ಈ ಮೊದಲಿನ ಪೋಸ್ಟರ್‌ಗಳಲ್ಲಿ ಕೇವಲ ಬೆನ್ನಿನ ಭಾಗ ಮಾತ್ರ ತೋರಿಸಲಾಗಿತ್ತು. ಈಗ ಯಶ್ ಅವರ ಪೂರ್ಣ ಖದರ್ ರಿವೀಲ್ ಆಗಿದೆ. ಯಶ್ ಅವರು ವಿಂಟೇಜ್ ಶೈಲಿಯ ಟಾಮಿ ಗನ್ ಹಿಡಿದು ವಿಲನ್‌ಗಳನ್ನು ಸದೆಬಡಿಯುವ ದೃಶ್ಯ ಫ್ಯಾನ್ಸ್‌ಗೆ ಭರ್ಜರಿ ಕಿಕ್ ನೀಡಿದೆ. ಅವರ ಸ್ಟೈಲ್ ಮತ್ತು ಗನ್ ಹಿಡಿದ ರೀತಿ ತುಂಬಾ ರಗಡ್ ಆಗಿದೆ.
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್​ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಟೀಸರ್​ನಲ್ಲಿ ಕೊನೆಯಲ್ಲಿ ಚಿತ್ರತಂಡ ಮತ್ತೊಮ್ಮೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಮಾರ್ಚ್ 19, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ, (ಏಜೆನ್ಸೀಸ್​).