ಟಾಕ್ಸಿಕ್ ಅಬ್ಬರಕ್ಕೆ ಕೌಂಟ್ಡೌನ್ ಆರಂಭ
- ಹೈ-ವೋಲ್ಟೇಜ್ ಪೋಸ್ಟರ್ ಬಿಡುಗಡೆ ಮಾಡಿ ಟಾಕ್ಸಿಕ್ ಸಿನಿಮಾ ತಂಡ
- ಈ ಹಿಂದೆ ಘೋಷಣೆ ಮಾಡಿದಂತೆ 2026, ಮಾರ್ಚ್ 19ರಂದೇ ಬಿಡುಗಡೆಯಾಗಲಿದೆ ಸಿನಿಮಾ
- ಟಾಕ್ಸಿಕ್ ಸಿನಿಮಾ ಕಣ್ತುಂಬಿಕೊಳ್ಳಲು ಇನ್ನೂ ಕೇವಲ 100 ದಿನಗಳು ಮಾತ್ರ ಬಾಕಿ
- ಯಶ್ ಹಂಚಿಕೊಂಡಿರುವ ಹೊಸ ಪೋಸ್ಟರ್ ನೋಡಿ ಅಭಿಮಾನಿಗಳು ಫುಲ್ ಖುಷ್
Toxic Toxic : ಬ್ಲಾಕ್ ಬಸ್ಟರ್ ಕೆಜಿಎಫ್ ಸರಣಿ ಚಿತ್ರಗಳೊಂದಿಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಭಾರಿ ಕ್ರೇಜ್ ಗಳಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಅವರ ಮುಂದಿನ ಚಿತ್ರದ ಮೇಲೆ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ಭಾರಿ ನಿರೀಕ್ಷೆ ಇದೆ. ಆದ್ದರಿಂದ, ಯಶ್ ಅವರ ಪ್ರತಿಯೊಂದು ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೊನೆಗೂ ಮಹತ್ವದ ಅಪ್ಡೇಟ್ ಒಂದು ಇಂದು ಹೊರಬಿದ್ದಿದೆ.
ಹೌದು, ಯಶ್ ಅವರು 'ಟಾಕ್ಸಿಕ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಮಲಯಾಳಂ ಚಿತ್ರರಂಗದ ಖ್ಯಾತ ಮಹಿಳಾ ನಿರ್ದೇಶಕಿ ಗೀತು ಮೋಹನ್ದಾಸ್ ಮತ್ತು ಯಶ್‌ರಂತಹ ಮಾಸ್ ಹೀರೋ ಜುಗಲ್ಬಂಧಿಯಲ್ಲಿ ಮೂಡಿಬರುತ್ತಿರುವ ಟಾಕ್ಸಿಕ್ ಸಿನಿಮಾ ಈಗಾಗಲೇ ಭಾರಿ ಹೈಪ್ ಸೃಷ್ಟಿ ಮಾಡಿದೆ.
ಟಾಕ್ಸಿಕ್ ಸಿನಿಮಾವನ್ನು ಪಿರಿಯಾಡಿಕ್ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಪ್ರಚಾರ ಮಾಡುತ್ತಿರುವುದರಿಂದ ಯಶ್ ಅವರ ಗ್ಯಾಂಗ್‌ಸ್ಟರ್ ಅವತಾರ ಪರದೆಯ ಮೇಲೆ ಹೇಗಿರುತ್ತದೆ ಎಂದು ನೋಡುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ, 'ಟಾಕ್ಸಿಕ್' ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ, ಅದೆಲ್ಲದಕ್ಕೂ ತೆರೆ ಎಳೆದಿರುವ ಯಶ್ ಹಾಗೂ ಚಿತ್ರತಂಡ ಇತ್ತೀಚೆಗೆ ಹೈ-ವೋಲ್ಟೇಜ್ ಪೋಸ್ಟರ್ ಬಿಡುಗಡೆ ಮಾಡಿ, ಈ ಹಿಂದೆ ಘೋಷಣೆ ಮಾಡಿದ್ದ ದಿನದಂದೇ ಬರುತ್ತಿದ್ದೇವೆ ಎಂಬ ಮುನ್ಸೂಚನೆಯನ್ನು ನೀಡಿದೆ.
ಈ ಚಿತ್ರ 2026, ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಈ ವರ್ಷದ ಮಾರ್ಚ್ 22ರಂದೇ ಬಿಡುಗಡೆ ದಿನಾಂಕವನ್ನು ಸಿನಿಮಾ ತಂಡ ಘೋಷಣೆ ಮಾಡಿತ್ತು. ಇದೀಗ ಹೊಸ ಪೋಸ್ಟರ್ ಹಂಚಿಕೊಂಡಿರುವ ಯಶ್, ಟಾಕ್ಸಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇನ್ನೂ ಕೇವಲ 100 ದಿನಗಳು ಮಾತ್ರ ಬಾಕಿ ಉಳಿದಿವೆ ಎಂದುಮ ಕೌಂಟ್ಡೌನ್ ಆರಂಭಿಸಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ಇನ್ನು ಟಾಕ್ಸಿಕ್ ಸಿನಿಮಾದ ಕ್ರೇಜ್‌ಗೆ ಅನುಗುಣವಾಗಿ ಬಹುದೊಡ್ಡ ತಾರಾಗಣವೂ ಇದೆ. ವಿಶೇಷವಾಗಿ, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿಯಂತಹ ಸ್ಟಾರ್ ನಾಯಕಿಯರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ಟಾಕ್ಸಿಕ್ ಸಿನಿಮಾದ ಖ್ಯಾತಿಯನ್ನು ಹೆಚ್ಚಿಸಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಯೋಜನೆಯು ಭಾರತೀಯ ಚಿತ್ರರಂಗದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ, 'ಟಾಕ್ಸಿಕ್' ಹೈಪ್ ಈಗ ಜಾಲತಾಣವನ್ನು ಅಲುಗಾಡಿಸುತ್ತಿದೆ.