- ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಟಾಕ್ಸಿಕ್ ಚಿತ್ರ ಮುಂದೂಡಿಕೆ
- ಚಿತ್ರತಂಡದ ಈ ನಿರ್ಧಾರವನ್ನು ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ ಬೆಂಬಲಿಸಿದ್ದಾರೆ
- ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದು ಎಲ್ಲರಿಗೂ ತಲುಪಬೇಕು
- ಜಗತ್ತು ಅಂಚಿನಲ್ಲಿರುವಾಗ, ಸಂಯಮವು ಪ್ರಚಾರಕ್ಕಿಂತ ಜೋರಾಗಿ ಮಾತನಾಡುತ್ತದೆ
Toxic: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿಗಳು ಮತ್ತು ಯುದ್ಧದ ಭೀತಿಯಿಂದಾಗಿ ನಟ ಯಶ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಅಧೀಕೃತವಾಗಿ ಮುಂದೂಡಲಾಗಿದೆ ಎಂದು ಚಿತ್ರ ತಂಡ ದೃಢೀಕರಿಸಿದ ನಂತರ, ಈ ನಿರ್ಧಾರವನ್ನು ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ ಬೆಂಬಲಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲೇನಿದೆ?
ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನ ಸಂಯೋಜಕ ವಿಶಾಲ್ ಮಿಶ್ರಾ ಚಿತ್ರತಂಡದ ನಡೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು, ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದು ಎಲ್ಲರಿಗೂ ತಲುಪಬೇಕು. ಆದರೆ ಜಗತ್ತು ಅಂಚಿನಲ್ಲಿರುವಾಗ, ಸಂಯಮವು ಪ್ರಚಾರಕ್ಕಿಂತ ಜೋರಾಗಿ ಮಾತನಾಡುತ್ತದೆ. ಹಾಗಾಗಿ ಬಿಡುಗಡೆಯಾಗುವವರೆಗೂ ತಬಾಹಿಯ ಧ್ವನಿಯನ್ನು ಆನಂದಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಬಿಡುಗಡೆ ಮುಂದೂಡಲು ಕಾರಣವೇನು?
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಏರುಪೇರು ಕಂಡುಬಂದಿದೆ. ಚಿತ್ರದ ಕೆಲವು ಸನ್ನಿವೇಶಗಳನ್ನು ಆ ಪ್ರದೇಶದಲ್ಲಿ ಚಿತ್ರೀಕರಿಸುವುದು ಅನಿವಾರ್ಯವಾಗಿತ್ತು. ಆದರೆ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ನಿರ್ಮಾಪಕರು ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ.
ಹೊಸ ಬಿಡುಗಡೆ ದಿನಾಂಕದ ಘೋಷಣೆ
ಈ ಹಿಂದೆ ಟಾಕಿಕ್ಸ್ ಚಿತ್ರವನ್ನು ಮಾರ್ಚ್ 19 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ನಿರ್ದೇಶಕರು ಹೊಸ ದಿನಾಂಕವನ್ನು ಘೋಷಿಸಿದ್ದಾರೆ. ಮೂಲಗಳ ಪ್ರಕಾರ, ಚಿತ್ರವು 3 ತಿಂಗಳು ಕಾಲ ವಿಶ್ರಾಂತಿ ಪಡೆದು ಜೂನ್ 4 ರಂದು ತೆರೆಯ ಮೇಲೆ ಅಬ್ಬರಿಸಲಿದೆ.
ತಂಡದ ಪೋಸ್ಟ್ನಲ್ಲೇನಿದೆ?
"ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್" ಕೇವಲ ಒಂದು ಸಿನಿಮಾವಲ್ಲ. ಇದು ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಾವು ಕಂಡ ಮಹತ್ವಾಕಾಂಕ್ಷೆಯ ಕನಸು. ಈ ಚಿತ್ರವನ್ನು ನೇರವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ನಮ್ಮ ನೆಲದ ಕಥೆಯನ್ನು ಪ್ರಪಂಚದಾದ್ಯಂತ ವೀಕ್ಷಕರೊಂದಿಗೆ ಬೆಸೆಯುವ ದೃಢ ಸಂಕಲ್ಪ ಹೊಂದಲಾಗಿದೆ.
ವರ್ಷಗಳ ಕಾಲ ಸಮರ್ಪಿತವಾಗಿ ನಾವು ಪಟ್ಟ ಶ್ರಮದ ಫಲವನ್ನು ಇದೇ ಮಾರ್ಚ್ 19 ರಂದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಉತ್ಸೂಹಕರಾಗಿದ್ದೆವು. ಆದರೆ, ಮಧ್ಯಪ್ರಾಚ್ಯದಲ್ಲಿ ಉಂಟಾದ ಅನಿಶ್ಚಿತ ಪರಿಸ್ಥಿತಿಯು ನಮಗೆ ಸವಾಲಾಗಿದೆ. ಆದರಿಂದ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಜೂನ್ 4 ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾ ಡ್ರಗ್ ಮಾಫಿಯಾ ಹಿನ್ನಲೆಯುಳ್ಳ ಆ್ಯಕ್ಷನ್ ಕಥೆಯಾಗಿದ್ದು, ಪ್ರಪಂಚದಾದ್ಯಂತ ವಿಶಾಲ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದೆ (ಏಜೆನ್ಸೀಸ್).