- ಕನ್ನಡ ಚಿತ್ರರಂಗದ ವಿಶಿಷ್ಠ ಕಲಾವಿದ ಟೈಗರ್ ಪ್ರಭಾಕರ್
- ಫೈಟರ್ ಆಗಿ ಬಂದು ಹಂತ ಹಂತವಾಗಿ ಬೆಳೆದ ಕಲಾವಿದ
- ನಟನ ಒಡನಾಟವನ್ನು ನೆನೆದ ಹಿರಿಯ ನಟ ಸುಂದರ್ ರಾಜ್
ಕನ್ನಡ ಚಿತ್ರರಂಗದ ವಿಶಿಷ್ಟ ಪ್ರತಿಭೆ ಪ್ರಭಾಕರ್. ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಬಂದ ಅವರು ಬಳಿಕ ವಿಲನ್, ಹೀರೋ ಆಗಿ ಮಿಂಚಿ ಟೈಗರ್ ಎಂದೇ ಪ್ರಸಿದ್ಧಿಯಾದವರು. ಇಂತಹ ಅಪರೂಪದ ಪ್ರತಿಭೆ ಟೈಗರ್ ಪ್ರಭಾಕರ್ ಅವರ 78ನೇ ಜಯಂತಿ. ಈ ಹಿನ್ನೆಲೆಯಲ್ಲಿ ಗೆಳೆಯ, ಒಡನಾಡಿ ಸುಂದರ್ ರಾಜ್ ನಟನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ.
ಕನ್ನಡ ಚಲನಚಿತ್ರರಂಗ ಕಂಡ ಅದ್ಭುತ ಕಲಾವಿದ ಟೈಗರ್ ಪ್ರಭಾಕರ್. ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಬಂದು ಬಳಿಕ ಹಂತ ಹಂತವಾಗಿ ಬೆಳೆದವರು. ವಿಲನ್, ಹೀರೋ, ಪೋಷಕ ಸೇರಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ಅಂದಿನ ಕಾಲದಲ್ಲಿ ಪ್ರಭಾಕರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆಂದರೆ, ಕೆಲವರು ಹೆದರುತ್ತಿದ್ದರು. ಅಂತಹ ಅಜಾನುಬಾಹು, ಆಳೆತ್ತರದ ವ್ಯಕ್ತಿ ನಮ್ಮ ಚಿತ್ರರಂಗದಲ್ಲಿ ಯಾರು ಇರಲಿಲ್ಲ. ಭಾರತೀಯ ಚಿತ್ರರಂಗದಲ್ಲಿಯೇ ಅಂತಹ ದೈತ್ಯ ಸಿಗುವುದು ವಿರಳ. ತೆಲುಗಿನಲ್ಲಿ ಶೆಟ್ಟಿ ಎಂಬ ಕಲಾವಿದರು ಇದ್ದರು. ಅವರನ್ನು ಹೊರತುಪಡಿಸಿದರೆ, ಪ್ರಭಾಕರ್ ಅವರೇ ದೈತ್ಯ ಕಲಾವಿದ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ್ದಾರೆ. ‘ಚಕ್ರವ್ಯೂಹ’ ಸಿನಿಮಾ ಬಳಿಕ ಪ್ರಭಾಕರ್ ಬದುಕು ಬದಲಾಗಿ, ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನಮಾನ ದೊರೆಯಿತು. ಅಲ್ಲಿಯವರೆಗೂ ವಿಲನ್ ಆಗಿದ್ದ ಅವರು ಬಳಿಕ ನಾಯಕ ನಟನಾದರು. ಅಂದಿನ ಕಾಲಘಟ್ಟದಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್ ಸೇರಿ ಹಲವು ನಟರ ಜತೆ ಕೆಲಸ ಮಾಡಿದ್ದ ಪ್ರಭಾಕರ್ ಆಗ ಅವರ ಸ್ಥಾನದ ಹತ್ತಿರಕ್ಕೆ ಬಂದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದರು. 1983ರಲ್ಲಿ ತೆರೆಕಂಡ ‘ಮುತ್ತೈದೆ ಭಾಗ್ಯ’ ಚಿತ್ರದಲ್ಲಿ ಮೊದಲ ಬಾರಿಗೆ ಅವರ ಜತೆ ನಟಿಸುವ ಅವಕಾಶ ದೊರೆಯಿತು. ಆ ಚಿತ್ರದಲ್ಲಿ ಪ್ರಭಾಕರ್ ತಂದೆ ಪಾತ್ರ ಮಾಡಿದ್ದರೆ, ನಾನು ಮಗನ ಪಾತ್ರ ಮಾಡಿದ್ದೆ. ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ನಿರ್ವಹಿಸಿದ್ದ ಪಾತ್ರವನ್ನು ಪ್ರಭಾಕರ್ ಮಾಡುತ್ತಾರೆ ಎಂದರೆ, ಅವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರ ಜತೆ ಏಳೆಂಟು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಜತೆಗೆ ಪ್ರಭಾಕರ್ ಕುಟುಂಬದ ಜತೆಗೂ ನಮ್ಮ ಕುಟುಂಬ ಒಡನಾಟವಿತ್ತು. ಕಾಲಿಗೆ ಆದ ಗಾಯದ ತೊಂದರೆಯಿಂದ ಅವರನ್ನು ಮಧ್ಯ ವಯಸ್ಸಿನಲ್ಲಿಯೇ ಕಳೆದುಕೊಳ್ಳಬೇಕಾಯಿತು. ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ, ಇತಿಹಾಸ ಸೃಷ್ಟಿಸಿ ಹೋದರು. ಒಂದು ಸಾರಿ ಡಾ.ರಾಜಕುಮಾರ್ ಅವರೇ ಪ್ರಭಾಕರ್ ನಟನೆ, ದೇಹದ ಬಗ್ಗೆ ಕೊಂಡಾಡಿದ್ದರು. ಪ್ರಭಾಕರ್ ಉತ್ತಮ ಫೈಟರ್ ಆಗಿದ್ದರು. ಯಾರಿಗೂ ಒಂಚೂರು ತೊಂದರೆಯಾಗದಂತೆ ಸಾಹಸ ನಿರ್ದೇಶನ ಮಾಡುತ್ತಿದ್ದರು. ಅದು ಅವರ ಕೌಶಲ್ಯ. ಇಂದು ಪುತ್ರ ವಿನೋದ್ ಅವರ ಲೆಗಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪ್ರಭಾಕರ್ ಕೊನೆಯ ದಿನಗಳವರೆಗೆ ಅವರ ಜತೆ ನಾನಿದ್ದೆ. ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಅಂಬರೀಷ್ ನನಗೆ ನೀಡಿದ್ದರು. ಕೊನೆಗೆ ಆಸ್ಪತ್ರೆಯ ಬಿಲ್ 80 ಸಾವಿರದಿಂದ 1 ಲಕ್ಷ ರೂ.ದವರೆಗೆ ಆಗಿತ್ತು. ಆಗ ಅಂಬರೀಷ್, ವಿಷ್ಣುವರ್ಧನ್ ಸೇರಿ ಚಿತ್ರರಂಗದ ಹಲವರು ಕೈಜೋಡಿಸಿ, ಆಸ್ಪತ್ರೆಯ ಬಿಲ್ ಪಾವತಿಸಿದ್ದೆವು. ಕೊನೆಗೆ ಹೊಸೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಂದು ಸೇರಿದ್ದ ಅಭಿಮಾನಿಗಳ ಸಂಖ್ಯೆಯೇ ಪ್ರಭಾಕರ್ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಂತಿತ್ತು.
ಅಜಾನುಬಾಹುವಾದರೂ, ಮುಗ್ಧ ಮನಸ್ಸು
ಪ್ರಭಾಕರ್ ದೈಹಿಕವಾಗಿ ದೈತ್ಯನಾಗಿ ಕಂಡರು, ಮನಸ್ಸು ಮುಗ್ಧವಾದುದು. ಮೈಸೂರಿನಲ್ಲಿ ಒಮ್ಮೆ ಶೂಟಿಂಗ್ ಮಾಡುತ್ತಿದ್ದೆವು. ಪ್ರಭಾಕರ್ ಬೆಳಗ್ಗೆಯೇ ಬಿರಿಯಾನಿ ತಂದು ನಮಗೆ ತಿನಿಸುತ್ತಿದ್ದರು. ಇನ್ನು ಆತನಿಂದ ಕಲಿತಿದ್ದು ತುಂಬಾ ಇದೆ. ಯಾವ ಗಾಳಿಸುದ್ದಿಗೂ ಕಿವಿಗೊಡುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸವಾಯಿತು. ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಿದ್ದ. ಸರಿಗಮ ವಿಜಿ ಅಂತಹವರು ಬೆಳೆದಿದ್ದು ಪ್ರಭಾಕರ್‌ನಿಂದ. ಇಂತಹ ವ್ಯಕ್ತಿತ್ವವನ್ನು ನಾವು ಪ್ರತಿದಿನ ಸ್ಮರಿಸಬೇಕು.