ಸ್ಯಾಂಡಲ್‌ವುಡ್‌ನ 3 ಬಹುನಿರೀಕ್ಷಿತ ಚಿತ್ರಗಳು
- ಡಿಸೆಂಬರ್ನಲ್ಲೇ ಬಾಕ್ಸ್ ಆಫೀಸ್ ಕ್ಲ್ಯಾಶ್ ಜೋರು
- ಒಂದಲ್ಲ, ಎರಡಲ್ಲ, ಮೂರು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ
- ಬಾಕ್ಸ್ ಆಫೀಸ್ ಜಟಾಪಟಿಗೆ ಮಾರ್ಕ್, 45 ಮತ್ತು ಡೆವಿಲ್ ಸಜ್ಜು
ಬೆಂಗಳೂರು: ವರ್ಷದ ಕೊನೆಗೆ ಕಡೆಗೂ ಬಂದು ತಲುಪಿದ್ದೇವೆ. ಇನ್ನೇನು ಹೊಸ ವರ್ಷ, ಹೊಸ ಹರುಷಕ್ಕೆ ಕೆಲವೇ ದಿನಗಳು ಬಾಕಿ. ಹೀಗಿರುವಾಗ, ಸಿನಿಪ್ರಿಯರಿಗೆ ಒಂದಷ್ಟು ಸಿನಿಮಾಗಳು ಮಾತ್ರ ಈ ವರ್ಷ ಅದ್ಭುತ ಮನರಂಜನೆ ಹಾಗೂ ಸಂತಸ ನೀಡಿವೆ. ಈಗಾಗಲೇ ಅನೇಕ ಚಿತ್ರರಸಿಕರು, 2025ರಲ್ಲಿ ತಾವು ಮೆಚ್ಚಿದ ಚಿತ್ರಗಳ ಪಟ್ಟಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಆ ಸಿನಿಮಾಗಳ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಹರಡಿದ್ದಾರೆ. ಈ ಪೈಕಿ ಉಳಿದಿರುವ ಕೆಲವೇ ದಿನಗಳಲ್ಲಿ ಇನ್ನಷ್ಟು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.
ಸಾಮಾನ್ಯವಾಗಿ, ಹೊಸಬರ ತಂಡ ಅಥವಾ ಹೊಸ ಕಲಾವಿದರ ಚಿತ್ರಗಳಿಗಿಂತ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಕಾತರ, ಕುತೂಹಲ ವ್ಯಕ್ತಪಡಿಸುವ ಸಿನಿರಸಿಕರು, ಕನ್ನಡ ಚಿತ್ರರಂಗದ ಒಂದಷ್ಟು ಬಹುನಿರೀಕ್ಷಿತ ಚಿತ್ರಗಳ ಮೇಲೆ ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ. ಪ್ರತಿಬಾರಿ ಇತರೆ ಭಾಷೆಯ ಚಿತ್ರೋದ್ಯಮದ ಜತೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಕೊಡುತ್ತಿದ್ದ ಸ್ಯಾಂಡಲ್‌ವುಡ್ ಸಿನಿಮಾಗಳು ಇದೀಗ ಕನ್ನಡ ಚಿತ್ರರಂಗದ ಚಿತ್ರಗಳೊಂದಿಗೆ ಭಾರೀ ಜಿದ್ದಾಜಿದ್ದಿ ನಡೆಸುವ ಸಮಯ ಎದುರಾಗಿದೆ. ಅದೂ ವರ್ಷದ ಕೊನೆಯಲ್ಲಿ.
ಸ್ಟಾರ್ ಹೀರೋಗಳ ಸಿನಿಮಾಗಳು ಒಂದೇ ತಿಂಗಳಲ್ಲಿ ಒಟ್ಟೊಟ್ಟಿಗೆ ರಿಲೀಸ್ ಆದರೆ ಪ್ರೇಕ್ಷಕರ ಸ್ಥಿತಿ ಏನು? ಯಾವುದು ನೋಡಬೇಕು? ಯಾವುದನ್ನು ಬಿಟ್ಟು ಸುಮ್ಮನಾಗಬೇಕು ಎಂಬುದು ನಿಜಕ್ಕೂ ತಿಳಿಯದು. ಪ್ರಸ್ತುತ, ಸ್ಯಾಂಡಲ್‌ವುಡ್‌ನಲ್ಲೂ ಇದೇ ಆಗುತ್ತಿದೆ. ಒಬ್ಬರಲ್ಲ, ಇಬ್ಬರಲ್ಲ, ಕನ್ನಡದ ಟಾಪ್ ನಟರ 3 ಸಿನಿಮಾಗಳು ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣಲಿದೆ.
'ದಿ ಡೆವಿಲ್'
ಸದ್ಯ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು. ಇದಕ್ಕೆ ದರ್ಶನ್ ಫ್ಯಾನ್ಸ್ ವತಿಯಿಂದ ಉತ್ತಮ ಪ್ರತಿಕ್ರಿಯೆಗಳು ಹರಿದುಬಂದಿದ್ದು, ಚಿತ್ರದ ಗೆಲುವಿನ ಬಗ್ಗೆ ಈಗಾಗಲೇ ಗಟ್ಟಿಯಾದ ಮುನ್ಸೂಚನೆ ಅವರ ಅಭಿಮಾನಿ ಬಳಗದಿಂದ ಸಿಕ್ಕಿದೆ.
'45'
ಇದರೊಟ್ಟಿಗೆ ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಬಹುತಾರಾಗಣ ಚಿತ್ರ '45' ಇದೇ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.
ಸುದೀಪ್ 'ಮಾರ್ಕ್'
ಇನ್ನು ಸ್ಯಾಂಡಲ್‌ವುಡ್‌ನ ಬಾದ್ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ಮಾಸ್ ಲುಕ್ ಕಣ್ತುಂಬಿಕೊಳ್ಳಲು ಮತ್ತೊಮ್ಮೆ ಚಿತ್ರಪ್ರೇಮಿಗಳು ತುದಿಗಾಲಿನಲ್ಲಿದ್ದಾರೆ. ಒಂದೆಡೆ, ತ್ರಿಮೂರ್ತಿಗಳ '45' ಡಿ.25ಕ್ಕೆ ತೆರೆಕಂಡರೆ, ಅದೇ ದಿನದಂದು ಸುದೀಪ್ ಅಭಿನಯದ 'ಮಾರ್ಕ್' ಕೂಡ ರಿಲೀಸ್ ಆಗುತ್ತಿದೆ. ಇದು ಸ್ಯಾಂಡಲ್‌ವುಡ್ ಸ್ಟಾರ್ಗಳ ಕ್ಲ್ಯಾಶ್ಗೆ ಕಾರಣವಾಗಲಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಸುದೀಪ್ ಅವರ 'ಮ್ಯಾಕ್ಸ್' ಮತ್ತು ಉಪೇಂದ್ರ ಅವರ 'UI' ಚಿತ್ರಗಳು ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿಗೆ ಇಳಿದಿತ್ತು. ಆದರೀಗ, ಒಂದೇ ದಿನದಂದು ಇವರಿಬ್ಬರ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿರುವುದು ಮತ್ತೊಮ್ಮೆ ಬಾಕ್ಸ್ ಆಫೀಸ್ ಅನ್ನು ಉಡಾಯಿಸಲಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ.