ಬೆಂಗಳೂರು : ಕನ್ನಡದ ‘ಪ್ರೇಮದ ಊರಲಿ’, ಪ್ಯಾನ್ ವರ್ಲ್ಡ್ ‘ರಾಮಾಯಣ’ ಚಿತ್ರಗಳ ಮೂಲಕ ಪ್ರೇಕ್ಷಕ ಮತ್ತೆ ಥಿಯೇಟರ್ನತ್ತ ಮುಖ ಮಾಡಿದ್ದಾನೆ. ಹೀಗಾಗಿ ಸ್ಯಾಂಡಲ್ವುಡ್ನಲ್ಲಿ ಸಿನಿ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಎರಡು ಸಿನಿಮಾಗಳು ಕೊಟ್ಟ ದೊಡ್ಡ ಗೆಲುವಿನ ನೆರಳಿನಲ್ಲಿಯೇ ಹಲವು ತಂಡಗಳು ಇದೀಗ ಅದೃಷ್ಟ ಪರೀಕ್ಷೆಗಿಳಿದು, ರಿಲೀಸ್ಗೆ ಮುಂದಾಗುತ್ತಿವೆ. ಈ ವಾರ ಒಟ್ಟು ಏಳು ಭಿನ್ನ, ವಿಭಿನ್ನ ಜಾನರ್ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಮೂಲಕ ಸ್ಯಾಂಡಲ್ವುಡ್ ದ್ವಿಶತಕ ಬಾರಿಸುತ್ತಿದೆ. ಈ ವರ್ಷದ 11 ತಿಂಗಳಲ್ಲಿ ಒಟ್ಟು 189 ಸಿನಿಮಾಗಳು ನೇರ ಚಿತ್ರಮಂದಿರದಲ್ಲಿ ಬಿಡುಗಡೆಯಾದರೆ, 12 ಚಿತ್ರಗಳು ಒಟಿಟಿಯಲ್ಲಿ ತೆರೆಕಂಡಿವೆ. ಈ ವಾರದ ಏಳು ಸೇರಿಸಿದರೆ ಒಟ್ಟು ಈವರೆಗೆ 208 ಸಿನಿಮಾಗಳು ಬಿಡುಗಡೆಯಾದಂತಾಗುತ್ತದೆ. ಇದೇ ಅವಧಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಸಿನಿಮಾಗಳ ರಿಲೀಸ್ ಸಂಖ್ಯೆ ಕಡಿಮೆಯಾಗಿದ್ದರೂ ಸಕ್ಸಸ್ ರೇಟ್ ಹೆಚ್ಚಾಗಿದೆ. ‘ಟಾಕ್ಸಿಕ್’, ‘ಪ್ರೇಮದ ಊರಲಿ’, ‘ಲವ್ ಮಾಕ್ಟೇಲ್ 3’, ‘ಸಿಟಿಲೈಟ್ಸ್’ ಸೇರಿ ಹಲವು ಚಿತ್ರಗಳು ಥಿಯೇಟರ್ನಲ್ಲಿ ಗೆಲ್ಲುವ ಜತೆಗೆ ಗಲ್ಲಾಪೆಟ್ಟಿಗೆ ತುಂಬಿಸಿವೆ.
ಸಿಂಪಲ್ ಕಥೆಗಳ ಮೂಲಕವೇ ಹೆಸರುವಾಸಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ ಈ ಬಾರಿ ‘ಲಂಬೋದರ 2.0’ ಚಿತ್ರದ ಮೂಲಕ ವಿಭಿನ್ನ ಕಥೆ ಹೇಳಲು ಮುಂದಾಗುತ್ತಿದ್ದಾರೆ. ಮನುಷ್ಯನ ಜೀವನದ ಮೇಲೆ ಆಧುನಿಕ ತಂತ್ರಜ್ಞಾನಗಳು ಯಾವ ರೀತಿಯಾಗಿ ಪರಿಣಾಮ ಬೀರುತ್ತಿವೆ ಎಂಬುದರ ಸುತ್ತ ಸುತ್ತುವ ಕಥೆಯಾಗಿದೆ. ಉದ್ಯಮಿ ಅನಿಲ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಿತರಾಗುತ್ತಿದ್ದಾರೆ. ಅವರಿಗೆ ಬಾಲಿವುಡ್ನ ಸಾಚಿ ಬಿಂದ್ರಾ ಜೋಡಿಯಾಗಿದ್ದಾರೆ. ಹಿಂದಿ ನಟ ಕುನಾಲ್ ಕಪೂರ್, ಮೇಘನಾ ಗಾಂವ್ಕರ್ ಕಲಾಬಳಗದಲ್ಲಿದ್ದಾರೆ.
ಕನ್ನಡದ ಉದಯನ್ಮೋಖ ನಟ-ನಟಿಯರ ಎರಡು ಸಿನಿಮಾಗಳು ಈ ವಾರ ತೆರೆ ಕಾಣುತ್ತಿರುವುದು ವಿಶೇಷ. ಮನೋಜ್ ಪಿ. ನಡಲುಮನೆ ನಿರ್ದೇಶನದ ರಾಹುಲ್ ಅರ್ಕಟ್, ಕಾಶಿಮಾ ಅಭಿನಯದ ‘ನೀ ನಂಗೆ ಅಲ್ಲವಾ’ ಮತ್ತು ಶಶಿಕುಮಾರ್ ಪುತ್ರ ಆದಿತ್ಯ, ಸಮೀಕ್ಷಾ ನಟನೆಯ ‘ರಾಶಿ’ ಚಿತ್ರಗಳು ಇಂದೇ ರಿಲೀಸ್ ಆಗುತ್ತಿವೆ. ಈ ಎರಡು ಚಿತ್ರಗಳು ಹಾಡು, ಟೀಸರ್, ಟ್ರೇಲರ್ ಹಾಗೂ ಕಲಾಬಳಗದ ಮೂಲಕವೇ ಸದ್ದು ಮಾಡಿವೆ.
ಗುರುರಾಜ್ ರಾವ್ ನಿರ್ದೇಶನದ ಭಕ್ತಿ ಪ್ರದಾನ ಚಿತ್ರ ‘ಅಮಲಾಮೃತ’. ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವ ವೃತ್ತಾಂತದ ಕಥೆಯಾಗಿದ್ದು, ಕಲಾವಿದರಾದ ಗೋವಿಂದ ರಾಮರಾವ್, ರಮಾ ವಿಟ್ಠಲ, ದೀಪಕ್ ತಾರಾಬಳಗದಲ್ಲಿದ್ದಾರೆ. ಈ ಚಿತ್ರದ ಜತೆಗೆ ಹೊಸಬರ ‘ನಾಗುಗೆ ವಧು ಬೇಕಾಗಿದೆ’, ‘ಜನರಿಂದ ನಾನು ಮೇಲೆ ಬಂದೆ’, ಆ್ಯಕ್ಷನ್-ಥ್ರಿಲ್ಲರ್ ‘ಕಲುಷ’ ಕೂಡ ಇಂದೇ ಬಿಡುಗಡೆಯಾಗುತ್ತಿವೆ