ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್  
ಸ್ಯಾಂಡಲ್‌ವುಡ್

ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರಿನ ಬಗ್ಗೆ ಕೇಳಿದ್ದಕ್ಕೆ ನಟ ಸುದೀಪ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು...Kichcha Sudeepa

ಪ್ರಮುಖ ಮುಖ್ಯಾಂಶಗಳು

  • ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ
  • ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಿಚ್ಚ ಇಂದು ಅಭಿಮಾನಿಗಳ ಜತೆ ಕುಳಿತು ಮಾರ್ಕ್​ ಚಿತ್ರ ವೀಕ್ಷಿಸಿದರು
  • ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿರುವ ಸಂತೋಷ್​ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿದರು
  • ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕುಳಿತು ನೋಡುವುದೇ ಒಂದು ರೀತಿಯ ಮಜಾ ಎಂದ ಕಿಚ್ಚ
ಬೆಂಗಳೂರು: 2025ರ ವರ್ಷದ ಕೊನೆಯಲ್ಲಿ ರಿಲೀಸ್​ ಆದ ಕಿಚ್ಚ ಸುದೀಪ್ ( Kichcha Sudeepa ) ನಟನೆಯ ಮಾರ್ಕ್ ಸಿನಿಮಾ ಮೊದಲ ವಾರಾಂತ್ಯದಲ್ಲಿ 35 ಕೋಟಿ ಗಳಿಕೆ ಕಾಣುವ ಮೂಲಕ ಕ್ರಿಸ್‌ಮಸ್ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕ್ರಿಸ್​ಮಸ್​ಗೆ‌ ಬಿಡುಗಡೆಯಾದ ಮಾರ್ಕ್​ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸುದೀಪ್​ ಇಂದು ಅಭಿಮಾನಿಗಳ ಜತೆ ಕುಳಿತು ಮಾರ್ಕ್​ ಚಿತ್ರವನ್ನು ವೀಕ್ಷಣೆ ಮಾಡಿದರು.
ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿರುವ ಸಂತೋಷ್​ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸುದೀಪ್​ ಅಭಿಮಾನಿಗಳ ಜತೆ ಕುಳಿತು ಸಿನಿಮಾ ವೀಕ್ಷಣೆ ಮಾಡಿದರು. ಈ ವೇಳೆ ನಿರ್ದೇಶಕ ವಿಜಯ್​ ಕಾರ್ತಿಕೇಯ ಮತ್ತು ಸಿನಿಮಾದ ಸಹ ಕಲಾವಿದರು ಕೂಡ ಕಿಚ್ಚನಿಗೆ ಸಾಥ್​ ನೀಡಿದರು.
ಅಭಿಮಾನಿಗಳ ಜತೆ ಕುಳಿತು ಮಾರ್ಕ್ ಸಿನಿಮಾ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಸುದೀಪ್, ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕುಳಿತು ನೋಡುವುದೇ ಒಂದು ರೀತಿಯ ಮಜಾ ಎಂದರು. ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳನ್ನು ಕೇಳಿಸಿಕೊಳ್ಳುವುದು ಸಖತ್​ ಖುಷಿ ಕೊಡುತ್ತೆ ಎಂದರು. ಅಲ್ಲದೆ, ಮುಂದಿನ ಕರ್ನಾಟಕ ಪ್ರವಾಸ ಮಾಡಲಿದ್ದೇವೆ. ಈ ಪ್ರವಾಸ ವಿಜಯ ಯಾತ್ರೆಯಲ್ಲ, ಪೈರಸಿಗೆ ವಿರುದ್ಧವಾಗಿ ನಮ್ಮ ಅಭಿಮಾನಿಗಳು ನಿಂತುಕೊಂಡಿದ್ದಕ್ಕೆ, ಅವರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಪ್ರವಾಸ ಮಾಡುತ್ತೇವೆ ಎಂದು ಸುದೀಪ್​ ಹೇಳಿದರು.
ನಾನು ಅಂದು ಹುಬ್ಬಳ್ಳಿ ವೇದಿಕೆ ಮೇಲೆ ಹೇಳಿದ್ದು ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ನಾನು ಹೇಳಿದ್ದು ಪೈರಸಿ ವಿರುದ್ಧದ ಯುದ್ಧ ಬಗ್ಗೆ ಎಂದರು. ಸಾವಿರಾರು ಪೈರಸಿ ಲಿಂಕ್​ಗಳನ್ನು ಡಿಲೀಟ್​ ಮಾಡಿದ್ದೇವೆ. ನಾನು ಹೇಳಿದ ಮಾತು ಈಗ ಅನೇಕರಿಗೆ ಅರಿವಾಗಿದ್ದು, ಪೈರಸಿ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ಹುಬ್ಬಳ್ಳಿ ವೇದಿಕೆ ಮೇಲೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಮತ್ತು ಯಾರನ್ನೂ ಪ್ರಚೋದಿಸುವ ಉದ್ದೇಶವೂ ನನಗೆ ಇರಲಿಲ್ಲ. ಕೆಲವರು ನನ್ನ ಸಿನಿಮಾ ವಿರುದ್ಧ ಪೈರಸಿ ಯುದ್ಧ ಘೋಷಣೆ ಮಾಡಿದ್ದರು. ಅದನ್ನು ತಡೆಯಬೇಕಾದದ್ದು ನನ್ನು ಕರ್ತವ್ಯ. ನಾನು ನೀಡಿದ ಹೇಳಿಕೆಗಳಿಗೆ ನಿಮ್ಮಗಳ ಮುಂದೆಯೂ ನಾನು ಸ್ಪಷ್ಟನೆ ನೀಡಿದ್ದೇನೆ. ಮಾಧ್ಯಮ ಸ್ನೇಹಿತರಾದ ನೀವು ಕೇಳಿದ್ದಕ್ಕೆ ನಾನು ಉತ್ತರ ಕೊಟ್ಟೆ ಹೊರತು ಬೇರೆ ಯಾರೋ ಕೇಳಿದರು ಅಂತ ನಾನು ಸ್ಪಷ್ಟನೆ ನೀಡಲಿಲ್ಲ ಎಂದು ಸುದೀಪ್ ಹೇಳಿದರು.
ಪೈರಸಿ ವಿಚಾರವಾಗಿ ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಾನು ಸರ್ಕಾರವನ್ನೂ ಭೇಟಿ ಮಾಡಿದ್ದೇನೆ. ಚಿತ್ರರಂಗಕ್ಕೆ ಒಳ್ಳೆಯದಾಗಬೇಕೆಂಬ ಭಾವನೆ ನನ್ನಲ್ಲಿದೆ. ಸರ್ಕಾರದ ಕಡೆಯಿಂದಲೂ ಒಂದೊಳ್ಳೆ ಕೆಲಸ ನಡೆಯುತ್ತದೆ ಎಂದು ನಾನು ಭರವಸೆ ನೀಡಬಲ್ಲೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಅಂದು ಹುಬ್ಬಳ್ಳಿಯಲ್ಲಿ ನಾನು ಯಾವುದೇ ಆವೇಶದಿಂದ ಮಾತನಾಡಿದ್ದಲ್ಲ. ಆದರೆ, ನನ್ನ ಹೇಳಿಕೆಯಿಂದ ಏನೆಲ್ಲ ಆಯಿತು ಅಂತ ನೀವೇ ನೋಡಿದ್ದೀರಿ ಎಂದು ಸುದೀಪ್​ ತಿಳಿಸಿದರು.
ಪೊಲೀಸ್ ಆಯುಕ್ತರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ಸಲ್ಲಿಸಿದ ವಿಚಾರವಾಗಿ ಮಾತನಾಡಿದ ಸುದೀಪ್​, ನನ್ನ ಜೀವನದಲ್ಲಿ ಬೇರೆಯವರ ಬಗ್ಗೆ ಮಾತಾಡಲ್ಲ. ಏನಿದ್ರು ನನ್ನ ಬಗ್ಗೆ ಮಾತ್ರ ಮಾತಾಡ್ತೇನೆ ಎಂದರು. ಮಗಳು ಸಾನ್ವಿಗೆ ಬಾಡಿ ಶೇಮಿಂಗ್ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಿಚ್ಚ, ನನ್ನ ಮಗಳು ರಿಯಾಕ್ಟ್ ಮಾಡಿದ್ದು ತಪ್ಪಾ ಎಂದು ಪ್ರಶ್ನೆ ಮಾಡಿದರು. ನಾನು ಹೇಳಿಕೆ ಕೊಡೋಕೂ ಮೊದ್ಲೇ ನನ್ನ ಮಗಳು ಹೇಳ್ಬೇಕಿತ್ತಾ? ಹೆಣ್ಣಾಗಿ ಏನು ಮಾಡ್ಬೇಕಿತ್ತು ನನ್ನ ಮಗಳು ಕೂಡ ಅದನ್ನೇ ಮಾಡಿದ್ದಾಳೆ ಎಂದರು.
ಇದೇ ಸಂದರ್ಭದಲ್ಲಿ ವಿಜಯ್​ ಕಾರ್ತಿಕೇಯ ಜತೆ ಮೂರನೇ ಸಿನಿಮಾ ಮಾಡುವುದಾಗಿಯೂ ತಿಳಿಸಿದರು. ಅಲ್ಲದೆ, ಹೊಸ ವರ್ಷ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದರು.