- ಒಂದು ಭರವಸೆ ಮೂಡಿಸುವ ಕಥೆಯನ್ನು ಸಹನೆಗೆ ಒಡ್ಡುವ ಪರೀಕ್ಷೆ'ಯನ್ನಾಗಿ ಹೇಗೆ ಪರಿವರ್ತಿಸಿದೆ
- ಇದೊಂದು ನೀರಸ ವಿಷಯದ ಪಠ್ಯಪುಸ್ತಕವನ್ನು ಓದಿದಂತೆ ಇತ್ತು. ಅಲ್ಲಿನ ಅಧ್ಯಾಯಗಳು ಮುಗಿಯುವುದೇ ಇಲ್ಲ
- ಸಿನಿಮಾ ನೋಡಲೇಬೇಕು ಎಂದಿದ್ದರೆ ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಬೇಡಿ
- ನಿರ್ದೇಶನ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ ಮತ್ತು ನಟನೆ ಎಲ್ಲವೂ ತೀರಾ ಕಳಪೆಯಾಗಿವೆ
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ, ಮೋಹಕ ತಾರೆ (Ramya) ರಮ್ಯಾ ಇತ್ತೀಚಿಗೆ ಬಿಡುಗಡೆಯಾದ ಬಹುನಿರೀಕ್ಷಿತ ಚಿತ್ರ ಧರಂಧರ್ 2 ವೀಕ್ಷಿಸಿ, ಖಾರವಾದ ಪ್ರತಿಕ್ರಿಯೆ ನೀಡಿದ್ದು, ಈ ಚಿತ್ರವು ನಿರೀಕ್ಷಿತ ಮಟ್ಟವನ್ನು ತಲುಪುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಹನೆಯ ಪರೀಕ್ಷೆ ಅಂದಿದ್ದೇಕೆ ನಟಿ?
ಈಗಷ್ಟೇ 'ಧುರಂಧರ್ 2' ಸಿನಿಮಾ ನೋಡಿದೆ. ಅಬ್ಬಾ! ಒಂದು ಭರವಸೆ ಮೂಡಿಸುವ ಕಥೆಯನ್ನು ಸಹನೆಗೆ ಒಡ್ಡುವ ಪರೀಕ್ಷೆ'ಯನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಈ ಸಿನಿಮಾವೇ ಒಂದು ಉದಾಹರಣೆ.
ಇದೊಂದು ನೀರಸ ವಿಷಯದ ಪಠ್ಯಪುಸ್ತಕವನ್ನು ಓದಿದಂತೆ ಇತ್ತು. ಅಲ್ಲಿನ ಅಧ್ಯಾಯಗಳು ಮುಗಿಯುವುದೇ ಇಲ್ಲ! ಒಂದು ಹಂತದಲ್ಲಿ ನಿಮ್ಮ ಮೆದುಳು ಸೋತು ಸುಮ್ಮನಾಗುತ್ತದೆ. ಕಣ್ಣು ಮುಂದೆ ನಡೆಯುತ್ತಿರುವ ಆ ದೌರ್ಜನ್ಯವನ್ನು ನೋಡಿ, ನಿಮ್ಮ ಜೀವನದ ನಿರ್ಧಾರಗಳ ಬಗ್ಗೆ ನಿಮಗೇ ನಗು ಬರಲು ಶುರುವಾಗುತ್ತದೆ.
ನಿಮಗೆ ಈ ಸಿನಿಮಾ ನೋಡಲೇಬೇಕು ಎಂದಿದ್ದರೆ, ನಿಮ್ಮ ಮೊಬೈಲ್ಗಳಲ್ಲೇ ನೋಡಿ. ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಬೇಡಿ. ಈ ಸಿನಿಮಾ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಮಾತ್ರ ಸೀಮಿತವಾದದ್ದು. ಬೋರ್ ಆದಾಗ ಫೋನ್ ಸ್ಕ್ರಾಲ್ ಮಾಡಬಹುದು ಅಥವಾ ಒಂದು ಕ್ಲಿಕ್ ಮೂಲಕ ಈ 'ಚಿತ್ರಹಿಂಸೆ'ಯಿಂದ ತಪ್ಪಿಸಿಕೊಳ್ಳಬಹುದು.
ನಿರ್ದೇಶನ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ ಮತ್ತು ನಟನೆ ಎಲ್ಲವೂ ತೀರಾ ಕಳಪೆಯಾಗಿವೆ. ಮಾರ್ಚ್ 19 ರ ರಿಲೀಸ್ ಡೆಡ್‌ಲೈನ್ ಹತ್ತಿರ ಬರುತ್ತಿದೆ ಎಂದು ಇವರಿಗೆ ಯಾರೂ ಹೇಳಲೇ ಇಲ್ಲವೇನೋ ಅನ್ನಿಸುತ್ತದೆ. ಅಥವಾ ಎಲ್ಲವೂ ಗೊತ್ತಿದ್ದೂ "ಹೂಂ, ಪರ್ಫೆಕ್ಟ್ ಆಗಿದೆ, ಬಿಡುಗಡೆ ಮಾಡಿಬಿಡಿ" ಎಂದು ಅಂದುಕೊಂಡಂತಿದೆ.
ಧುರಂಧರ್ ಭಾಗ 1ರಲ್ಲಿ ಜನ ಶಿಳ್ಳೆ ಹೊಡೆಯುತ್ತಿದ್ದರು, ಚಪ್ಪಾಳೆ ತಟ್ಟುತ್ತಾ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರು. ಅಲ್ಲಿ ಒಂದು ಎನರ್ಜಿ ಇತ್ತು. ಆದರೆ ಈ ಎರಡನೇ ಭಾಗದಲ್ಲಿ ಪ್ರೇಕ್ಷಕರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಥಿಯೇಟರ್‌ನಲ್ಲಿದ್ದ ಜನರ ಸಾಮೂಹಿಕ ನಿರಾಸೆಯನ್ನು ನೀವು ಅಲ್ಲಿ ಸ್ಪಷ್ಟವಾಗಿ ಅನುಭವಿಸಬಹುದಿತ್ತು.
ಇನ್ನು, ರಣವೀರ್ ಸಿಂಗ್ ಈ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದಾರೆ ಎನ್ನುವವರಿಗೆ ನನ್ನದೊಂದು ಪ್ರಶ್ನೆ ಅಷ್ಟಕ್ಕೂ ನಟ ಹೊತ್ತಿದ್ದೇನು? ಏಕೆಂದರೆ ನನಗೆ ಅಲ್ಲಿ ಕಂಡಿದ್ದು ಬರೀ ಅವರ 'ಕೂದಲು' ಮಾತ್ರ! ಮೊದಲ ಭಾಗದಲ್ಲಿ ಅವರ ಕೂದಲಿಗೆ ಒಂದು ವ್ಯಕ್ತಿತ್ವ ಇತ್ತು, ಗಾಂಭೀರ್ಯ ಇತ್ತು. ಆದರೆ ಇದರಲ್ಲಿ ಅದು ಬರೀ ಅಡ್ಡಬರುತ್ತಿದೆ ಅಷ್ಟೇ. ಬಹುಶಃ ಆ ಕೂದಲಿಗೆ 'ಅತ್ಯುತ್ತಮ ಪೋಷಕ ನಟ' ಪ್ರಶಸ್ತಿ ಕೊಟ್ಟರೂ ಕೊಡಬಹುದು ಎಂದಿದ್ದಾರೆ.
ಮತ್ತೆ ಆ ಹಿಂಸೆ!!! ಇದು ಸಿನಿಮಾವಲ್ಲ, ಕಣ್ಣ ಮುಂದೆ ಸಿಗುವ ಯಾವುದೇ ವಸ್ತುವನ್ನು ಬಳಸಿ ಎಷ್ಟು ಕ್ರೂರವಾಗಿ ಹಿಂಸೆ ನೀಡಬಹುದು ಎನ್ನುವುದಕ್ಕೆ ಇದೊಂದು 'ದೃಶ್ಯ ಕೈಪಿಡಿ'. ಸಿರಿಂಜ್? ಬಳಸಿದ್ದಾರೆ. ಸ್ಪ್ಯಾನರ್? ಬಳಸಿದ್ದಾರೆ. ಚಾಕು, ಕೊಡಲಿ, ಮಚ್ಚು, ಚೈನ್, ಗನ್, ಬಾಂಬ್, ಬಜೂಕ... ನೀವು ಯಾವುದರ ಹೆಸರು ಹೇಳ್ತೀರೋ ಅದೆಲ್ಲವನ್ನೂ ಇಲ್ಲಿ ಆಯುಧವನ್ನಾಗಿ ಮಾಡಿದ್ದಾರೆ.
ನಿರ್ದೇಶಕರು ತಮ್ಮೊಂದಿಗೆ ತಾವೇ ಸ್ಪರ್ಧೆಗೆ ಇಳಿದಂತಿದೆ "ಮುಂದಿನ ದೃಶ್ಯವನ್ನು ಹಿಂದಿನದ್ದಕ್ಕಿಂತ ಹೆಚ್ಚು ಹಿಂಸಾತ್ಮಕವಾಗಿ ಅಥವಾ ಹಾಸ್ಯಾಸ್ಪದವಾಗಿ ಮಾಡುವುದು ಹೇಗೆ? ಎಂದು ಯೋಚಿಸಿದಂತಿದೆ. ಒಬ್ಬ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದರೂ ಅವನು ಇನ್ನೂ 'ಟೆಡ್ ಟಾಕ್' ನೀಡುವಂತೆ ಸಂಭಾಷಣೆ ಹೊಡೆಯುತ್ತಿರುತ್ತಾನೆ! ವೈದ್ಯಕೀಯ ವಿಜ್ಞಾನಕ್ಕೆ ಜೈ ಅನ್ಲೇಬೇಕು. ಇದಕ್ಕೆ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ಬರಬೇಕು.
ಒಟ್ಟಾರೆಯಾಗಿ ಹೇಳುವುದಾದರೆ, 'ಧುರಂಧರ್ 2' ಒಂದು ದೊಡ್ಡ ನಿರಾಸೆ. ಇದು ನಿದ್ದೆ ಬರಿಸುವ ಸಿನಿಮಾ ಅಥವಾ ಅತಿ ಕೆಟ್ಟ ಹಾಸ್ಯದ ಸಿನಿಮಾ ಅಷ್ಟೇ. ಮೊದಲ ಭಾಗ ನೋಡಿ ನೀವು ಖುಷಿಪಟ್ಟಿದ್ದರೆ, ಈ ಭಾಗ ನೋಡಿದ ಮೇಲೆ "ಅವತ್ತು ಯಾಕೆ ಅಷ್ಟೊಂದು ಸಂಭ್ರಮಿಸಿದ್ದೆ?" ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುತ್ತೀರಿ.
ಧುರಂಧರ್ 2... ಯಾಕೆ ಬೇಕಿತ್ತು?
ರಣವೀರ್, ನೀವು ಇದಕ್ಕಿಂತ ಉತ್ತಮ ಸಿನಿಮಾಗಳನ್ನು ಮಾಡಬಲ್ಲಿರಿ. ಆದಿತ್ಯ ಧರ್ ಅವರೇ... ಅತಿಯಾದ ದೇಶಭಕ್ತಿ ಮತ್ತು ಪ್ರೊಪಗಾಂಡಾ ಈಗ ಹಳೆಯದಾಯಿತು. ಅದರಿಂದ ಹೊರಬನ್ನಿ ಎಂದು ಟೀಕಿಸಿದ್ದಾರೆ (ಏಜೆನ್ಸೀಸ್).