ಮಹೇಶ್​ ಬಾಬು 
ಸ್ಯಾಂಡಲ್‌ವುಡ್

ಬೆಂಗಳೂರಿಗರಿಗೆ ತೆಲುಗು ನಟ ಮಹೇಶ್​ ಬಾಬು ವಿಶೇಷ ಕೊಡುಗೆ!

Mahesh Babu - ತೆಲುಗು ನಟ ಮಹೇಶ್​ ಬಾಬು ಈಗಾಗಲೇ ಎಎಂಬಿ ಸಿನಿಮಾಸ್​ ಹೆಸರಿನಲ್ಲಿ ಹೈದರಾಬಾದ್​ನಲ್ಲಿ ಮಲ್ಟಿಪ್ಲೆಕ್ಸ್​ ಪ್ರಾರಂಭಿಸಿರುವುದು ಗೊತ್ತಿದೆ. ಕಳೆದ ತಿಂಗಳು ಬೆಂಗಳೂರಿನಲ್ಲೂ ಎಎಂಬಿ ಸಿನಿಮಾಸ್​ ಪ್ರಾರಂಭಿಸಿರುವ ಅವರು, ಯುಗಾದಿ ಹಬ್ಬದ ಸಂಭ್ರಮದಲ್ಲಿ ಥಿಯೇಟರ್​ಗೆ ಪ್ರೇಕ್ಷಕರನ್ನು ಸೆಳೆಯಲು ವಿಶೇಷ ಆಫರ್​ಗಳನ್ನು ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಐತಿಹಾಸಿಕ 'ಕಪಾಲಿ' ಚಿತ್ರಮಂದಿರವನ್ನು ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಆಗಿ ಪರಿವರ್ತಿಸಿದ ಎಎಂಬಿ ಸಿನಿಮಾಸ್, ಕರ್ನಾಟಕದ ಮೊಟ್ಟಮೊದಲ 'ಡಾಲ್ಬಿ ಸಿನಿಮಾ' (Dolby Cinema) ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ರಾಜ್ಯದ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಈ ವಾರ ರಿಲೀಸ್​ ಆಗುತ್ತಿರುವ ಕನ್ನಡದ ಲವ್ ಮಾಕ್ಟೇಲ್ 3, ಹಿಂದಿಯ ಧುರಂಧರ್ 2 ಮತ್ತು ತೆಲುಗಿನ ಉಸ್ತಾದ್ ಭಗತ್ ಸಿಂಗ್ ಚಿತ್ರಗಳಿಗೆ ವಿಶೇಷ ಕೊಡುಗೆಗಳು ಇರಲಿವೆ. ಬೆಳಗ್ಗೆ 11 ಗಂಟೆಯೊಳಗಿನ ಪ್ರದರ್ಶನಗಳಿಗೆ ಟಿಕೆಟ್ ಕಾಯ್ದಿರಿಸುವ ಪ್ರೇಕ್ಷಕರಿಗೆ ಉಚಿತ ಪಾಪ್‌ಕಾರ್ನ್ ಮತ್ತು ಉಡುಗೊರೆಗಳನ್ನು ನೀಡಲಾಗುವುದು. ಈ ಕೊಡುಗೆಯು ಮಾರ್ಚ್ 19 ರಿಂದ ಮಾರ್ಚ್ 26 ರವರೆಗೆ ಮಾತ್ರ ಲಭ್ಯವಿರುತ್ತದೆ. ಹಾಗೇ ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು 'AMB100' ಕೋಡ್ ಬಳಸುವ ಮೂಲಕ ₹100 ರಿಯಾಯಿತಿ ಪಡೆಯಬಹುದು.
ಎಎಂಬಿ ಸಿನಿಮಾಸ್ ಕರ್ನಾಟಕಕ್ಕೆ ಮೊದಲ ಬಾರಿಗೆ 'ಡಾಲ್ಬಿ ಸಿನಿಮಾ' ಮಾದರಿಯನ್ನು ಪರಿಚಯಿಸಿದೆ. ಇದು ಅತ್ಯಂತ ಸ್ಪಷ್ಟವಾದ ದೃಶ್ಯ ವೈಭವ, ಅದ್ಭುತ ಕಾಂಟ್ರಾಸ್ಟ್ ಮತ್ತು ತಲ್ಲೀನಗೊಳಿಸುವ ಧ್ವನಿ ವ್ಯವಸ್ಥೆಯನ್ನು ಹೊಂದಿದ್ದು, ಪ್ರೇಕ್ಷಕರಿಗೆ ಸಿನಿಮೀಯ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಎಎಂಬಿ ಸಿನಿಮಾಸ್ ಅತ್ಯಾಧುನಿಕ ಪ್ರೊಜೆಕ್ಷನ್ ತಂತ್ರಜ್ಞಾನ, ಸುಧಾರಿತ ಧ್ವನಿ ವ್ಯವಸ್ಥೆ ಮತ್ತು ಐಷಾರಾಮಿ ಆಸನಗಳೊಂದಿಗೆ '7-ಸ್ಟಾರ್' ಅನುಭವವನ್ನು ನೀಡುತ್ತದೆ. ಐಷಾರಾಮಿ ಸೌಲಭ್ಯವಿದ್ದರೂ ಇಲ್ಲಿನ ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ ಎಂಬುದು ವಿಶೇಷ. ಇಷ್ಟೇ ಅಲ್ಲದೆ, ಇಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಾಜಾವಾಗಿ ತಯಾರಿಸಿ ನೀಡಲಾಗುತ್ತದೆ. ಗಾಂಧಿನಗರದಂತಹ ಜನನಿಬಿಡ ಪ್ರದೇಶದಲ್ಲೂ ಎಎಂಬಿ ಸಿನಿಮಾಸ್ ಪ್ರೇಕ್ಷಕರಿಗಾಗಿ 380ಕ್ಕೂ ಹೆಚ್ಚು ಪಾರ್ಕಿಂಗ್ ಸ್ಥಳಾವಕಾಶ ಹಾಗೂ ವೃತ್ತಿಪರ ವ್ಯಾಲೆಟ್ (Valet) ಸೇವೆಗಳನ್ನು ಒದಗಿಸಿದೆ. ಇದು ವಾಹನ ಸವಾರರಿಗೆ ಯಾವುದೇ ತೊಂದರೆಯಿಲ್ಲದೆ ಸಿನಿಮಾ ವೀಕ್ಷಿಸಲು ಸಹಕಾರಿಯಾಗಿದೆ.