ತಾರಾಗಣ: ಆರ್ಯನ್ ತೇಜಸ್, ರಾಧಾ ಭಗವತಿ, ಕರಿಸುಬ್ಬು, ಮಾ. ಭವಿಷ್, ಎಂ.ಕೆ.ಮಠ, ಅಪೂರ್ವಶ್ರೀ ಮತ್ತಿತರರು
ಸಿನಿಮಾ ಕುರಿತ ಸಿನಿಮಾಗಳು ಆಗಾಗ ಬರುತ್ತಿರುತ್ತವೆ. ಆದರೆ, ಚಿತ್ರರಂಗದಲ್ಲಿ ಕೆಲಸ ಮಾಡುವವರ ವೈಯಕ್ತಿಕ ಜೀವನ, ಸುಖ-ದುಃಖಗಳ ಬಗ್ಗೆ ಬೆಳಕು ಚೆಲ್ಲಿರುವ ಚಿತ್ರಗಳು ಕಡಿಮೆ. "ನಾನು ಕರುಣಾಕರ' ಮೂಲಕ ಈ ಕಲರ್ಫುಲ್ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬ್ಲ್ಯಾಕ್ ಆ್ಯಂಡ್ ವೈಟ್ ಬದುಕಿನ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಆರ್ಯನ್ ತೇಜಸ್. ಹಾಗಂತ ಇದು ಕೇವಲ ಚಿತ್ರರಂಗದವರಿಗಷ್ಟೇ ಅಲ್ಲದೇ, ಎಲ್ಲ ಬಡ, ಮಧ್ಯಮವರ್ಗದ ಸಾಮಾನ್ಯ ಜನರಿಗೆ ಕನೆಕ್ಟ್ ಆಗುವ ಕಥೆ.
ಕರುಣಾಕರನದು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ. ಸಿನಿಮಾನೇ ಉಸಿರುವ ಅಂತ ಬದುಕುವಾತನಿಗೆ ಪತ್ನಿ ಮಮತಾ (ರಾಧಾ) ಮತ್ತು ಮಗ ಅಪ್ಪುನೇ (ಭವಿಷ್) ಪ್ರಪಂಚ. ಶೂಟಿಂಗ್ ಇದ್ದಾಗ ಕೆಲಸ, ದುಡ್ಡು. ಇಲ್ಲದಿದ್ದಾಗ ಖಾಲಿ ಕೈ. ಹೀಗಾಗಿಯೇ ಹೊಸ ಹೊಸ ಕಥೆ ಬರೆಯುವುದು, ನಿರ್ಮಾಪಕರನ್ನು ಹುಡುಕುವುದರ ಜತೆಗೆ ಪೇಂಟಿಂಗ್ ಕೆಲಸ ಕೂಡ ಮಾಡುತ್ತಿರುತ್ತಾನೆ. ಅದರ ನಡುವೆಯೇ ಅಪ್ಪು, ಅಪ್ಪನ ಬಳಿ ಕಾರು ಕೇಳುತ್ತಾನೆ. ಮಗ ಆಸೆಪಟ್ಟು ಕೇಳಿದ ಕಾರಿಗೆ ₹50 ಸಾವಿರ ಬೆಲೆ. ಆ ಹಣ ಹೊಂದಿಸಲು ಹೋರಾಡುತ್ತಿರುವಾಗಲೇ, ಕರುಣಾಕರ ಹೇಳುವ ಕಥೆ ಓಕೆ ಆಗುತ್ತದೆ. ಆದರೆ, ಕರುಣಾಕರನಿಗೆ ಕೆಲಸ ಕೊಟ್ಟ ನಿರ್ದೇಶಕನಿಗೆ ಅದನ್ನು ಸಹಿಸಲಾಗುವುದಿಲ್ಲ. ಚಪ್ಪಲಿಯಲ್ಲಿ ಹೊಡೆದು ತಂಡದಿಂದ ಹೊರಗಿಡುತ್ತಾನೆ. ಮುಂದೆ? ಆ ಕರುಣಾಕರ ನಿರ್ದೇಶಕನಾಗುತ್ತಾನಾ? ಅಪ್ಪನ ಸಿನಿಮಾ ಕನಸು, ಮಗನ ಕಾರಿನ ಕನಸು ನೆರವೇರುತ್ತಾ? "ನಾನು ಕರುಣಾಕರ'ನ ಕಥೆ-ವ್ಯಥೆ ನೋಡಿ.
ತೆರೆಯ ಹಿಂದೆ ಕೆಲಸ ಮಾಡುವವರ ವೃತ್ತೀಜಿವನ ಹಾಗೂ ವೈಯಕ್ತಿಕ ಜೀವನಗಳ ದೈನಂದಿನ ಹೋರಾಟಗಳ ನಡುವಿನ ಭಾವನಾತ್ಮಕ ಬದುಕನ್ನು "ನಾನು ಕರುಣಾಕರ' ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆರ್ಯನ್ ತೇಜಸ್. ಜತೆಗೆ ಕರುಣಾಜನಕ ಕರುಣಾಕರನಾಗಿ ಪಾತ್ರವನ್ನು ಜೀವಿಸಿದ್ದಾರೆ. ಇನ್ನು ರಾಧಾ ಭಗವತಿ ಚಿನಕುರಳಿ ಪಟಪಟ ಸಿಡಿದಂತೆ ಮಮತಾ ಪಾತ್ರದಲ್ಲಿ ರಾಧಾ ಗಮನ ಸೆಳೆಯುತ್ತಾರೆ. ಉಳಿದಂತೆ ಮಾ. ಭವಿಷ್, ಕರಿಸುಬ್ಬು, ಅಪೂರ್ವಶ್ರೀ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಹಾಡುಗಳು ಸಹ ಚಿತ್ರಕ್ಕೆ ಪೂರಕವಾಗಿವೆ. ಸಿನಿಮಾ ನೋಡುವಾಗ ಹಲವರಿಗೆ ಹಲವು ರೀತಿ ಕನೆಕ್ಟ್ ಆಗಬಹುದು. ಹೀಗಾಗಿ "ನಾನು ಕರುಣಾಕರ' ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.