ಸೂಪರ್ ಹಿಟ್ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

superhit movie review: ನಗುವಿನ ಅಲೆಯಲ್ಲಿ ಥ್ರಿಲ್ಲಿಂಗ್ ಪಯಣ

ಪ್ರಮುಖ ಮುಖ್ಯಾಂಶಗಳು

  • ಕಾಮಿಡಿ ಜತೆ ಥ್ರಿಲ್ಲರ್ ಸ್ಟೋರಿಯಲ್ಲಿ ಹೌಸ್ಯದ ಔತಣ
  • ದ್ವಿತೀಯಾರ್ಧದಲ್ಲಿ ಕಥೆ ದೀರ್ಘವಾಯಿತು ಅನಿಸುತ್ತದೆ
  • ಗೌರವ್ ಶೆಟ್ಟಿ- ಗಿಲ್ಲಿ ನಟರಾಜ್ ಇಬ್ಬರ ಜುಗಲ್‌ಬಂಧಿ ಇಷ್ಟವಾಗುತ್ತದೆ
ಚಿತ್ರ: ಸೂಪರ್‌ಹಿಟ್
ನಿರ್ದೇಶನ: ವಿಜಯಾನಂದ
ತಾರಾಗಣ: ಗಿಲ್ಲಿ ನಟ, ಗೌರವ್ ಶೆಟ್ಟಿ, ಶ್ವೇತಾ, ಸಾಧುಕೋಕಿಲಾ, ಪ್ರಮೋದ್ ಶೆಟ್ಟಿ ಮತ್ತಿತರರು.
ಶಿವ ಸ್ಥಾವರಮಠ
ಸರ್ಕಾರಿ ಕೆಲಸ ಪಡೆಯಲು 10 ಲಕ್ಷ ರೂ. ಕೊಟ್ಟು ಮೋಸ ಹೋಗಿರುವ ಸತ್ಯ (ಗೌರವ್) ಬೇರೆ ದಾರಿಯಿಲ್ಲದೇ ದುಡಿಮೆ ದಾರಿ ಹಿಡಿದುಕೊಂಡು ಹೊರಟಿದ್ದಾನೆ. ಆ ದಾರಿಯಲ್ಲಿ ಅನಿರೀಕ್ಷಿತವಾಗಿ ಆತನಿಗೆ ಕಾರೊಂದು ಸಿಗುತ್ತದೆ. ಅದನ್ನು ತೆಗೆದುಕೊಂಡು ಹೊರಡುವಷ್ಟರಲ್ಲೇ ಒಬ್ಬಳು ಹುಡುಗಿ ಬಂದು ಸೇರಿಕೊಳ್ಳುತ್ತಾಳೆ. ಅವಳೇ ಅಹಲ್ಯಾ (ಶ್ವೇತಾ). ಇಬ್ಬರಿಗೂ ಮುಂದಿನ ದಾರಿ ಗೊತ್ತಿಲ್ಲ. ಕಾರು ತಮ್ಮದಲ್ಲ ಎಂದು ಗೊತ್ತಿದ್ದರೂ ಮುಂದೆ ಸಾಗುತ್ತಾರೆ. ಈ ಇಬ್ಬರ ಜತೆಗೆ ಮತ್ತೊಬ್ಬ ಭೂಪತಿ (ಗಿಲ್ಲಿ ನಟ) ಬಂದು ಸೇರಿಕೊಳ್ಳುತ್ತಾನೆ. ಈ ಮೂವರು ಅನಿರೀಕ್ಷಿತವಾಗಿ ಒಂದೆಡೆ ಸೇರಿದರೂ, ಮೂವರಿಗೂ ಪ್ರತ್ಯೇಕ ್ಲ್ಯಫ್ಲ್ಯಾಶ್‌ಬ್ಯಾಕ್ ಸ್ಟೋರಿಯಿದೆ. ಆ ಕಥೆಯನ್ನೇ ಹೇಳುತ್ತಲೇ ನಗಿಸುತ್ತಲೇ ‘ಸೂಪರ್‌ಹಿಟ್’ ಪಯಣ ಸಾಗುತ್ತದೆ.
ಡೇವಿಡ್ ಮತ್ತು ಡಿ’ಸೋಜಾ ಎಂಬ ಸಹೋದರರ ರಹಸ್ಯವನ್ನು ಬಯಲು ಮಾಡುವ ಹೋಗುವ ಪತ್ರಕರ್ತನ ಕೊಲೆಯಿಂದ ಸಿನಿಮಾ ಆರಂಭವಾಗುತ್ತದೆ. ಆ ರಹಸ್ಯಗಳಿರುವ ಪೆನ್‌ಡ್ರೈವ್ ಸತ್ಯ ಕದ್ದಿರುವ ಕಾರಿನಲ್ಲಿರುತ್ತದೆ. ಆ ಪೆನ್‌ಡ್ರೈವ್‌ಗಾಗಿ ಡೇವಿಡ್ ಸಹೋದರರು ಹುಡುಕುತ್ತಿದ್ದರೆ, ಈ ಸತ್ಯ ಆ್ಯಂಡ್ ಗ್ಯಾಂಗ್ ಜಾಲಿಯಾಗಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಇವರ ಪ್ರಯಾಣದ ಮಧ್ಯೆ ಮದುವೆಯ ಡ್ರಾಮಾ, ಕಳ್ಳ, ಪೊಲೀಸ್ ಹಾಗೂ ಕೊಲೆಗಾರರು ಹೀಗೆ ಹಲವರು ಸಿಗುತ್ತಾರೆ. ಆದರೆ, ಸತ್ಯ ಮತ್ತು ಭೂಪತಿ ಮಾತ್ರ ಕಾಮಿಡಿ ಪಂಚ್ ನೀಡುತ್ತಲೇ ಮುಂದೆ ಸಾಗುತ್ತಾರೆ. ನಿರ್ದೇಶಕ ವಿಜಯಾನಂದ ‘ಸೂಪರ್‌ಹಿಟ್’ಮೂಲಕ ಕಾಮಿಡಿ ಜತೆಗೆ ಥ್ರಿಲ್ಲರ್ ಸ್ಟೋರಿ ಹೇಳಲು ಮುಂದಾಗಿದ್ದಾರೆ. ಆದರೆ, ಹಾಸ್ಯದ ಔತಣ ಸಿಕ್ಕರೂ, ಥ್ರಿಲ್ಲಿಂಗ್ ಅನುಭವ ಕಡಿಮೆ. ಇಡೀ ಚಿತ್ರದಲ್ಲಿ ಗಿಲ್ಲಿ ನಟ, ಗೌರವ್ ಶೆಟ್ಟಿಯೇ ಪ್ರಮುಖ ಆಕರ್ಷಣೆ. ಇಬ್ಬರು ಕೊಡುವ ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ದೀರ್ಘವಾಯಿತು ಅನಿಸುತ್ತದೆ. ಕೆಲವು ಅನಗತ್ಯ ದೃಶ್ಯಗಳಲ್ಲಿ ಕತ್ತರಿ ಹಾಕಿ, ಅವಧಿಯಲ್ಲಿ ಕಡಿಮೆ ಮಾಡಬಹುದಿತ್ತು. ಯುಟ್ಯೂಬ್ ಸ್ಟಾರ್ ಗೌರವ್ ಶೆಟ್ಟಿ ಹಾಗೂ ರಿಯಾಲಿಟಿ ಶೋ ಸ್ಟಾರ್ ಗಿಲ್ಲಿ ನಟರಾಜ್ ಇಬ್ಬರ ಜುಗಲ್‌ಬಂಧಿ ಇಷ್ಟವಾಗುತ್ತದೆ. ನಟಿ ಶ್ವೇತಾ ಚೆಂದವಾಗಿ ಕಾಣಿಸಿಕೊಂಡಿದ್ದಾರೆ. ನಟರಾದ ಪ್ರಮೋದ್ ಶೆಟ್ಟಿ, ವಿ. ನಾಗೇಂದ್ರ ಪ್ರಸಾದ್, ಡ್ರಾೃಗನ್ ಮಂಜು, ಟೆನ್ನಿಸ್ ಕೃಷ್ಣ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು, ನಗಿಸಿ ಮರೆಯಾಗುತ್ತಾರೆ.