ಕನ್ನಡ ಬಿಗ್ ಬಾಸ್​ 12  
ಸ್ಯಾಂಡಲ್‌ವುಡ್

ಗಿಲ್ಲಿ ಏನೋ ಗೆದ್ದಾಯ್ತು ಆದ್ರೆ ಸುದೀಪ್​ ಮಾಡಿದ ಈ ಒಂದು ಕೆಲಸ ಕೆಲವರ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ!

ಪ್ರಮುಖ ಮುಖ್ಯಾಂಶಗಳು

  • ಬಿಗ್ ಬಾಸ್​ ಸೀಸನ್​ 12ಕ್ಕೆ ತೆರೆ, ಪಟ್ಟ ಮುಡಿಗೇರಿಸಿಕೊಂಡ ಹಳ್ಳಿಹೈದ
  • ಟ್ರೋಫಿ ಪಡೆದ ಗಿಲ್ಲಿ ನಟನಿಗೆ ಹುಟ್ಟೂರಿನಲ್ಲಿ ಭವ್ಯಸ್ವಾಗತ
  • 12ರ ವಿಜೇತ ಸ್ಪರ್ಧಿಗೆ ಸುದೀಪ್​ರಿಂದ 10 ಲಕ್ಷ ರೂ. ಧನಸಹಾಯ
ಬೆಂಗಳೂರು: ​ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12ಕ್ಕೆ ಸಂಪೂರ್ಣವಾಗಿ ತೆರೆ ಬಿದ್ದಿದ್ದು, ಗಿಲ್ಲಿ ನಟ ಟ್ರೋಫಿ ಎತ್ತಿಹಿಡಿದದ್ದು ಇದೀಗ ಬಿಗ್ ಬಾಸ್​ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ ಹಾಗೂ ದಾಖಲೆಗೆ ಸಾಕ್ಷಿಯಾಗಿದೆ. ಬರೋಬ್ಬರಿ 37ಕ್ಕೂ ಅಧಿಕ ಕೋಟಿ ಮತಗಳನ್ನು ಪಡೆದ ಗಿಲ್ಲಿ, ಇಡೀ ಕರುನಾಡನ್ನು ರಂಜಿಸಿ, ಅಭಿಮಾನದ ಸಾಗರದಲ್ಲಿ ತೇಲಾಡಿದ್ದು ಮತ್ತೊಂದು ರೋಚಕ. ಇನ್ನು ರನ್ನರ್​ಅಪ್​ ಸ್ಥಾನವನ್ನು ರಕ್ಷಿತಾ ಪಡೆದರೆ, ಮೊದಲ ರನ್ನರ್​ಅಪ್​ ಆಗಿ ಅಶ್ವಿನಿ ಹೊರಹೊಮ್ಮಿದರು.
ಒಂದೆಡೆ ಮತಗಳ ಏಣಿಕೆಯಲ್ಲಿ ರಾಜಕೀಯ ಚುನಾವಣೆಯನ್ನು ಹಿಂದಿಕ್ಕಿರುವ ಗಿಲ್ಲಿ ನಟ, ಅಭಿಮಾನಿಗಳಿಂದ ರಿಯಾಲಿಟಿ ಶೋಗಳ ರಾಜ ಎಂಬ ಬಿರುದನ್ನು ಪಡೆದು, ದಾಖಲೆಯ ಗೆಲುವಿಗೆ ಹೆಸರಾಗಿದ್ದಾರೆ. ಬಿಗ್ ಬಾಸ್​ ಪಟ್ಟವನ್ನು ಗೆದ್ದ ಮರುದಿನವೇ ಹುಟ್ಟೂರು ಮಂಡ್ಯದ ಮಳ್ಳವಳ್ಳಿಯಲ್ಲಿ ಮೆರವಣಿಗೆ ಸಾಗಿದ ಗಿಲ್ಲಿಯನ್ನು ನೋಡಲು ಜನಸಾಗರವೇ ಹರಿದುಬಂದಿದ್ದು ಮತ್ತೊಂದು ರೋಮಾಂಚಕ ದೃಶ್ಯ. ಗೆಲುವಿನ ಪರಿಮಳ ಒಂದೆಡೆಯಾದರೆ, ಫಿನಾಲೆಗೂ ಮುನ್ನ ನಡೆದ ವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ಸೀಸನ್​ ಎಂಟರ್​ಟೈನರ್​ ಹಾಗೂ ವಾರದ ಅತ್ಯುತ್ತಮ ಚಪ್ಪಾಳೆಯನ್ನು ದ್ರುವಂತ್ ಮತ್ತು ಅಶ್ವಿನಿಗೆ ನೀಡಿದ್ದಕ್ಕೆ ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ, ಕಿಡಿ ವ್ಯಕ್ತವಾಯಿತು. 

ಯಾವೆಲ್ಲ ವಿಚಾರಗಳಿಗೆ ಟೀಕೆ?

ಸೀಸನ್​ ಎಂಟರ್​ಟೈನರ್​ ಚಪ್ಪಾಳೆಯನ್ನು ದ್ರುವಂತ್​ಗೆ ಕೊಟ್ಟಿದ್ದೇ ತಡ ಜಾಲತಾಣಗಳಲ್ಲಿ ಸುದೀಪ್​ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಯಿತು. 12ರ ಬಿಗ್ ಬಾಸ್​ನಲ್ಲಿ ಗಿಲ್ಲಿಗಿಂತ ಎಂಟರ್​ಟೈನರ್​ ಬೇಕಾ? ಎಂಬ ಪ್ರಶ್ನೆಗಳು ಅಭಿಮಾನಿಗಳಿಂದ ಕಮೆಂಟ್​ ಬಾಕ್ಸ್​ಗಳಲ್ಲಿ ತುಂಬಿದ್ದವು. ಇದರೊಟ್ಟಿಗೆ, ಸುದೀಪ್​ರನ್ನು ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಅವರು ಭೇಟಿಯಾದ ಬಳಿಕ, ಅವರು ಅಶ್ವಿನಿ ಗೌಡ ಗೆಲುವಿಗೆ ಕಾರಣವಾಗಲು ಫಿನಾಲೆಗೆ ಕೆಲವೇ ದಿನಗಳಿರುವಾಗ ಸುದೀಪ್​ ಜತೆ ಮಾತುಕತೆ ನಡೆಸಿದ್ದಾರೆ ಎಂದೆಲ್ಲ ವದಂತಿ ಹಬ್ಬಿಸಲಾಯಿತು. ಮತ್ತು ನೆಟ್ಟಿಗರು, ಸುದೀಪ್​ ಅವರು ಬಡವರ ಮಕ್ಕಳನ್ನು ಬೆಳೆಸಲ್ಲ ಎಂದು ನಾನಾ ರೀತಿಯಲ್ಲಿ ಟ್ರೋಲ್, ಟೀಕೆಗಳ ಸುರಿಮಳೆಯನ್ನೇ ಹರಿಸಿದರು.

ಟೀಕೆಗಳಲ್ಲೆವೂ ತಲೆಕೆಳಗೆ!

ಇದ್ಯಾವುದಕ್ಕೂ ಎಲ್ಲಿಯೂ, ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದ ಸುದೀಪ್​, ಸೀಸನ್​ 12ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಟಾಪ್​ 2 ಫೈನಲಿಸ್ಟ್​ ಸ್ಥಾನದಲ್ಲಿ ನಿಂತ ಗಿಲ್ಲಿ, ಬರೋಬ್ಬರಿ 37ಕ್ಕೂ ಅಧಿಕ ಕೋಟಿ ಮತಗಳಿಂದ ಬಿಗ್ ಬಾಸ್​ 12ರ ವಿಜೇತನಾಗಿ ದಾಖಲೆಯ ಗೆಲುವು ದಾಖಲಿಸುತ್ತಿದ್ದಂತೆ ಬೆನ್ನುತಟ್ಟಿದರು. ಇಷ್ಟಕ್ಕೆ ಸುಮ್ಮನಾಗದೆ, ತಾವು ವೈಯಕ್ತಿಕವಾಗಿ ಗಿಲ್ಲಿಗೆ 10 ಲಕ್ಷ ರೂ. ಕೊಡುವುದಾಗಿ ಘೋಷಿಸಿದರು.

ಸುದೀಪ್​ ಸಹಾಯಕ್ಕೆ ಮೆಚ್ಚುಗೆ!

ಕನ್ನಡದ ಬಿಗ್ ಬಾಸ್​ ಇತಿಹಾಸದಲ್ಲಿ ಅಷ್ಟು ಸೀಸನ್​ಗಳ ಪೈಕಿ ಒಂದಷ್ಟು ಸೀಸನ್​ಗಳ ಕೆಲವು ಸ್ಪರ್ಧಿಗಳಿಗೆ ಸುದೀಪ್ ಅವರು ಧನಸಹಾಯ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್​ನಲ್ಲಿ ಪ್ರಥಮ ಬಾರಿಗೆ ಒಬ್ಬ ವಿಜೇತ ಸ್ಪರ್ಧಿಗೆ ಬಹಿರಂಗವಾಗಿ ವೇದಿಕೆಯಲ್ಲೇ ವೈಯಕ್ತಿಕವಾಗಿ 10 ಲಕ್ಷ ರೂ. ಕೊಡುವುದಾಗಿ ಸುದೀಪ್​ ಘೋಷಿಸಿದ್ದು ಹಲವರ ಅಚ್ಚರಿ ಹಾಗೂ ಮೆಚ್ಚುಗೆಗೆ ಕಾರಣವಾಯಿತು.  ಇದು ಅವರ ಮೇಲಿನ ಗೌರವವನ್ನು ಅಭಿಮಾನಗಳಲ್ಲಿ ದುಪ್ಪಟ್ಟಾಗಿಸಿದೆ. ಜತೆಗೆ ಟೀಕಾಕಾರರ ಮುಖಕ್ಕೆ ಹೊಡೆದಂತಾಗಿದೆ.