- ಸ್ಟಾರ್ ವಾರ್ ಜತೆ ಫ್ಯಾನ್ಸ್ ವಾರ್ ಶುರು
- ಒಂದೇ ದಿನದಂದು ಎರಡು ಕನ್ನಡದ ಬಹುನಿರೀಕ್ಷಿತ ಚಿತ್ರಗಳು ತೆರೆಗೆ
- ಕಿಚ್ಚ ಸುದೀಪ್ ನೀಡಿದ ಆ ಮಾತುಗಳು ಕಿಚ್ಚಿಗೆ ಕಾರಣ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ) ಅಭಿನಯದ ಬಹುನಿರೀಕ್ಷಿತ 'ಮಾರ್ಕ್' ಇದೇ ಡಿಸೆಂಬರ್ 25ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಮಧ್ಯೆ, ಮಾರ್ಕ್ ಚಿತ್ರದ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಇನ್ನು ಇದೇ ದಿನ ಅರ್ಜುನ್ ಜನ್ಯ ನಿರ್ದೇಶನದ, ಉಪೇಂದ್ರ, ರಾಜ್ ಬಿ.ಶೆಟ್ಟಿ ಮತ್ತು ಶಿವರಾಜ್ಕುಮಾರ್ ನಟಿಸಿರುವ '45' ಕೂಡ ರಿಲೀಸ್ಗೆ ಸಜ್ಜಾಗಿದೆ. ಈ ಮೂಲಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪೈಪೋಟಿಗೆ ಕನ್ನಡ ಚಿತ್ರಗಳು ಇಳಿದಿವೆ. ಇದು ತೀವ್ರ ಕುತೂಹಲ ಕೆರಳಿಸಿದೆ ನಿಜ. ಆದರೆ, ಇದೆಲ್ಲದರ ಮಧ್ಯೆ ಫ್ಯಾನ್ಸ್ಗಳ ಸಮರ ಜೋರಾಗಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದೆ.
ಮಾರ್ಕ್ ಸಿನಿಮಾದ ಪ್ರಚಾರದ ವೇಳೆ ನಟ ಸುದೀಪ್ ಅವರು ಹೇಳಿದ ಮಾತು ಈ ಫ್ಯಾನ್ಸ್ ವಾರ್ಗೆ ಕಾರಣವಾಗಿದೆ. ಬಹುದೊಡ್ಡ ವೇದಿಕೆಯಲ್ಲೇ ಯುದ್ಧಕ್ಕೆ ರೆಡಿ ಎಂದಿದ್ದೇಕೆ ಕಿಚ್ಚ? ಕಿಚ್ಚನ ಹೇಳಿಕೆಯಿಂದ ಹುಟ್ಟಿಕೊಳ್ತಾ ಸ್ಟಾರ್ ವಾರ್? ಮಾರ್ಕ್ ಸಿನಿಮಾ ವಿರುದ್ಧ ನಡೆಯುತ್ತಿದೆಯಾ ಪಿತೂರಿ? ಕಿಚ್ಚನ ಮಾತಿನ ಮರ್ಮವೇನು? ಎಂಬ ಹತ್ತು ಹಲವು ಪ್ರಶ್ನೆಗಳು ಸಿನಿಪ್ರಿಯರ ತಲೆಯನ್ನು ಕೆಡಿಸಿದೆ ಮತ್ತು ತೀರ ಗೊಂದಲಕ್ಕೆ ದೂಡಿದೆ.
ಅಷ್ಟಕ್ಕೂ ಕಿಚ್ಚ ಹೇಳಿದ್ದೇನು ಎಂದು ನೋಡುವುದಾದರೆ, ನಾನು ಇಲ್ಲಿಯವರೆಗೂ ನಮ್ಮ ಅಭಿಮಾನಿಗಳಿಗೆ ಏನೂ ಮಾತನಾಡದೇ ಸುಮ್ಮನಿದ್ದೇನೆ. ನಾನು ಸುಮ್ಮನಿದ್ದ ಮಾತ್ರಕ್ಕೆ ನನ್ನಿಂದು ಏನು ಆಗಲ್ಲ ಅಂತಲ್ಲ. ತಾಳ್ಮೆಗೂ ಒಂದು ಮಿತಿ ಇದೆ. ಎಲ್ಲವನ್ನು ಸಹಿಸಿಕೊಂಡು ಇರಲಾಗದು. ಇದೇ ಡಿ.25ಕ್ಕೆ ಒಂದು ಸಿನಿಮಾ ಬರುತ್ತಿದೆ. ಇನ್ನೊಂದೆಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ. ಆ ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ. ಏಕೆಂದರೆ, ನಾವು ನಮ್ಮ ಮಾತಿಗೆ ಬದ್ದ ಎಂದು ಸುದೀಪ್ ಹೇಳಿದರು. ಇದೊಂದು ಹೇಳಿಕೆಗೆ ಕಿಚ್ಚನ ವಿರುದ್ಧ ನಟ ದರ್ಶನ್ ಅಭಿಮಾನಿಗಳು ಇನ್ನಷ್ಟು ಕೆರಳಿದ್ದಾರೆ. ಇದಕ್ಕೆ ಪುಷ್ಠಿ ಎನ್ನುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಇತ್ತೀಚಿನ ಹೇಳಿಕೆಗಳು ಪರೋಕ್ಷವಾಗಿ ಸುದೀಪ್ ಅವರಿಗೆ ಟಾಂಗ್ ನೀಡಿದರು ಎಂಬಂತೆ ಬಿಂಬಿಸುತ್ತಿವೆ.
ಸ್ಟಾರ್ ವಾರ್ ಜತೆಗೆ ಫ್ಯಾನ್ಸ್ ವಾರ್
ಈ ಎಲ್ಲ ಬೆಳವಣಿಗೆಗಳು ಸದ್ಯ ಸ್ಟಾರ್ ವಾರ್ ಜತೆಗೆ ಫ್ಯಾನ್ಸ್ ವಾರ್ಗೂ ಸಾಕ್ಷಿಯಾಗಿದೆ. ಮತ್ತೊಂದೆಡೆ, ರಾಜ್ ಬಿ.ಶೆಟ್ಟಿ, ಉಪೇಂದ್ರ ಮತ್ತು ಶಿವರಾಜ್ಕುಮಾರ್ ಅವರ ತ್ರಿಮೂರ್ತಿಗಳ ಸಂಗಮ '45' ಕೂಡ ಮಾರ್ಕ್ ದಿನವೇ ರಿಲೀಸ್ ಆಗುತ್ತಿರುವುದು ಕನ್ನಡ ಸಿನಿಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿವೆ. ಇದು ಇತರೆ ಚಿತ್ರರಂಗದ ಗಮನ ಸೆಳೆದಿದ್ದು, ಕನ್ನಡ ಸಿನಿಮಾಗಳ ಮೇಲೆ ಕಣ್ಣಾಯಿಸುವಂತೆ ಮಾಡಿದೆ. ಪ್ರತಿಬಾರಿ ನಮ್ಮ ಚಿತ್ರಗಳು ಅನ್ಯ ಭಾಷೆಯ ಫಿಲಂಗಳೊಂದಿಗೆ ಪೈಪೋಟಿ ನೀಡಬೇಕಿತ್ತು. ಆದರೀಗ, ನಮ್ಮದೇ ಚಿತ್ರಗಳು ಒಂದೇ ತಿಂಗಳಲ್ಲಿ, ಒಂದೇ ದಿನ ಜಿದ್ದಾಜಿದ್ದಿಗೆ ಬಿದ್ದಿರುವುದು ನಿಜಕ್ಕೂ ಗಮನಾರ್ಹ.
ಮೂರರಲ್ಲಿ 1 ರಿಲೀಸ್, 2 ಬಾಕಿ
ಈ ತಿಂಗಳು ಮೂರು ಸಿನಿಮಾಗಳು ಚಿತ್ರರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿವೆ. ಆ ಪೈಕಿ 'ಡೆವಿಲ್' ಈಗಾಗಲೇ ತೆರೆಕಂಡು, ಚಿತ್ರಮಂದಿರಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಇನ್ನೂ ಬಾಕಿ ಉಳಿದಿರುವುದು ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಮತ್ತು ಶಿವರಾಜ್ಕುಮಾರ್, ರಾಜ್ ಬಿ.ಶೆಟ್ಟಿ ಮತ್ತು ಉಪೇಂದ್ರ ನಟಿಸಿರುವ '45' ಸಿನಿಮಾಗಳು. ಈ ಎರಡು ಚಿತ್ರಗಳು ಸದ್ಯ ಸಖತ್ ಹೈಪ್ ಮೂಡಿಸಿದ್ದು, ಟ್ರೇಲರ್ನಿಂದಲೇ ನೋಡುಗರ ನಿರೀಕ್ಷೆಗಳನ್ನು ಡಬಲ್ ಮಾಡಿವೆ. ಒಂದೇ ದಿನ ತೆರೆಕಾಣಲಿರುವ ಈ ಚಿತ್ರಗಳು ಹೇಗೆ ಕಮಾಲ್ ಮಾಡಲಿವೆ ಎಂಬುದನ್ನು ಕಾದು ನೋಡಬೇಕಿದೆ.