ಟಾಕ್ಸಿಕ್ ವರ್ಸಸ್ ಧುರಂಧರ್
ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ "ಧುರಂಧರ್ 2 - ದ ರಿವೆಂಜ್' ರಿಲೀಸ್ ಆದಾಗಿನಿಂದಲೂ ನಿರ್ದೇಶಕ ರಾಮಗೋಪಾಲ್ ವರ್ಮಾ ಅದರ ಜಪದಲ್ಲೇ ತೊಡಗಿದ್ದಾರೆ. ಪ್ರತಿದಿನ ಜಾಲತಾಣದಲ್ಲಿ ಸಿನಿಮಾ ಮತ್ತು ತಂಡದ ಬಗ್ಗೆ ಒಂದಲ್ಲಾ ಒಂದು ರೀತಿ ಹಾಡಿ ಹೊಗಳುತ್ತಿದ್ದಾರೆ. ಮತ್ತೊಂದೆಡೆ "ಧುರಂಧರ್ 2' ಕೂಡ ಮೊದಲ ವಾರಾಂತ್ಯಕ್ಕೆ ₹1000 ಕೋಟಿ ಕ್ಲಬ್ನತ್ತ ದಾಪುಗಾಲಿಟ್ಟಿದೆ. ಅದರ ನಡುವೆಯೇ ಬಾಲಿವುಡ್ನ "ಧುರಂಧರ್' ದಾಖಲೆಯನ್ನು ದಕ್ಷಿಣದ ಯಾವ ಸಿನಿಮಾ ಮುರಿಯುತ್ತೆ ಎಂಬ ಚರ್ಚೆಯೂ ಪ್ರಾರಂಭವಾಗಿದ್ದು, ರಾಮಗೋಪಾಲ್ ವರ್ಮಾ "ಟಾಕ್ಸಿಕ್'ನತ್ತ ಬೆರಳು ಮಾಡಿದ್ದಾರೆ. ಹೌದು, ಇತ್ತೀಚೆಗಷ್ಟೆ ಅವರು, ""ಧುರಂಧರ್' ಯಶಸ್ಸು ದಕ್ಷಿಣದ ಚಿತ್ರತಂಡಗಳಿಗೆ ಅಜೀರ್ಣ ತರಿಸಿದೆ. ಹೀಗಾಗಿಯೇ ಎಲ್ಲರೂ ತಿರುಪತಿ, ವೈಷ್ಣೋದೇವಿಗೆ ಹೋಗಿ ನಮ್ಮ ಸಿನಿಮಾ "ಧುರಂಧರ್' ರೆಕಾರ್ಡ್ ಮುರಿಯಲಿ ಅಂತ ಪ್ರಾರ್ಥಿಸುವಂತಾಗಿದೆ. ಏಕೆಂದರೆ ಈಗ ಅವರಿಗೆ ಉಳಿದಿರುವುದು ಅದೊಂದೇ ದಾರಿ. ಅವರನ್ನೆಲ್ಲ ಆ ದೇವರೇ ಕಾಪಾಡಬೇಕು. ಬಹುಶಃ ಎಲ್ಲರೂ "ಧುರಂಧರ್ 2' ದಾಖಲೆಯನ್ನು "ಟಾಕ್ಸಿಕ್' ಮುರಿಯಲಿ ಅಂತ ಬೇಡಿಕೊಳ್ಳಬಹುದು ಅಂತ ನನಗನ್ನಿಸುತ್ತಿದೆ. "ಟಾಕ್ಸಿಕ್' ಶೈಲಿಯ ಸಿನಿಮಾ ಆದರೂ ಪರವಾಗಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿದ್ದು ಇದೇ ಮೊದಲು...
ಸಾಮಾನ್ಯವಾಗಿ ಹೆಸರಾಂತ ಸ್ಟಾರ್ಗಳ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗುತ್ತಿವೆ ಅಂದರೆ, ಆ ಡೇಟ್ನಲ್ಲಿ ಬಾಲಿವುಡ್ ಚಿತ್ರಗಳು ರಿಲೀಸ್ ಆಗುತ್ತಿರಲಿಲ್ಲ. ಕೆಲ ವರ್ಷಗಳ ಹಿಂದಿನವರೆಗೂ ಹಾಲಿವುಡ್ ಚಿತ್ರಗಳ ರಿಲೀಸ್ ನೋಡಿಕೊಂಡು ಭಾರತೀಯ ಸಿನಿಮಾಗಳು ಬಿಡುಗಡೆಯಾಗಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ "ಧುರಂಧರ್ 2' ಹಾಲಿವುಡ್ ಚಿತ್ರಕ್ಕೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸವಾಲು ಹಾಕಿದೆ. ಹೌದು, ರಿಯಾನ್ ಗೋಸ್ಲಿಂಗ್ ನಟಿಸಿರುವ ಫಿಲ್ ಲಾರ್ಡ್ ಮತ್ತು ಕ್ರಿಸ್ಟೋಫರ್ ಮಿಲ್ಲರ್ ನಿರ್ದೇಶನದ ಸೈನ್ಸ್ ಫಿಕ್ಷನ್ ಅಡ್ವೆಂಚರ್ ಸಿನಿಮಾ "ಪ್ರಾಜೆಕ್ಟ್ ಹೈಲ್ ಮೇರಿ' ಅಮೆರಿಕ ಸೇರಿ ವಿವಿಧೆಡೆ ಮಾ. 19ರಂದು ರಿಲೀಸ್ ಆಗಿತ್ತು. ಆದರೆ, ಭಾರತದಾದ್ಯಂತ "ಧುರಂಧರ್ 2' ಕ್ರೇಜ್ ನೋಡಿದ ಚಿತ್ರತಂಡ, ಇಲ್ಲಿ ಒಂದು ವಾರ ತಡವಾಗಿ ಮಾ. 26ರ ಗುರುವಾರ ಬಿಡುಗಡೆ ಮಾಡುತ್ತಿದೆ. ಮತ್ತೊಂದೆಡೆ ಹಾಲಿವುಡ್ ಜನ್ಮಸ್ಥಳವಾದ ಅಮೆರಿಕದಲ್ಲೂ "ಧುರಂಧರ್ 2' ಅದ್ಭುತ ಯಶಸ್ಸು ಕಂಡಿದ್ದು, ಟಾಪ್ ಎರಡನೇ ಸ್ಥಾನದಲ್ಲಿ ಪ್ರದರ್ಶನ ಕಾಣುತ್ತಿದೆ.