ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
- ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ "ಮಾರ್ಕ್" ಸಿನಿಮಾ ಇಂದು ದೇಶಾದ್ಯಂತ ತೆರೆಗೆ
- ಸುದೀಪ್ ಅವರನ್ನು ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ
- ಮಾರ್ಕ್ ಸಿನಿಮಾಗೆ ರಾಜ್ಯಾದ್ಯಂತ ಒಳ್ಳೆಯ ರೆಸ್ಪಾನ್ಸ್ ಹರಿದುಬರುತ್ತಿದೆ
- ಉತ್ತಮ ಪ್ರತಿಕ್ರಿಯೆ ನಡುವೆ ಮಾರ್ಕ್ ಸಿನಿಮಾ ಹಾಗೂ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ನಡೆಯುತ್ತಿದೆ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ) ಅಭಿನಯದ ಬಹುನಿರೀಕ್ಷಿತ "ಮಾರ್ಕ್" ಸಿನಿಮಾ ಇಂದು ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಮೊದಲ ಶೋ ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು, ಸುದೀಪ್ ಅವರನ್ನು ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಇದರ ನಡುವೆ ಎಕ್ಸ್ನಲ್ಲಿ ಮಾರ್ಕ್ ಸಿನಿಮಾ ಹಾಗೂ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ನಡೆಯುತ್ತಿದೆ.
#SaveProducersFromSudeep ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಮಾರ್ಕ್ ಸಿನಿಮಾದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಖಾಲಿ ಥಿಯೇಟರ್ಗಳನ್ನು ಎಡಿಟ್ ಮಾಡಿ ಮಾರ್ಕ್ ಸಿನಿಮಾಗೆ ಜನರು ಯಾರೂ ಬರುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಬೇರೆ ಸಿನಿಮಾಗಳಿಗೆ ಜನರು ನೀಡಿದ ರಿವ್ಯೂಗಳನ್ನು ಮಾರ್ಕ್ ಸಿನಿಮಾಗೆ ನೀಡಿದ್ದಾರೆ ಎನ್ನುವಂತೆ ಎಡಿಟ್ ಮಾಡಿ #SaveProducersFromSudeep ಹ್ಯಾಶ್ಟ್ಯಾಗ್ ಅಡಿಯಲ್ಲಿ ಹರಿಬಿಡುತ್ತಿದ್ದಾರೆ.
ಇನ್ನು ಕೆಲವರು ನ್ಯೂಸ್ ಚಾನೆಲ್ಗಳ ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಬೇರೆ ಸಿನಿಮಾಗಳಿಗೆ ನೀಡಿದ ಕೆಟ್ಟ ರಿವ್ಯೂಗಳನ್ನು ಹರಿಬಿಡುತ್ತಿದ್ದಾರೆ. ಸುದೀಪ್ ಅವರ ನಿರ್ಮಾಪಕ ಹಿಮಾಲಯಕ್ಕೆ ಹೋಗುವುದು ಗ್ಯಾರಂಟಿ, ಸುದೀಪ್ ಅವರಿಂದ ನಿರ್ಮಾಪಕರನ್ನು ಕಾಪಾಡಿ ಎಂದೆಲ್ಲ ಕಾಮೆಂಟ್ಗಳನ್ನು ಮಾಡುವ ಮೂಲಕ ಮಾರ್ಕ್ ಸಿನಿಮಾ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡುತ್ತಿದ್ದಾರೆ.
ಸದ್ಯ ಎಕ್ಸ್ನಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ನಡೆದ ಪ್ರೀರಿಲೀಸ್ ಈವೆಂಟ್ ವೇಳೆ ಹೇಳಿದ ಮಾತುಗಳು ನೆನೆಪಿಗೆ ಬರುತ್ತಿದೆ. ಡಿ.25ಕ್ಕೆ ಒಂದು ಸಿನಿಮಾ (ಮಾರ್ಕ್) ಬಿಡುಗಡೆಯಾಗುತ್ತದೆ. ಅದೇ ಸಮಯದಲ್ಲಿ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ ಎಂದಿದ್ದರು. ಬಹುಶಃ ಮಾರ್ಕ್ ಸಿನಿಮಾ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡಲೆಂದೇ ಒಂದು ಪಡೆ ಕಾರ್ಯನಿರತವಾಗಿದೆ ಅನ್ನೋದು ಈ ಬೆಳವಣಿಗೆಯಿಂದ ಗೊತ್ತಾಗುತ್ತಿದೆ.
ಆದರೆ, ಮಾರ್ಕ್ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದವರು ಟ್ವಿಟರ್ನಲ್ಲಿ ತಮ್ಮ ವಿಮರ್ಶೆಗಳನ್ನು ಬರೆದುಕೊಂಡಿದ್ದು, ಉತ್ತಮ ಮನರಂಜನಾ ಸಿನಿಮಾ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದರ ನಡುವೆ ಕೆಲವರು ನೆಗೆಟಿವ್ ಟ್ರೆಂಡ್ ಶುರು ಮಾಡಿರುವುದನ್ನು ನೋಡಿದರೆ, ಕಾಣದ ಕೈಗಳ ಕೈವಾಡ ಇದರಲ್ಲಿದೆ ಎಂಬ ಅನುಮಾನ ಹೊಗೆಯಾಡತೊಡಗಿದೆ.