ಲೈವ್ ಮ್ಯೂಸಿಕ್ ಕಾನ್ಸರ್ಟ್
ಏ.4 - ಘಾಜಿಯಾಬಾದ್ನ ರಾಜಕುಮಾರ್ ಗೋಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗಾಯಕಿ ಸುನಂದಾ ಶರ್ಮಾ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಆಗ, ಹಠಾತ್ ಕಾಲೇಜು ವಿದ್ಯಾರ್ಥಿಯೊಬ್ಬ ವೇದಿಕೆ ಮೇಲೆ ಬಂದು ಅವರ ಕಾಲಿಗೆ ನಮಸ್ಕರಿಸಲು ಮುಂದಾದ. ಹೆದರಿದ ಸುನಂದಾ, ಹಾಡುವುದನ್ನು ನಿಲ್ಲಿಸಿ, ವೇದಿಕೆಯ ಹಿಂದಕ್ಕೆ ಓಡಿದರು. ತಕ್ಷಣ ಬೌನ್ಸರ್ಗಳು ಆ ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಸಿಳಿಸಿದರು.
ಮಾ. 28 - ಗಾಯಕ ಅರ್ಪಿತ್ ಬಾಲಾ ಹೈದರಾಬಾದ್ನಲ್ಲಿ ಕಾರ್ಯಕ್ರಮ ನೀಡುವಾಗ, ಅವರ ಮುಖಕ್ಕೆ ನೀರಿನ ಬಾಟಲ್ ಬಂದು ಬಿದ್ದಿತ್ತು. ಅದನ್ನು ಎಸೆದ ವ್ಯಕ್ತಿಯನ್ನು ಗುರುತು ಹಿಡಿದ ಗಾಯಕ, ಆತನ ವಿರುದ್ಧ ಹರಿಹಾಯ್ದಿದ್ದರು.
ಫೆ.8 - ಹುಬ್ಬಳ್ಳಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಜನಜಂಗುಳಿಯಲ್ಲಿ ಕಳೆದು ಹೋಗಿದ್ದ ಬಾಲಕನನ್ನು ವೇದಿಕೆ ಮೇಲೆ ಕರೆತಂದ ಗಾಯಕ ಸೋನು ನಿಗಮ್, ಆತನ ಸಂಬಂಧಿಕರನ್ನು ಹುಡುಕಲು ಸಹಾಯ ಮಾಡಿದ್ದರು.
ಫೆ. 6 - "ಧುರಂಧರ್' ಖ್ಯಾತಿಯ ಗಾಯಕಿ ಜಾಸ್ಮೀನ್ ಸ್ಯಾಂಡ್ಲಾಸ್ ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ, ಕೆಲ ಕಿಡಿಗೇಡಿಗಳು ಯುವತಿಯರಿಗೆ ಕಿರುಕುಳ ನೀಡುತ್ತಿರುವುದನ್ನು ಗಮನಿಸಿ, ಹಾಡುವುದನ್ನು ನಿಲ್ಲಿಸಿ, ಆ ಯುವಕರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಡಿ. 6 2025 - ಗಾಯಕಿ ಕನ್ನಿಕಾ ಕಪೂರ್ ಮೇಘಾಲಯದಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ, ವ್ಯಕ್ತಿಯೊಬ್ಬ ವೇದಿಕೆ ಮೇಲೆ ಬಂದು, ಅವರನ್ನು ಹಿಡಿದು ಎತ್ತಲು ಪ್ರಯತ್ನಿಸಿದ್ದ. ತಕ್ಷಣ ಆತನಿಂದ ಕನ್ನಿಕಾ ಹಿಂದೆ ಸರಿದಿದ್ದು, ಬೌನ್ಸರ್ಗಳು ಬಂದು ಪರಿಸ್ಥಿತಿ ನಿಭಾಯಿಸಿದರು.
ಹೀಗೆ ಕಳೆದ ನಾಲ್ಕು ತಿಂಗಳಲ್ಲಿ ಸಿಂಗರ್ಗಳು ಸ್ಟೇಜ್ ಶೋ ನೀಡುವಾಗ ನಾಲ್ಕೈದು ಅಹಿತಕರ ಘಟನೆಗಳು ನಡೆದಿವೆ. ವೇದಿಕೆಗೆ ನುಗ್ಗುವ, ಬಾಟಲ್ ಎಸೆಯುವ, ಜೋರಾಗಿ ಕಿರುಚುತ್ತಾ ಕಾಲೆಳೆಯುವ, ಜನರ ನಡುವೆ ಕಳೆದು ಹೋಗುವ... ಹೀಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾನಾ ರೀತಿಯ ಸವಾಲುಗಳನ್ನು ಗಾಯಕ, ಗಾಯಕಿಯರು ಎದುರಿಸಬೇಕಾಗುತ್ತದೆ. ಹಾಗಾದರೆ, ಇಂತಹ ಘಟನೆಗಳನ್ನು ನಿಭಾಯಿಸುವುದು ಹೇಗೆ? ಕನ್ನಡದ ಸಿಂಗರ್ಗಳು, ಆಯೋಜಕರು ಏನಂತಾರೆ?
ದಕ್ಷಿಣ ಭಾರತದಲ್ಲಿ ಕಡಿಮೆ
"ಕರ್ನಾಟಕದಲ್ಲಿ ಇಂತಹ ಘಟನೆಗಳು ತುಂಬ ಕಡಿಮೆ' ಎನ್ನುವ ಗಾಯಕಿ, ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್, "ಎರಡು ಸಾವಿರದಿಂದ ಲಕ್ಷ ಜನ ಸೇರುವ ಕಾರ್ಯಕ್ರಮವನ್ನೂ ಮಾಡಿದ್ದೇವೆ. ಎಲ್ಲ ಕಡೆ ಎಲ್ಲ ರೀತಿಯ ಜನ ಬರುತ್ತಾರೆ. ಆದರೆ, ಇದುವರೆಗೂ ಇಂತಹ ಮುಜುಗರ ಆಗುವಂತಹ ಗಲಾಟೆ ಮಾಡುವಂತಹ, ಕೂಗುವ, ಕಿರುಚುವ ಏನೋ ಎಸೆಯುವ ಟನೆ ನಡೆದಿಲ್ಲ. ಗಾಯಕರು ಮತ್ತು ಸಂಗೀತಾಭಿಮಾನಿಗಳಿಗೂ ಒಂದು ಜವಾಬ್ದಾರಿ ಇರುತ್ತದೆ. ಯಾರಾದರೂ ಒಬ್ಬರು ಈ ಜವಾಬ್ದಾರಿ ಮರೆತಾಗ ಇಂತಹ ಘಟನೆಗಳು ನಡೆಯುತ್ತವೆ. 60-70ರ ದಶಕದಿಂದಲೂ ಆರ್ಕೆಸ್ಟ್ರಾಗಳಿದ್ದವು. ಈಗ ಸಿನಿಮಾ ಹಾಡುಗಳ ಕಾರ್ಯಕ್ರಮ ಹೆಚ್ಚು ನಡೆಯುತ್ತವೆ. ಕೆಲವೊಮ್ಮೆ ಮದ್ಯಪಾನ ಮಾಡಿ ಬಂದು ಆ ಹಾಡು ಹಾಡಿ, ಈ ಹಾಡು ಬೇಕು ಅಂತ ಗಲಾಟೆ ಮಾಡುತ್ತಿದ್ದರು. ಅಂಥವರನ್ನು ಆಯೋಜಕರೇ ಹ್ಯಾಂಡಲ್ ಮಾಡುತ್ತಿದ್ದರು. ಜನ ಹೆಚ್ಚು ಹತ್ತಿರ ಬರದಂತೆ ನೋಡಿಕೊಳ್ಳುತ್ತಿದ್ದರು. 20 ವರ್ಷಗಳಿಂದ ಲೈವ್ ಕಾನ್ಸರ್ಟ್ಗಳನ್ನು ಮಾಡುತ್ತಿದ್ದೇವೆ. ಸರಿಯಾಗಿ ಹ್ಯಾಂಡಲ್ ಮಾಡದಿದ್ದಾಗ ಸಮಸ್ಯೆ ಉಂಟಾಗುತ್ತವೆ. ಬಾಲಿವುಡ್ನಲ್ಲಿ ರನ್ ಆರ್ಡರ್ ಬಿಟ್ಟು ಬೇರೆ ಹಾಡು ಹಾಡುವುದಿಲ್ಲ. ಪ್ರಾಂಪ್ಟ್ ತಪ್ಪಿ ಬೇರೆ ವಿಷಯಕ್ಕೆ ಹೋಗುವುದಿಲ್ಲ. ಅವರ ಲೈವ್ ಶೋಗಳಲ್ಲಿ ಸಿಂಗರ್ ಮತ್ತು ಆಡಿಯನ್ಸ್ ನಡುವೆ ಕನೆಕ್ಷನ್ ಇಲ್ಲ. ನಿರೀಕ್ಷೆಗಿಂತ ಹೆಚ್ಚು ಜನ ಬಂದಾಗಲೂ ಕೆಲವೊಮ್ಮೆ ಗೊಂದಲ ಉಂಟಾಗವುದುಂಟು. ಈ ವಿಷಯದಲ್ಲಿ ದಣದ ಪ್ರೇಕ್ಷಕರು ಉತ್ತಮ. ಇಲ್ಲಿ ಗಲಾಟೆ ಆದ ಘಟನೆಗಳು ತೀರಾ ಕಡಿಮೆ' ಎನ್ನುತ್ತಾರೆ.
ಎಲ್ಲರಿಗೂ ವೈರಲ್ ಆಗುವ ಅಮಲೇರಿದೆ
ನಟ, ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, "ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗಿವೆ. ನನಗೆ ಅನುಭವವಾಗಿಲ್ಲವಾದರೂ ಬೇರೆಯವರಿಗೆ ಆದ ವಿಡಿಯೋಗಳನ್ನು ನೋಡಿದ್ದೇನೆ. ನಾನು ಶೋ ನೀಡುವಾಗ ಕೆಲವೊಮ್ಮೆ ನಿವೇದಿತಾ ಹೆಸರು ಕೂಗಿ ಅಣಕಿಸುವ ಪ್ರಯತ್ನ ಮಾಡಿರುವುದುಂಟು. ಅದು ಸರಿಯಲ್ಲ. ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಸಾಧ್ಯವಾದಷ್ಟೂ ಅದನ್ನು ಸಮಧಾನವಾಗಿಯೇ ಹ್ಯಾಂಡಲ್ ಮಾಡಬೇಕು. ಸಾರ್ವಜನಿಕವಾಗಿ ಇದ್ದಾಗ, ನಮ್ಮನ್ನೇ ಹೆಚ್ಚು ಜಡ್ಜ್ ಮಾಡುತ್ತಾರೆ. ಇವತ್ತು ಕೆಲವರು ವೈರಲ್ ಆಗಲು, ಹಠಾತ್ ಜನಪ್ರಿಯತೆ ಪಡೆಯಲು ಜಿದ್ದಿಗೆ ಬಿದ್ದಿದ್ದಾರೆ. ಅದೊಂದು ರೀತಿ ಕೆಲವರಿಗೆ ಅಡಿಕ್ಷನ್ ಆಗಿಬಿಟ್ಟಿದೆ. ಅದಕ್ಕಾಗಿ ಯಾರು ಏನು ಮಾಡುತ್ತಾರೆ ಅಂತ ಗೊತ್ತಾಗಲ್ಲ. ಮದ್ಯಪಾನದ ಅಡಿಕ್ಷನ್ನಂತೆಯೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಬೇಕು ಎನ್ನುವುದೂ ಅಮಲಿನಂತಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದು ತಾಸು ಕ್ಯಾರಾವಾನ್ನಲ್ಲಿ ಲಾಕ್
ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ ಸೇರಿದ ಕಾರಣ ಗಾಯಕಿ ಮಾನಸ ಹೊಳ್ಳ ಒಂದು ತಾಸು ಕ್ಯಾರಾವಾನ್ನಲ್ಲೇ ಲಾಕ್ ಆಗಿದ್ದರಂತೆ. "ಪರಿಸ್ಥಿತಿ ಹತೋಟಿಗೆ ಬರದಿದ್ದರೆ, ತಕ್ಷಣ ಜನ ಕಡಿಮೆಯಾಗಿ, ಕಂಟ್ರೋಲ್ಗೆ ಸಿಗುವವರೆಗೂ ಕಾರ್ಯಕ್ರಮ ನಿಲ್ಲಿಸಬೇಕಾಗುತ್ತದೆ. ಅಂದೂ ಅದೇ ಮಾಡಬೇಕಾಯಿತು. ಕೆಲವೊಮ್ಮೆ ಜನ ಸ್ಟೇಜ್ಗೆ ನುಗ್ಗುವ ಘಟನೆಗಳು ನಡೆಯುತ್ತವೆ. ನನಗೆ ಅಂತಹ ಅನುಭವಗಳಾಗಿಲ್ಲ. ದೊಡ್ಡ ವೇದಿಕೆಗಳಲ್ಲಿ ಬೌನ್ಸರ್ಗಳಿರುತ್ತಾರೆ. ಜತೆಗೆ ಆಯೋಜಕರು ಕಂಟ್ರೋಲ್ ಮಾಡುತ್ತಾರೆ. ಸ್ಟಾರ್ಗಳು ಬಂದಾಗ ಕೆಲವೊಮ್ಮೆ ಹೆಚ್ಚು ಜನ ವೇದಿಕೆಯೇರಿ ಅವರ ಹತ್ತಿರ ಬರಲು ಯತ್ನಿಸುವುದುಂಟು. ಕೆಲವೊಮ್ಮೆ ಜನ ಹೆಚ್ಚಿದ್ದು, ಅವರನ್ನು ಕಂಟ್ರೋಲ್ ಮಾಡುವವರು ಕಡಿಮೆಯಿದ್ದಾಗ ಸಮಸ್ಯೆ ಆಗುವುದುಂಟು' ಎಂದು ಹೇಳಿಕೊಳ್ಳುತ್ತಾರೆ.
ಅಭಿಮಾನವಿರಲಿ, ಅಂಧಾಭಿಮಾನ ಬೇಡ
ಸುಮಾರು 800ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿರುವ ಮಿಮಿಕ್ರಿ ಕಲಾವಿದ, ನಟ, ನಿರೂಪಕ ಸಾಗರ್ ತುರುವೇಕೆರೆ, 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇಂತಹ ಘಟನೆಗಳ ಬಗ್ಗೆ, "ಜೈಲಿಗೆ ಹಾಕುತ್ತಾರೆ ಅಂತ ಗೊತ್ತಿದ್ದರೂ, ಬ್ಯಾರಿಕೇಡ್ ಹಾರಿ ಕ್ರಿಕೆಟ್ ಮೈದಾನಕ್ಕೆ ನುಗ್ಗುವ ಕ್ರಿಕೆಟ್ ಅಭಿಮಾನಿಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೂ ಕೆಲವೊಮ್ಮೆ ಅಭಿಮಾನದ ಜತೆ ಹುಚ್ಚು ಅಭಿಮಾನವೂ ಇರುತ್ತದೆ. ಒಮ್ಮೆಯಾದರೂ ತಮ್ಮ ನೆಚ್ಚಿನ ಗಾಯಕರನ್ನು ಮುಟ್ಟಬೇಕು ಅಂತ ವೇದಿಕೆಗೆ ಬರುವುದುಂಟು. ಖುಷಿ, ಎಕ್ಸೈಟ್ಮೆಂಟ್ ಅವರಿಂದ ಹಾಗೆ ಮಾಡಿಸುತ್ತದೆ. ಅದು ಅಭಿಮಾನದ ಕಿಕ್. ಹಲವು ಬಾರಿ ಇಂತಹ ಘಟನೆಗಳು ಆಗಿವೆ. ಪೊಲೀಸರು ಮತ್ತು ಬೌನ್ಸರ್ಗಳ ಮೂಲಕ ಒಂದು ಹಂತದವರೆಗೆ ಕಂಟ್ರೋಲ್ ಮಾಡಬಹುದು. ಕೆಲವೊಮ್ಮೆ ಒಬ್ಬ ಸ್ಟಾರ್ ಬಂದಾಗ ಮತ್ತೊಬ್ಬ ಸ್ಟಾರ್ ಹೆಸರು ಕೂಗಿ, ಅಂಧಾಭಿಮಾನ ತೋರುವುದು ಉಂಟು. ಕೆಲವೊಮ್ಮೆ ಮದ್ಯಪಾನ ಮಾಡಿ ಬಂದು ಗಲಾಟೆ ಮಾಡುವುದೂ ಉಂಟು. ಜತೆಗೆ ಉಡುಗೊರೆ ನೀಡುವುದು, ಕಾಲಿಗ ನಮಸ್ಕರಿಸುವ ಟನೆಗಳು ನಡೆಯುತ್ತವೆ. ಎಲ್ಲ ರೀತಿಯ ಜನರನ್ನೂ ಮ್ಯಾನೇಜ್ ಮಾಡಬೇಕು' ಎನ್ನುತ್ತಾರೆ.