ಇಟಗಿ ಶ್ರೀಗಳೊಂದಿಗೆ ಶ್ರೀಅನ್ನದಾನೇಶ್ವರ ಮಹಾತ್ಮೆ ಚಿತ್ರತಂಡ 
ಸ್ಯಾಂಡಲ್‌ವುಡ್

‘ಶ್ರೀ ಅನ್ನದಾನೇಶ್ವರ ಮಹಾತ್ಮೆ’: ತೆರೆ ಮೇಲೆ ಬರುತ್ತಿದೆ ‘ಪುಸ್ತಕ ಜಗದ್ಗುರು’ಗಳ ಮಹಿಮೆ

ಗದಗದ ಮುಂಡರಗಿ ತಾಲೂಕಿನ ಆರಾಧ್ಯ ದೈವ, ಪುಸ್ತಕ ಜಗದ್ಗುರು ಎಂದೇ ಪ್ರಸಿದ್ಧಯಾಗಿದ್ದ ನಾಡೋಜ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳ ಜೀವನ ಹಾಗೂ ಆಧ್ಯಾತ್ಮಿಕ ಸಾಧನೆ ಕುರಿತು ಕನ್ನಡದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ‘ಶ್ರೀ ಅನ್ನದಾನೇಶ್ವರ ಮಹಾತ್ಮೆ’ ಎಂದು ಹೆಸರಿಡಲಾಗಿದೆ. ಗೌರಿ ಎಲ್. ರಾಮೇಗೌಡ ಈ ಧಾರ್ಮಿಕ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ನಟ ಅಭಿಜಿತ್ ಅನ್ನದಾನೇಶ್ವರ ಶ್ರೀಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಗದಗದ ಮುಂಡರಗಿ ತಾಲೂಕಿನ ಆರಾಧ್ಯ ದೈವ, ಪುಸ್ತಕ ಜಗದ್ಗುರು ಎಂದೇ ಪ್ರಸಿದ್ಧಯಾಗಿದ್ದ ನಾಡೋಜ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳ ಜೀವನ ಹಾಗೂ ಆಧ್ಯಾತ್ಮಿಕ ಸಾಧನೆ ಕುರಿತು ಕನ್ನಡದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ‘ಶ್ರೀ ಅನ್ನದಾನೇಶ್ವರ ಮಹಾತ್ಮೆ’ ಎಂದು ಹೆಸರಿಡಲಾಗಿದೆ. ಗೌರಿ ಎಲ್. ರಾಮೇಗೌಡ ಈ ಧಾರ್ಮಿಕ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ನಟ ಅಭಿಜಿತ್ ಅನ್ನದಾನೇಶ್ವರ ಶ್ರೀಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಟಗಿ ಶ್ರೀಗಳು ಟ್ರೇಲರ್ ರಿಲೀಸ್ ಮಾಡಿದರೆ, ಅಂತಃಪುರ ಶ್ರೀಗಳು ಧ್ವನಿ ಸುರುಳಿ ಬಿಡುಗಡೆ ಮಾಡಿ ಆಶೀರ್ವದಿಸಿದರು. ನಿರ್ದೇಶಕಿ ಗೌರಿ, ‘ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ನನಗೆ ನಿರ್ದೇಶಕಿಯಾಗಿ ಇದು ಮೊದಲ ಚಿತ್ರ. ನನಗೆ ದೈವದ ಬಗ್ಗೆ ಒಲವು ಜಾಸ್ತಿ. ನಾನು ರಾಯರ ಪರಮಭಕ್ತೆ. 100ಕ್ಕೂ ಹೆಚ್ಚು ಸ್ವಾಮಿಗಳು, ಸಿದ್ದಗಂಗಾ ಮತ್ತು ಅನ್ನದಾನೇಶ್ವರ ಮಠದ 25 ಸಾವಿರ ಮಕ್ಕಳು ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕೊಪ್ಪಳ, ಶಿವಯೋಗ ಮಂದಿರ, ಮುಂಡರಗಿ, ಬೆಂಗಳೂರು, ಶ್ರೀರಂಗಪಟ್ಟಣ, ಸಿದ್ದಗಂಗಾ ಮಠದ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು. ಅಭಿಜಿತ್, ‘ಈ ಚಿತ್ರದಲ್ಲಿ ಅಭಿನಯಿಸುವುದು ಗುರುಗಳ ಆಶೀರ್ವಾದ ಹಾಗೂ ದೇವರ ಇಚ್ಛೆ. ಇಂತಹ ಕಥೆ ಮಾಡಬೇಕಾದರೆ ನೇಟಿವಿಟಿ ಬಹಳ ಮುಖ್ಯ. ಈ ಪಾತ್ರ ಸಿಕ್ಕಿದ್ದುನನ್ನ ಪೂರ್ವಜನ್ಮದ ಪುಣ್ಯ’ ಎಂದು ಖುಷಿ ವ್ಯಕ್ತಪಡಿಸಿದರು. ಸಂಜಯ್ ಬೇವಿನಾಳ್ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದು, ವಿ.ಮನೋಹರ್ ಸಂಗೀತ, ಎನ್.ಎಂ.ವಿಶ್ವ ಸಂಕಲನ ಚಿತ್ರಕ್ಕಿದೆ.