Peekaboo - "ಮಾಸ್ತಿಗುಡಿ' ಬಳಿಕ ಮದುವೆಯಾದ ಕಾರಣ ನಟಿ ಅಮೂಲ್ಯ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ, "ಶ್ರಾವಣಿ ಸುಬ್ರಹ್ಮಣ್ಯ' ನಿರ್ದೇಶಕ ಮಂಜು ಸ್ವರಾಜ್ ಆ್ಯಕ್ಷನ್-ಕಟ್ ಹೇಳುತ್ತಿರುವ "ಪೀಕಬೂ' ಚಿತ್ರದ ಮೂಲಕ ಒಂಬತ್ತು ವರ್ಷಗಳ ನಂತರ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಹಾಸ್ಯಮಯ ಟೀಸರ್ ಮೂಲಕ ಅಮೂಲ್ಯ ಕಮ್ಬ್ಯಾಕ್ ಬಗ್ಗೆ ಚಿತ್ರತಂಡ ಘೋಷಿಸಿತ್ತು. ಆಗಿನಿಂದಲೂ ಅಮೂಲ್ಯ ರಿ-ಎಂಟ್ರಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಇದೀಗ ಈ ಚಿತ್ರಕ್ಕೆ ನಾಯಕನ ಆಯ್ಕೆಯಾಗಿದೆ. "ಇರುವುದೆಲ್ಲವ ಬಿಟ್ಟು', "ಜಸ್ಟ್ ಪಾಸ್', "ಹೊಂದಿಸಿ ಬರೆಯಿರಿ' ಖ್ಯಾತಿಯ ಶ್ರೀರಾಮ್ "ಪೀಕಬೂ'ನಲ್ಲಿ ಅಮೂಲ್ಯಗೆ ಜೋಡಿಯಾಗಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಖುದ್ದು ಅಮೂಲ್ಯ ಟೀಸರ್ ಮೂಲಕ ಶ್ರೀರಾಮ್ನ ಪರಿಚಯಿಸಿದ್ದಾರೆ.
ನಿರ್ದೇಶಕ ಮಂಜು ಸ್ವರಾಜ್, "ಶ್ರೀರಾಮ್ ಕ್ಲಾಸ್ ಪಾತ್ರದಲ್ಲಿ ಸ್ಟೆ$ಲಿಶ್ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೇಕಡಾ 40ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಪ್ರಾರಂಭಿಸಲಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಇದೆ. ಉಳಿದ ನಾಲ್ಕು ಹಾಡುಗಳ ಶೂಟಿಂಗ್ ಕರ್ನಾಟಕದಲ್ಲೇ ನಡೆಯಲಿದೆ. ಮೇನಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
ಗೊತ್ತು ಆದರೆ ಗೊತ್ತಿಲ್ಲ!
"ಪೀಕಬೂ' ಬಗ್ಗೆ ಮಂಜು ಸ್ವರಾಜ್, "ಇದು ಎಲ್ಲರಿಗೂ ರಿಲೇಟ್ ಆಗುವ, ಎಲ್ಲರ ಜೀವನದಲ್ಲೂ ನಡೆದಿರುವ, ಅಕ್ಕ&ಪಕ್ಕದಲ್ಲಿ ನೋಡಿರುವ, ಸ್ನೇಹಿತರು, ಸಂಬಂಧಿಕರ ಬಳಿ ಕೇಳಿರುವ, ಎಲ್ಲರಿಗೂ ಗೊತ್ತಿರುವ ಆದರೆ, ಯಾರೂ ಮುಟ್ಟದ ಕಥೆ. "ಸು ಫ್ರಮ್ ಸೋ' ಒಂದು ಹಾರರ್ ಕಾಮಿಡಿ ಡ್ರಾಮಾ ಆಗಿತ್ತು. ಅದೇ ರೀತಿಯ ಹಾಸ್ಯ ನಮ್ಮ ಚಿತ್ರದಲ್ಲೂ ಇರಲಿದೆ. ಆದರೆ, ಇದು ಕಾಮಿಡಿ ಫ್ಯಾಮಿಲಿ ಡ್ರಾಮಾ. ಅಮೂಲ್ಯ ಸ್ಟಾರ್ ಆಗಿದ್ದಾಗಲೇ ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು. ಅವರನ್ನು ಮತ್ತೊಂದು ಹಂತದಲ್ಲಿ ಈ ಸಿನಿಮಾ ನೋಡಬಹುದು' ಎನ್ನುತ್ತಾರೆ.