- "ತಂದೆ-ಮಗನ ಬಾಂಧವ್ಯ ಸಾರುವ ಸಿನಿಮಾ
- ಪ್ರೀ-ರಿಲೀಸ್ ಇವೆಂಟ್ ನಲ್ಲಿ ನಟ ಶಿವರಾಜಕುಮಾರ್ ಭಾಗಿ
- ಸಾಯಿಕುಮಾರ್ ಒಡನಾಟ ನೆನೆದ ಹ್ಯಾಟ್ರಿಕ್ ಹೀರೋ
ಬೆಂಗಳೂರು : ‘ತಾರಕಾಸುರ’, ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದೇ ಶುಕ್ರವಾರ (ಜ. 30) ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.ನಟ ಪೃಥ್ವಿ ಅಂಬಾರ್, ‘ದೊಡ್ಮನೆ’ ಕುಡಿ ಧನ್ಯಾ ರಾಮ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದು, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ರಿಲೀಸ್ ಆದ ಟೀಸರ್, ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈರಲ್ ಆಗಿವೆ. ಇತ್ತೀಚೆಗೆ ಚಿತ್ರತಂಡ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದು, ನಟ ಶಿವರಾಜಕುಮಾರ್ ಆಗಮಿಸಿ, ತಂಡಕ್ಕೆ ಶುಭ ಹಾರೈಸಿದರು. ನಟ ಪೃಥ್ವಿ ಅಂಬಾರ್, ‘‘ಚೌಕಿದಾರ್’ನಲ್ಲಿ ನಾನು ಹೆಸರಿಗೆ ಮಾತ್ರ ಹೀರೋ. ಸಾಯಿಕುಮಾರ್ ಈ ಕಥೆಯ ನಿಜವಾದ ಹೀರೋ. ಚಂದ್ರಶೇಖರ್ ಬಂಡಿಯಪ್ಪ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಚೆನ್ನಾಗಿ ತೋರಿಸಿದ್ದಾರೆ. ಈ ಪಯಣ ನನಗೆ ದೊಡ್ಡ ಅನುಭವ ನೀಡಿದೆ’ ಎಂದು ಖುಷಿ ಹಂಚಿಕೊಂಡರು. ಸಾಯಿಕುಮಾರ್, ‘50 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ‘ಚೌಕಿದಾರ್’ ಪಾತ್ರ ಅಪರೂಪವಾಗಿದೆ. ಕಥೆಗೆ ಕೇಳಿದ ತಕ್ಷಣವೇ ಸಂತೋಷದಿಂದ ಒಪ್ಪಿಕೊಂಡು ಕೆಲಸ ಮಾಡಿದೆ. ನನ್ನ ಮತ್ತು ಶಿವಣ್ಣ ಬಾಂದವ್ಯ ಬಹಳ ವರ್ಷಗಳದು. ಈಗ ಇಬ್ಬರು ಸೇರಿ ‘ಬೇಲ್’ ಸಿನಿಮಾ ಮಾಡುತ್ತಿದ್ದೇವೆ’ ಎಂದು ಶಿವಣ್ಣನ ಒಡನಾಟದ ಬಗ್ಗೆ ಹಂಚಿಕೊಂಡರು. ಪೃಥ್ವಿ, ಧನ್ಯಾ, ಸಾಯಿಕುಮಾರ್ ಜತೆ ‘ಚೈತ್ರದ ಪ್ರೇಮಾಂಜಲಿ’ ನಟಿ ಶ್ವೇತಾ, ಸುಧಾರಾಣಿ, ‘ಬಿಗ್‌ಬಾಸ್ ಕನ್ನಡ ಸೀಸನ್ 12ರ’ ವಿಜೇತ ಗಿಲ್ಲಿ ನಟರಾಜ್, ಹಿರಿಯ ನಟ ಧರ್ಮ ಕಲಾಬಳಗದಲ್ಲಿದ್ದಾರೆ. ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ.
ತಂದೆಯೇ ನನ್ನ "ಚೌಕಿದಾರ'
ಪ್ರೀ-ರಿಲೀಸ್ ಇವೆಂಟ್‌ನಲ್ಲಿ ನಟ ಶಿವರಾಜ್‌ಕುಮಾರ್ ಭಾಗವಹಿಸಿ,‘ಚೌಕಿದಾರ್’ ಸಾಂಗ್‌ಗೆ ಹೆಜ್ಜೆ ಹಾಕಿದರು. ‘ಚಂದ್ರಶೇಖರ್ ಬಂಡಿಯಪ್ಪ ಜತೆ ಎರಡು ಸಿನಿಮಾಗಳು ಆಗಬೇಕಿತ್ತು. ಯಾಕೋ ಟೇಕ್ಾ ಆಗಲಿಲ್ಲ. ನನ್ನ ಇಷ್ಟದ ಡೈರೆಕ್ಟರ್‌ಗಳಲ್ಲಿ ಅವರು ಒಬ್ಬರು. ಯುವ ಕಲಾವಿದರು ಹೆಚ್ಚು ಬೆಳೀಬೇಕು. ಅವರೇ ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋಗುವವರು. ‘ಚೌಕಿದಾರ್’ನಲ್ಲಿ ಪೃಥ್ವಿ ಗೆಟಪ್ ಚೆನ್ನಾಗಿದ್ದು, ಧನ್ಯಾ ಕೂಡ ಗ್ಲಾಮರ್ ರೋಲ್ ಮಾಡದೆ, ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಯಾವಾಗ ಮಗ, ತಂದೆಗೆ ಸ್ನೇಹಿತನಾಗುತ್ತಾನೋ ಬಳಿಕ ತಂದೆ ಕೂಡ ಮಗನನ್ನು ಸ್ನೇಹಿತನಂತೆ ಕಾಣುತ್ತಾನೆ. ನನ್ನ ತಂದೆ ನನಗೆ ಒಳ್ಳೆಯ ಸ್ನೇಹಿತ, ಅವರೇ ‘ಚೌಕಿದಾರ’ ಎಂದು ಶಿವಣ್ಣ ಸಂತಸಹಂಚಿಕೊಂಡರು.