ಹಾಡು ಹೇಳಿ ಮಗು ಮಲಗಿಸಿದ ನಟ ಶಿವರಾಜ್ಕುಮಾರ್
- ನಟ ಶಿವರಾಜ್ ಕುಮಾರ್ ಪ್ರಸ್ತುತ ಕನ್ನಡ ಚಿತ್ರರಂಗದ ನಾವಿಕ ಎನ್ನುವುದರಲ್ಲಿ ಎರಡು ಮಾತಿಲ್ಲ
- 63 ವರ್ಷ ವಯಸ್ಸಾದರೂ ಇಂದಿಗೂ ಚಿರಯುವಕನಂತೆ ಕಾಣುವ ಹ್ಯಾಟ್ರಿಕ್ ಹೀರೋ ಎಲ್ಲರಿಗೂ ಸ್ಫೂರ್ತಿ
- ತಾನೊಬ್ಬ ಸ್ಟಾರ್ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದ ಸರಳತೆಯ ಸಾಹುಕಾರ
- ಶಿವಣ್ಣನ ಬಗ್ಗೆ ಯಾರೇ ಮಾತನಾಡಿದರೂ ಅವರದ್ದು ಮಗುವಿನಂತಹ ಮನಸ್ಸು ಎಂದು ಹೇಳುತ್ತಾರೆ
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ( Shiva Rajkumar ) ಪ್ರಸ್ತುತ ಕನ್ನಡ ಚಿತ್ರರಂಗದ ನಾವಿಕ ಎನ್ನುವುದರಲ್ಲಿ ಎರಡು ಮಾತಿಲ್ಲ. 63 ವರ್ಷ ವಯಸ್ಸಾದರೂ ಇಂದಿಗೂ ಚಿರಯುವಕನಂತೆ ಕಾಣುವ ಹ್ಯಾಟ್ರಿಕ್ ಹೀರೋ ಎಲ್ಲರಿಗೂ ಸ್ಫೂರ್ತಿ. ತಾನೊಬ್ಬ ಸ್ಟಾರ್ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದ ಸರಳತೆಯ ಸಾಹುಕಾರ. ಹೀಗಾಗಿಯೇ ಚಿತ್ರರಂಗದಲ್ಲಿ ಎಲ್ಲರೂ ಪ್ರೀತಿಯಿಂದ ಶಿವಣ್ಣ ಎಂದು ಕರೆಯುತ್ತಾರೆ. ಅವರ ಬಗ್ಗೆ ಯಾರೇ ಮಾತನಾಡಿದರೂ ಶಿವಣ್ಣ ಅವರದ್ದು ಮಗುವಿನಂತಹ ಮನಸ್ಸು ಎಂದು ಹೇಳುತ್ತಾರೆ. ಅದಕ್ಕೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿವಣ್ಣ ಎಲ್ಲರೊಂದಿಗೆ ಮಗುವಿನಂತೆ ಬೆರೆತು ಹೋಗುತ್ತಾರೆ ಎಂಬ ಮಾತಿದೆ. ಅದೇ ರೀತಿ ಮಕ್ಕಳೊಂದಿಗೆ ಇದ್ದರೆ ಅವರು ಕೂಡ ಮಗುವಿನಂತೆ ಆಗಿಬಿಡುತ್ತಾರೆ ಎನ್ನುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತಿರೋ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಶಿವಣ್ಣ, ಹಾಡು ಹೇಳಿ ಮಗುವೊಂದನ್ನು ಮಲಗಿಸಿರುವ ಮನಮುಟ್ಟುವ ದೃಶ್ಯವಿದೆ.
ರಿಯಾಲಿಟಿ ಶೋ ವೇದಿಕೆಯಲ್ಲೇ ಮಗುವೊಂದನ್ನು ತನ್ನ ಪಕ್ಕದಲ್ಲಿ ಮಲಗಿಸಿಕೊಂಡ ಶಿವಣ್ಣ, ತಮ್ಮ ತಂದೆ ಡಾ. ರಾಜ್ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾದ ಆಡೋಣ ನೀನು.. ನಾನು.. ಎಂಬ ಹಾಡು ಹೇಳಿ ಮಗುವನ್ನು ವೇದಿಕೆಯಲ್ಲಿ ಮಲಗಿಸುತ್ತಾರೆ. ಶಿವಣ್ಣ ಆಡಿದ ಜೋಗುಳ ಕೇಳುತ್ತಾ ಮಗು ನಿದ್ರೆಗೆ ಜಾರಿದ ಅಪರೂಪದ ದೃಶ್ಯ ವೈರಲ್ ವಿಡಿಯೋದಲ್ಲಿದೆ.
ಅಂದಹಾಗೆ, ಈ ವಿಡಿಯೋ ಸೆರೆಹಿಡಿದಿದ್ದು ಬೇರೆ ಯಾರೂ ಅಲ್ಲ, ಸ್ವತಃ ಶಿವಣ್ಣ ಅವರ ಧರ್ಮಪತ್ನಿ ಗೀತಾ ಅವರು. ತಮ್ಮ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಶಿವಣ್ಣ ಅವರದ್ದು ನಿಜಕ್ಕೂ ಮಗುವಿನಂತಹ ಮನಸ್ಸು ಎಂಬ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶಿವಣ್ಣ ಅವರು ಕೊನೆಯದಾಗಿ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲಿ ಕಾಣಿಸಿಕೊಂಡರು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. 666 ಆಪರೇಷನ್ ಡ್ರೀಮ್ ಥಿಯೇಟರ್, ಉತ್ತರಾಖಂಡ, ಎ ಫಾರ್ ಆನಂದ್, ಭೈರವನ ಕೊನೆ ಪಾಠ ಹಾಗೂ ಗುಮ್ಮಡಿ ನರಸಯ್ಯ ಸಿನಿಮಾಗಳಿವೆ. ಇದರೊಂದಿಗೆ ರಿಯಾಲಿಟಿ ಶೋಗಳಲ್ಲಿಯೂ ಬಿಜಿಯಾಗಿದ್ದಾರೆ.