ಬೆಂಗಳೂರು:
"ಮಿಥ್ಯ' ಚಿತ್ರದ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ "ಶಂಕರಾಭರಣ'. ಮೊದಲ ಬಾರಿಗೆ ಔಟ್ ಆ್ಯಂಟ್ ಔಟ್ ಕಮರ್ಷಿಯಲ್ ಸಿನಿಮಾ ನಿರ್ದೇಶಿಸಿರುವ ಕಾರಣ ಈ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. ಹಾಗೇ ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ನಾಯಕ ನಟ ಶೈನ್ ಶೆಟ್ಟಿ ಬಸ್ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಸುಮಂತ್ ಭಟ್ ಅವರ "ಏಕಂ' ಎಂಬ ವೆಬ್ಸರಣಿಯಲ್ಲಿ ನಟಿಸಿದ್ದೆ. ಅದರಲ್ಲಿ ಬಸ್ನ ಒಂದು ಸೀಕ್ವೆನ್ಸ್ ಇದೆ. ಆಗ ಬಸ್ ಸುತ್ತ ಸಿನಿಮಾ ಮಾಡುವ ಐಡಿಯಾ ಬಂತು. ಹಾಗೇ "ಡಕೋಟಾ ಎಕ್ಸ್ಪ್ರೆಸ್' ಬಳಿಕ ಬಸ್ನಲ್ಲಿ ನಡೆಯುವ ಕಥೆ ಬಂದಿಲ್ಲ. ಜತೆಗೆ ನಮ್ಮೂರುಗಳಿಗೆ ಬರುತ್ತಿದ್ದ ಬಸ್ಗಳ ಡೆವರ್, ಕಂಡಕ್ಟರ್ಗಳೇ ಸ್ಟೆ$ಲಿಶ್ ಆಗಿರುತ್ತಿದ್ದರೆ. ಅವರೇ ನಮಗೆ ಹೀರೋಗಳಂತೆ ಕಾಣುತ್ತಿದ್ದರು. ಅಂತಹ ಒಬ್ಬ ಚಾಲಕನ ಪಾತ್ರ ನನ್ನದು' ಎಂದು ಹೇಳಿಕೊಳ್ಳುತ್ತಾರೆ ಶೈನ್ ಶೆಟ್ಟಿ. ಚಿತ್ರದ ಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಖುದ್ದು ಶೈನ್ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಚಿತ್ರದಲ್ಲಿ ಪಾತ್ರಗಳಷ್ಟೇ ಬಸ್ಗೂ ಪ್ರಾಮುಖ್ಯ ನೀಡಿರುವುದು ವಿಶೇಷ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಖಾಸಗಿ ಬಸ್ಗಳೇ ಈಗಲೂ ಸಂಪರ್ಕ ಸೇತುವೆಗಳಾಗಿವೆ. ಸಾಲ ಸೋಲ ಮಾಡಿ ಬಸ್ ಖರೀದಿಸುವ ಚಾಲಕ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ? ಹಾಗೂ ಕೆಲ ರಸ್ತೆಗಳಿಗೆ ಬೆಸೆದುಕೊಂಡಿರುವ ದೆವ್ವದ ಕಥೆಗಳ ಸುತ್ತ ಸಿನಿಮಾ ಸಾಗುತ್ತದೆ. "ಅಂಬಿಲಿ', "2018' ಸೇರಿ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬೆಂಗಳೂರಿನ ಹುಡುಗಿ ತನ್ವಿ ರಾಮ್, "ಶಂಕರಾಭರಣ' ಹತ್ತಿ ಶೈನ್ಗೆ ಜೋಡಿಯಾಗಿ, ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಹುಭಾಷಾ ನಟ ಸಂಪತ್ ಕುಮಾರ್ ವಿಲನ್ ಆಗಿದ್ದು, ಕೃತಿ ಶೆಟ್ಟಿ, ಅನಿಲ್ ಕುಮಾರ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ ತಾರಾಗಣದಲ್ಲಿದ್ದಾರೆ. ಸಿನಿಮಾ ಇದೇ 20ರಂದು ರಿಲೀಸ್ ಆಗಲಿದೆ.
ಖಾಸಗಿ ಬಸ್ಗಳು ಮಲೆನಾಡು, ಕರಾವಳಿಯ ಪ್ರದೇಶಗಳ ಜನರ ಜೀವನದ ಭಾಗವಾಗಿವೆ. ಹೀಗಾಗಿಯೇ ಬಸ್ಗಳನ್ನೂ ಅವುಗಳ ಹೆಸರಿನಲ್ಲಿ ವ್ಯಕ್ತಿಗಳಂತೆಯೇ ಕರೆಯುತ್ತಾರೆ. ಅಂತಹ "ಶಂಕರಾಭರಣ' ಎಂಬ ಬಸ್ ಮತ್ತದರ ಚಾಲಕನ ಸುತ್ತ ಸಾಗುವ ಕಥೆಯಿದು. 62 ದಿನ, ಬಹುತೇಕ ರಾತ್ರಿ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ನಮ್ಮ ಕಥೆಗಳನ್ನು ನಮಗೆ ಹೇಗೆ ಅನ್ನಿಸುತ್ತದೋ ಹಾಗೇ ಹೇಳಬೇಕು ಅಂತ "ರಂಗಸ್ಥಳ ಸ್ಟುಡಿಯೋಸ್' ಬ್ಯಾನರ್ನಲ್ಲಿ ಈ ಕಥೆಯನ್ನು ನಿರ್ಮಿಸಿದ್ದೇನೆ.- ಶೈನ್ ಶೆಟ್ಟಿ, ನಾಯಕ