ಶೈನ್ ಶೆಟ್ಟಿ 
ಸ್ಯಾಂಡಲ್‌ವುಡ್

SHANKARABHARANA MOVIE REVIEW: ಶಂಕರಾಭರಣ ಜರ್ನಿಯಲ್ಲಿ ನಗು, ಅಳು, ಭಯ

ಶೈನ್ ಬರೆದಿರುವ ಕಥೆಗೆ ‘ಮಿಥ್ಯ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕರಾವಳಿ ಸೊಗಡಿನಲ್ಲಿ ಸಾಗುವ ಕಥೆಯಲ್ಲಿ ಊರ ಸಾಹುಕಾರನ ಅಟ್ಟಹಾಸ ಮತ್ತು ದೆವ್ವದ ಭಯವಿದೆ. ಅದರ ನಡುವೆ ಶಂಕರ ಮತ್ತು ಸಹಚರರ ಕಚಗುಳಿಯಿದೆ. ನಿಗೂಢವಾಗಿ ಕೊಲೆಯಾದವರ ಅಳುವಿದೆ.

ವಿಜಯವಾಣಿ ಸುದ್ದಿ ಜಾಲ, ಶಿವಮಲ್ಲಯ್ಯ ಸ್ಥಾವರಮಠ

ಚಿತ್ರ: ಶಂಕರಾಭರಣ

ನಿರ್ದೇಶನ: ಸುಮಂತ್ ಭಟ್

ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ತನ್ವಿ ರಾವ್, ಸಂಪತ್ ರಾಜ್, ದೀಪಕ್ ರೈ ಪಾಣಾಜೆ ಮತ್ತಿತರರು.

ಸಾಹುಕಾರ ಮಧುಕರನ ಟ್ರಾವೆಲ್ಸ್‌ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವಾತ ಶಂಕರ (ಶೈನ್). ಒಂದು ದಿನ ಸಾಹುಕಾರನ ಮಗ ಬಸ್‌ನಲ್ಲಿ ಕೆಟ್ಟ ಕೆಲಸ ಮಾಡಿದ ಎಂಬ ಕಾರಣಕ್ಕೆ ಆತನಿಗೆ ಶಂಕರ ಥಳಿಸುತ್ತಾನೆ. ಅದು ಮಧುಕರನ ಕೋಪಕ್ಕೆ ಕಾರಣವಾಗಿ ಶಂಕರನಿಗೆ ಅವಮಾನಿಸುತ್ತಾನೆ. ಅಷ್ಟು ದಿನ ನಿಷ್ಠಾವಂತ ಸೇವಕನಂತೆ ಕೆಲಸ ಮಾಡಿದ್ದ ಶಂಕರನ ಸ್ವಾಭಿಮಾನಕ್ಕೆ ಧಕ್ಕೆ ಬಂದು, ಆ ಟ್ರಾವೆಲ್ಸ್‌ನಿಂದ ಹೊರನಡೆದು, ಸ್ವಂತ ಬಸ್ ಖರೀದಿಸಬೇಕು ಎಂದು ಪಣ ತೊಡುತ್ತಾನೆ. ಅಮ್ಮನ ಒಡವೆ ಮಾರಿ, ಪ್ರೇಯಸಿ ಜೆನ್ನಿ (ತನ್ವಿ) ನೆರವಿನಿಂದ ತೌಡುಗೋಳಿಯಲ್ಲಿ 25 ವರ್ಷಗಳಿಂದ ನಿಂತಿರುವ ಬಸ್‌ಅನ್ನು ಶಂಕರ ಖರೀದಿಸುತ್ತಾನೆ. ಇನ್ನು ಉಡುಪಿಯಲ್ಲಿಯೇ ಟ್ರಿಪ್ ಆರಂಭಿಸಬೇಕು ಎಂಬುದಕ್ಕೆ ಮಧುಕರ ಅಡ್ಡಗಾಲು ಹಾಕುತ್ತಾನೆ. ಯಾರ ಮರ್ಜಿಗೂ ಒಳಗಾಗದ ಶಂಕರ ತೌಡುಗೋಳಿಯಿಂದಲೇ ಬಸ್ ಪ್ರಯಾಣ ಆರಂಭಿಸುತ್ತಾನೆ. ತೌಡುಗೋಳಿ ಎಂಬುದು ನಿಗೂಢ ಊರು. ಅಲ್ಲಿ ಎಷ್ಟೋ ಹೆಣ್ಣು ಮಕ್ಕಳ ಕೊಲೆಯಾಗಿರುತ್ತದೆ. ಜತೆಗೆ ದೆವ್ವದ ಕಾಟ. ಅಂತಹ ಊರಿಗೆ ಬಸ್ ಪ್ರಯಾಣ ಆರಂಭಿಸುವ ಶಂಕರನ ನಗು, ಅಳು ಮತ್ತು ಭಯದ ಪ್ರಯಾಣವೇ ‘ಶಂಕರಾಭರಣ’.

ಶೈನ್ ಬರೆದಿರುವ ಕಥೆಗೆ ‘ಮಿಥ್ಯ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕರಾವಳಿ ಸೊಗಡಿನಲ್ಲಿ ಸಾಗುವ ಕಥೆಯಲ್ಲಿ ಊರ ಸಾಹುಕಾರನ ಅಟ್ಟಹಾಸ ಮತ್ತು ದೆವ್ವದ ಭಯವಿದೆ. ಅದರ ನಡುವೆ ಶಂಕರ ಮತ್ತು ಸಹಚರರ ಕಚಗುಳಿಯಿದೆ. ನಿಗೂಢವಾಗಿ ಕೊಲೆಯಾದವರ ಅಳುವಿದೆ. ಮೊದಲರ್ಧ ಸಂಪೂರ್ಣವಾಗಿ ರಂಜಿಸಿದರೆ, ದ್ವಿತೀಯಾರ್ಧ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಕಥೆಯಲ್ಲಿ ಕೆಲ ಕಡೆ ಲೆಕ್ಕಾಚಾರ ಕೈತಪ್ಪಿದಂತೆ ಕಾಣುತ್ತದೆ. 1986ರ ಕಾಲಘಟ್ಟದಲ್ಲಿ ಕಥೆ ಆರಂಭವಾಗಿ, ಕೆಲ ನಿಮಿಷಗಳಲ್ಲಿ 2010ಕ್ಕೆ ಬರುತ್ತದೆ. ಬಳಿಕ ಪ್ರಸ್ತುತ ಕಾಲಮಾನದಲ್ಲಿ ಸಾಗುವ ಬಗ್ಗೆ ಮಾಹಿತಿ ನೀಡಿಲ್ಲ. ಆಗ ಪ್ರೇಕ್ಷಕನಿಗೆ ದಿಕ್ಕು ತಪ್ಪಬಹುದು. ಶೈನ್ ಶೆಟ್ಟಿ ಇಡೀ ಕಥೆಯನ್ನು ಆವರಿಸಿದ್ದು, ನಗಿಸುವ ಜತೆಗೆ ಅಭಿನಯದಲ್ಲಿ ಮಾರ್ಕ್ ಗಳಿಸುತ್ತಾರೆ. ತನ್ವಿ ರಾಮ್ ಪಾತ್ರ ಅಷ್ಟಕ್ಕಷ್ಟೇ. ತನ್ವಿ ರಾವ್‌ಗೆ ಮತ್ತಷ್ಟು ಸ್ಪೇಸ್ ನೀಡಬಹುದಿತ್ತು. ಇದುವರೆಗೆ ನಗುವಿನ ಅಲೆಯಲ್ಲಿ ತೇಲಿಸಿರುವ ದೀಪಕ್ ರೈ ಪಾಣಾಜೆ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ,‘ಶಂಕರಾಭರಣ’ ಬಸ್ ಪ್ರಯಾಣದಲ್ಲಿ ನಗು, ಮನರಂಜನೆಗೆ ಕೊರತೆಯಿಲ್ಲ.