ಕನ್ನಡದಲ್ಲಿ "ಗಟ್ಟಿಮೇಳ', "ಅಣ್ಣ', ತೆಲುಗಿನಲ್ಲಿ "ಅಮ್ಮಾಯಿಗಾರು' ಧಾರಾವಾಹಿಗಳ ಜತೆಗೆ "ಅಂಶು', "ಅಂದೊಂದಿತ್ತು ಕಾಲ' ಚಿತ್ರಗಳಲ್ಲೂ ನಟಿಸಿ, ಕಿರುತೆರೆ ಹಾಗೂ ಹಿರಿತೆರೆ ಎರಡೂ ಕಡೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೆಗ್ಗಳಿಕೆ ನಟಿ ನಿಶಾ ರವಿಕೃಷ್ಣನ್ಗೆ ಸಲ್ಲುತ್ತದೆ. ಇಂತಹ ನಿಶಾ ಇದೀಗ ಹೊಸ ಕಥೆ ಒಪ್ಪಿಕೊಂಡಿದ್ದು, ಇತ್ತೀಚೆಗಷ್ಟೆ ಮುಹೂರ್ತ ನೆರವೇರಿದೆ. ಚಿತ್ರದ ಹೆಸರು "ದರ್ಶನ'. ಸ್ವಸ್ತಿಕ್ ಚೊಚ್ಚಲ ಬಾರಿಗೆ ಆ್ಯಕ್ಷನ್&ಕಟ್ ಹೇಳುತ್ತಿದ್ದು, ಪೃಥ್ವಿ ಅಂಬಾರ್, ತಬಲಾ ನಾಣಿ, ಗೌರವ್ ಶೆಟ್ಟಿ, ಆದಿತ್ಯ ಆಶ್ರೀ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಿಶಾ, "ಇದೊಂದು ಕಾಮಿಡಿ ಥ್ರಿಲ್ಲರ್. ಈಗಲೇ ಏನೂ ರಿವೀಲ್ ಮಾಡಬೇಡಿ ಅಂದಿದ್ದಾರೆ. ತುಂಬ ವಿಷಯಗಳು ನನಗೂ ಗೊತ್ತಿಲ್ಲ. ಇಡೀ ಸಿನಿಮಾ ನಗಿಸುತ್ತಲೇ ಸಾಗುತ್ತದೆ. ನ್ಯಾಚುರಲ್ ಕಾಮಿಡಿ, ಗ್ರಿಪ್ಪಿಂಗ್ ಸಬ್ಜೆಕ್ಟ್. ಸಸ್ಪೆನ್ಸ್ ಸೇರಿ ಹಲವು ಅಂಶಗಳಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ. ಕಾಮಿಡಿ ನನಗೆ ತುಂಬ ಇಷ್ಟದ ಜಾನರ್. ಆದರೆ, ಇದುವರೆಗೂ ಕಾಮಿಡಿಯಲ್ಲಿ ನಟಿಸಿಲ್ಲ. ಕಾಮಿಡಿ ಮಾಡುವಾಗ ಹೆಚ್ಚು ರ್ನಿಬಂಧಗಳು, ಗಡಿ ಇರುವುದಿಲ್ಲ. ನನಗೂ ಇಂತಹ ಪಾತ್ರದಲ್ಲಿ ನಟಿಸಬೇಕು ಅಂತಿತ್ತು. ಜತೆಗೆ ನಿರ್ದೇಶಕ ಸ್ವಸ್ತಿಕ್ ಈ ಹಿಂದೆ "ಅಂದೊಂದಿತ್ತು ಕಾಲ'ದಲ್ಲಿ ಸಹ& ನಿರ್ದೇಶಕರಾಗಿದ್ದರು. ಕಥೆ, ಪಾತ್ರ ಇಷ್ಟವಾಗಿ, ತಂಡ ಕೂಡ ಪರಿಚಯವಿದ್ದ ಕಾರಣ ಒಪ್ಪಿಕೊಂಡೆ' ಎಂದು ಮಾಹಿತಿ ನೀಡುತ್ತಾರೆ.
ಸೀರಿಯಲ್, ಸಿನಿಮಾ ನಡುವಿನ ಬ್ಯಾಲೆನ್ಸ್
ನಿಶಾ ಸದ್ಯ ಕನ್ನಡದಲ್ಲಿ "ಅಣ್ಣಯ್ಯ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜತೆಗೆ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದು, "ಮೊದಲೇ ಒಪ್ಪಿದ್ದ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಬೇಕಿದ್ದ ಕಾರಣ ಇದುವರೆಗೆ ಹೆಚ್ಚು ಸಿನಿಮಾದತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇನ್ನುಮುಂದೆ ಹೆಚ್ಚು ಸಮಯ ಸಿನಿಮಾಗೆ ನೀಡಲಿದ್ದೇನೆ. ಸದ್ಯ ಧಾರಾವಾಹಿ ಮತ್ತು ಸಿನಿಮಾ ಎರಡನ್ನೂ ನಿಭಾಯಿಸುತ್ತಿದ್ದೇನೆ. ನಾನು ತುಂಬ ಇಷ್ಟಪಟ್ಟು ಬಂದ ವೃತ್ತಿ ನಟನೆ. ಟಿವಿ, ಸಿನಿಮಾ ಎಲ್ಲಾದರೂ ಸರಿ ನಟಿಸುತ್ತಿರಬೇಕು. ಎರಡು, ಮೂರು ವರ್ಷ ಒಂದೇ ಪಾತ್ರದಲ್ಲಿ ನಟಿಸುವುದೂ ಸವಾಲು. ಹಾಗೇ ಸಿನಿಮಾಗಳಲ್ಲಿ 20, 30 ದಿನ ಒಂದು ಪಾತ್ರದಲ್ಲಿ ನಟಿಸುವುದೂ ಸಹ ಒಂದು ಚಾಲೆಂಜ್. ನನಗೆ ಎರಡೂ ಸವಾಲುಗಳು ಇಷ್ಟ. ಉತ್ತಮ ಅವಕಾಶ ಎಲ್ಲಿ ಸಿಗುತ್ತದೆಯೋ ಅಲ್ಲಿ ನಟಿಸುತ್ತೇನೆ. ಆದರೆ, ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಸದ್ಯಕ್ಕೆ ಸಿನಿಮಾಗಳಿಗೆ ಹೆಚ್ಚು ಸಮಯ ನೀಡಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.
ಪವರ್ಫುಲ್ ಪಾತ್ರ ಬೇಕು
"ಈಗ ತುಂಬ ಕಥೆಗಳು ಬರುತ್ತಿವೆ' ಎನ್ನುವ ನಿಶಾ, ತೆಲುಗಿನಲ್ಲೂ ಒಂದು ಕಥೆ ಕೇಳಿದ್ದಾರಂತೆ. ಆದರೆ, ಯಾವುದನ್ನೂ ಸೈನ್ ಮಾಡಿಲ್ಲ. "ವೈವಿಧ್ಯಮಯ ಪಾತ್ರಗಳನ್ನು ಮಾಡಬೇಕು. ಪ್ರಯೋಗ ಮಾಡುತ್ತಿರಬೇಕು. ನನಗೆ ಬಾಲಿವುಡ್ ನಟಿ ರಾಣಿ ಮುಖರ್ಜಿಯವರ "ಮರ್ದಾನಿ'ಯಂತಹ ಗಟ್ಟಿ, ಪವರ್ಫುಲ್ ಮಹಿಳೆಯ ಪಾತ್ರದಲ್ಲಿ ನಟಿಸಲು ತುಂಬ ಇಷ್ಟ. ಕನ್ನಡದಲ್ಲಿ ಅಂತಹ ಸಿನಿಮಾ ಅಥವಾ ವೆಬ್ಸರಣಿಯಲ್ಲಿ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ' ಎನ್ನುತ್ತಾರೆ ನಟಿ ನಿಶಾ ರವಿಕೃಷ್ಣನ್.