ಶಂಕರ್ ನಾಗ್ 
ಸ್ಯಾಂಡಲ್‌ವುಡ್

ಪರಿಶ್ರಮಿ, ಪ್ರಯೋಗಿ ಶಂಕರ್‌ನಾಗ್ : 72ನೇ ಜಯಂತಿ ಹಿನ್ನೆಲೆ ದಿಗ್ದರ್ಶಕ ನಟ, ನಿರ್ದೇಶಕನ ಕುರಿತು ಹಿರಿಯ ನಟ ಅವಿನಾಶ್ ವಿಶೇಷ ಬರಹ shankar nag

ಇಂದು ಶಂಕರ್‌ನಾಗ್ ಜಯಂತಿ. ಈ ಹಿನ್ನೆಲೆಯಲ್ಲಿ ಹಿರಿಯ ನಟ ಅವಿನಾಶ್, ಶಂಕರ್‌ನಾಗ್ ಜತೆಗಿನ ಒಡನಾಟದ ಬಗ್ಗೆ ‘ವಿಜಯವಾಣಿ’ ಜತೆ ಸ್ಮರಿಸಿಕೊಂಡಿದ್ದಾರೆ.

ಇಂದು ಶಂಕರ್‌ನಾಗ್ ಜಯಂತಿ. ಭೌತಿಕವಾಗಿ ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು 72ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಶಂಕರ್‌ನಾಗ್. ನವೀನ ಆಲೋಚನೆ, ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಹಿರಿಯ ನಟ ಅವಿನಾಶ್, ಶಂಕರ್‌ನಾಗ್ ಜತೆಗಿನ ಒಡನಾಟದ ಬಗ್ಗೆ ‘ವಿಜಯವಾಣಿ’ ಜತೆ ಸ್ಮರಿಸಿಕೊಂಡಿದ್ದಾರೆ.

ಅವಿನಾಶ್, ಹಿರಿಯ ನಟ

ಹಿರಿಯ ಕಲಾವಿದೆ ಬಿ. ಜಯಶ್ರೀ ಅವರ ‘ಸ್ಪಂದನ’ ಎಂಬ ನಾಟಕ ತಂಡದಲ್ಲಿ ನಾನು, ದೇವರಾಜ್ ಇದ್ದೆವು. ಆ ತಂಡದಿಂದ ‘ಬ್ಯಾರಿಸ್ಟರ್’ ನಾಟಕ ಮಾಡುತ್ತಿದ್ದೆವು. ಅದರ ನಿರ್ದೇಶನದ ಹೊಣೆ ಹೊತ್ತಿದ್ದವರು ಶಂಕರ್‌ನಾಗ್. ಆ ಮೂಲಕವೇ ನನಗೆ ಅವರ ಮೊದಲ ಪರಿಚಯವಾಯಿತು. ಆ ವೇಳೆಗಾಗಲೇ ಅವರು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸ್ಟಾರ್ ಆಗಿದ್ದರು. ಅಂತಹ ದೊಡ್ಡ ಮನ್ನಣೆ ಸಿಕ್ಕಿದ್ದರೂ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ನಾಟಕ ನಿರ್ದೇಶನ ಮಾಡಲು ಬಂದಿದ್ದರು. ಅದು ಅವರ ಎತ್ತರದ ವ್ಯಕ್ತಿತ್ವವನ್ನು ತೋರಿಸುತ್ತದೆ.

ಶಂಕರ್‌ನಾಗ್ ಅವರದು ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ. ಅವರು ನಟರಾಗಿ ಬಂದಿದ್ದು ಕೂಡ ಆಕಸ್ಮಿಕವಾಗಿಯೇ. ಆ್ಯಕ್ಟಿಂಗ್‌ಗಿಂತ ಅವರಿಗೆ ನಿರ್ದೇಶನದ ಮೇಲೆಯೇ ಹೆಚ್ಚು ಒಲವಿತ್ತು. ನಾನೂ ‘ಸಂಕೇತ್’ ತಂಡದಲ್ಲಿದ್ದ ಕಾರಣ ಅವರ ಬಗ್ಗೆ ಅರಿತುಕೊಂಡಿದ್ದೆ. ವಿಷನ್ ಇದ್ದ ವ್ಯಕ್ತಿ. ಅವರಿದ್ದ ಸ್ಪೀಡ್‌ಅನ್ನು ಬೇರೆಯವರಿಗೆ ಹೋಲಿಸುವುದು ಕಷ್ಟವಾಗುತ್ತದೆ. ಅವರು ನಿದ್ದೆ ಮಾಡಿದ್ದೆ ಕಡಿಮೆ. ಯಾವಾಗಲೂ ಏನಾದರೊಂದು ಯೋಚನೆ ಅಥವಾ ಕೆಲಸ ಮಾಡುತ್ತಿದ್ದರು. ಅವರು ಸುಮ್ಮನೇ ಕುಳಿತಿರುವುದನ್ನು ನೋಡಿದ್ದು ಕಡಿಮೆ. ಶಂಕರ್ ನಾಗ್ ಅವರಲ್ಲಿ ಆಲೋಚನೆಗಾರ ಇದ್ದ. ಅವರು ಭವಿಷ್ಯದ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದರು. ಆ ಕಾಲದಲ್ಲಿಯೇ ಬೆಂಗಳೂರಿಗೆ ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ.. ಹೀಗೆ ಹಲವು ಕನಸು ಕಂಡಿದ್ದರು. ಯೂರೋಪ್‌ನಲ್ಲಿ ನೋಡಿ, ಅವರು ಭಾರತದಲ್ಲಿಯೇ ಮೊದಲ ಬಾರಿಗೆ ಕಂಟ್ರಿ ಕ್ಲಬ್ ಆರಂಭಿಸಿದ್ದರು. ಹಾಗಾಗಿ, ಶಂಕರ್‌ನಾಗ್ ಕೇವಲ ನಟ, ನಿರ್ದೇಶಕ, ರಂಗಕರ್ಮಿ ಅಷ್ಟೇ ಅಲ್ಲ, ಅವರೊಬ್ಬ ಉತ್ತಮ ಅಲೋಚನೆಗಾರ ಆಗಿದ್ದರು.

ಶಂಕರ್ ನಾಗ್

ಅಸಾಧ್ಯವನ್ನು ಸಾಧಿಸುವ ಛಲದಂಕಮಲ್ಲ

ಶಂಕರ್‌ನಾಗ್ ಬದುಕಿನಲ್ಲಿ ಅಸಾಧ್ಯ ಎಂಬ ಪದವೇ ಇರಲಿಲ್ಲ. ಯಾಕೆಂದರೆ ಅವರು ಅಸಾಧ್ಯವನ್ನು ಸಾಧಿಸಿ ತೋರಿಸುವ ಛಲದಂಕಮಲ್ಲ ಆಗಿದ್ದರು. ಒಮ್ಮೆ ಗಿರೀಶ್ ಕಾರ್ನಾಡ್ ಅವರ ‘ನಾಗಮಂಡಲ’ ನಾಟಕ ಮಾಡುತ್ತಿದ್ದೆವು. ನಮಗೆ ಕೇವಲ 10ರಿಂದ 12 ದಿನ ಮಾತ್ರ ಸಮಯವಿತ್ತು. ಅಷ್ಟು ಕಡಿಮೆ ಅವಧಿಯಲ್ಲಿ ಗಿರೀಶ್ ಕಾರ್ನಾಡ್‌ರ ನಾಟಕ ಮಾಡುವುದು ಸಾಧ್ಯನಾ ಎಂಬ ಮಾತುಗಳು ಕೇಳಿಬಂದವು. ನಾನು ಕೂಡ ಹಾಗೇ ಭಾವಿಸಿದ್ದೆ. ಆದರೆ, ಶಂಕರ್ ಮಾತ್ರ ಒಪ್ಪಲಿಲ್ಲ. ‘ಮಾಡಬೇಕಷ್ಟೆ’ ಎಂದು ನಮ್ಮನ್ನೆಲ್ಲಾ ಅಖಾಡಕ್ಕೆ ಇಳಿಸಿದರು. ಚಿತ್ರಕಲಾ ಪರಿಷತ್‌ನಲ್ಲಿ ನಾಟಕದ ಸೆಟ್ ಹಾಕಿಸಿ, ಹಗಲು-ರಾತ್ರಿ ತಾಲೀಮು ಮಾಡಿಸಿದರು. ಅದೇ ಸಮಯದಲ್ಲಿ ಗೋಪಾಲ್ ವಾಜಪೇಯಿ ಅವರನ್ನು ಕರೆಸಿ, ಹಾಡುಗಳನ್ನು ಬರೆಸಿದರು. 14ನೇ ದಿನಕ್ಕೆ ಯಶಸ್ವಿಯಾಗಿ ನಾಟಕ ಪ್ರದರ್ಶನಗೊಂಡಿತು. ಅಂತಹ ಪರಿಶ್ರಮಿ, ಉತ್ಸಾಹಿಯನ್ನು ಈವರೆಗೂ ನಾನು ನೋಡಿಲ್ಲ.

ಆ ವ್ಯಕ್ತಿ ಇಂದು ಇದ್ದಿದ್ದರೆ

ಶಂಕರ್‌ನಾಗ್ ಇಂದು ಇದ್ದಿದ್ದರೆ, ಕೇವಲ ಚಿತ್ರರಂಗಕ್ಕೆ ಸೀಮಿತರಾಗುತ್ತಿರಲಿಲ್ಲ. ಅವರ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿರುತ್ತಿದ್ದರು. ಸಿನಿಮಾದಲ್ಲಿ ಇರುತ್ತಿದ್ದರೋ ಅಥವಾ ರಾಜಕೀಯ, ಕಾರ್ಪೋರೇಟ್ ಹೀಗೆ ಯಾವ ಕ್ಷೇತ್ರದಲ್ಲಿ ಇರುತ್ತಿದ್ದರು ಎಂದು ಹೇಳಲು ಅಸಾಧ್ಯ. ಆದರೆ, ಯಾವ ಕ್ಷೇತ್ರದಲ್ಲಿದ್ದರೂ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಿಸಿಬಿಡುತ್ತಿದ್ದರು ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ. ಸೋಮಾರಿತನವನ್ನು ಅವರು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ. ಅವರಿಂದ ಎಲ್ಲರೂ ಕಲಿಯಬೇಕಾದ ಬಹುಮುಖ್ಯ ಸಂಗತಿ ಎಂದರೆ ಶಿಸ್ತು ಮತ್ತು ವೃತ್ತಿ ಬದ್ಧತೆ.