ಸೀಟ್ ಎಡ್ಜ್​ ಚಿತ್ರದ ಪೋಸ್ಟರ್​ 
ಸ್ಯಾಂಡಲ್‌ವುಡ್

seat edge movie review: ‘ಸೀಟ್ ಎಡ್ಜ್’ನಲ್ಲಿ ಕೂರಿಸುವ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಸೀಟಂಚಿನಲ್ಲಿ ಕೂರಿಸದಿದ್ದರೂ, ವಿಭಿನ್ನ ಪ್ರಯತ್ನದ ಸಿನಿಮಾ
  • ಸಿದ್ದು ಮೂಲಿಮನಿ ಉತ್ತಮ ನಟನೆ
  • ಪ್ರೇಕ್ಷಕರಿಗೆ ಇಷ್ಟವಾದ ಸಿದ್ದುವಿನ ಹೊಸ ಅವತಾರ
ಚಿತ್ರ: ಸೀಟ್ ಎಡ್ಜ್
ನಿರ್ದೇಶನ: ಚೇತನ್ ಶೆಟ್ಟಿ
ತಾರಾಗಣ: ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರಿ ಶಿವಣ್ಣ, ಮಿಮಿಕ್ರಿ ಗೋಪಿ ಮತ್ತಿತರರು.
ಶಿವ ಸ್ಥಾವರಮಠ
ಕೈ ತುಂಬ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ನೀಡಿ, ವ್ಲಾಗರ್ ಆಗಿ ಖುಷಿ ಕಾಣಲು ಸಿದ್ದು ಮುಂದಾಗುತ್ತಾನೆ. ಪ್ರಾರಂಭದಲ್ಲಿ ದಿನಚರಿ ವಿಡಿಯೋಗಳನ್ನು ಮಾಡುವ ಆತನ ಕಂಟೆಂಟ್‌ಗೆ ಯಾರೂ ಕೇರ್ ಮಾಡುವುದಿಲ್ಲ. ಹೀಗಾಗಿ ಗೆಳತಿ ನಂದಿನಿ (ರವೀಕ್ಷಾ) ಘೋಸ್ಟ್ ಹಂಟಿಂಗ್ ತರಹದ ರೋಚಕ ವ್ಲಾಗ್ ಮಾಡುವಂತೆ ಸಲಹೆ ನೀಡುತ್ತಾಳೆ. ಆಗ ಘೋಸ್ಟ್ ಹಂಟಿಂಗ್‌ಗೆ ಮುಂದಾಗುವ ಸಿದ್ದು ಒಮ್ಮಿಂದೊಮ್ಮೆಲೆ ವೈರಲ್ ಆಗಿ, ಜನಪ್ರಿಯನಾಗುತ್ತಾನೆ. ಆದರೆ, ಅದು ನೈಜ ಘೋಸ್ಟ್ ಹಂಟಿಂಗ್ ವಿಡಿಯೋ ಆಗಿರದೆ, ಗ್ರಾಫಿಕ್ಸ್‌ನಿಂದ ಮಾಡಿರುವುದು ಎಂಬುದು ನಂದಿನಿ ಗಮನಕ್ಕೆ ಬರುತ್ತದೆ. ತಕ್ಷಣ ಆಕೆ ಸಿದ್ದುಗೆ ಜಾಡಿಸಿ, ಆತನಿಂದ ದೂರವಾಗುತ್ತಾಳೆ. ಇದರಿಂದ ಮನನೊಂದ ಸಿದ್ದುಗೆ, ಹಿಂದಿ ವ್ಲಾಗರ್‌ಗೆ ಘೋಸ್ಟ್ ಟೌನ್‌ನಲ್ಲಿ ಆದ ಭಯಾನಕ ಅನುಭವದ ಬಗ್ಗೆ ಗಮನಕ್ಕೆ ಬರುತ್ತದೆ. ತಾನೂ ಘೋಸ್ಟ್ ಟೌನ್‌ಗೆ ತೆರಳಿ, ಅಲ್ಲಿ ದೆವ್ವಗಳ ಕುರಿತು ವ್ಲಾಗ್ ಮಾಡಬೇಕು ಎಂದು ಸಿದ್ದು ನಿಶ್ಚಯಿಸುತ್ತಾನೆ. ಮುಂದಿನ ಘೋಸ್ಟ್ ಹಂಟಿಂಗ್ ಪಯಣವೇ ‘ಸೀಟ್ ಎಡ್ಜ್’ ಚಿತ್ರದ ಪ್ರಮುಖ ಘಟ್ಟ.
ದೆವ್ವಗಳ ಕುರಿತ ಸಿನಿಮಾಗಳ ಮೇಲೆ ಪ್ರೇಕ್ಷಕರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ರೋಚಕತೆ, ಭಯಾನಕ ಹಾಗೂ ನಿಗೂಢ ಕಾರಣಗಳನ್ನು ಬಯಸುತ್ತಾರೆ. ‘ಸೀಟ್‌ಎಡ್ಜ್’ ಕಥೆಯಲ್ಲಿ ನಿರ್ದೇಶಕ ಚೇತನ್ ಶೆಟ್ಟಿ ಈ ಎಲ್ಲ ಅಂಶಗಳನ್ನು ತಂದರೂ, ಕ್ಲೈಮ್ಯಾಕ್ಸ್‌ಗೆ ಸೀಮಿತಗೊಳಿಸಿದ್ದಾರೆ. ಮೊದಲರ್ಧ ನಾಯಕನ ವ್ಲಾಗಿಂಗ್ ಸುತ್ತ ಹಾಗೂ ಎರಡು ಹಾಡುಗಳಲ್ಲಿ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ಘೋಸ್ಟ್ ಹಂಟಿಂಗ್‌ಗೆ ತೆರಳಿದರೂ, ಅಲ್ಲಿ ಹರಟೆ ಹಾಗೂ ಹಾಸ್ಯದಲ್ಲಿಯೇ ಮುಂದುವರಿಯುತ್ತದೆ. ಇದೇ ವೇಳೆ ‘ಲಾಕೆಟ್’ ಕಥೆಯನ್ನೇ ಇಟ್ಟುಕೊಂಡೇ ಇನ್ನೊಂದಿಷ್ಟು ಹೆದರಿಸುವ ಅವಕಾಶ ಇತ್ತು. ಒಟ್ಟಾರೆಯಾಗಿ, ಚೇತನ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿಯೇ ‘ಸೀಟ್ ಎಡ್ಜ್’ ಮೂಲಕ ಒಂದು ವಿಭಿನ್ನ ಪ್ರಯತ್ನವಂತೂ ಮಾಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಸಿದ್ದು ಮೂಲಿಮನಿ ಇಲ್ಲೂ ಗಮನ ಸೆಳೆಯುತ್ತಾರೆ. ರಘು ರಾಮನಕೊಪ್ಪ ನಗಿಸುತ್ತಾರೆ. ರವೀಕ್ಷಾ ಶೆಟ್ಟಿ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಛಾಯಾಗ್ರಾಹಕ ದೀಪಕ್ ಕುಮಾರ್ ಹಾರರ್ ದೃಶ್ಯಗಳನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ.
ರೇಟಿಂಗ್: 3