ಸಿದ್ದು ಮೂಲಿಮನಿ 
ಸ್ಯಾಂಡಲ್‌ವುಡ್

‘ಸೀಟ್ ಎಡ್ಜ್’ನಲ್ಲಿ ಸಿದ್ದು : ‘ಲವ್ ಯು ಮುದ್ದು’ ಬಳಿಕ ನಟನ ಮತ್ತೊಂದು ಸಿನಿಮಾ ಇದೇ 30ಕ್ಕೆ ರಿಲೀಸ್

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಸೀಟ್ ಎಡ್ಜ್​ ಚಿತ್ರದಲ್ಲಿ ವ್ಲಾಗರ್ ಪಾತ್ರದಲ್ಲಿ ಸಿದ್ದು
  • ಲವ್ ಯು ಮುದ್ದು ಬಳಿಕ ಸೀಟಂಚಿನ ಕುತೂಹಲ ಸಿನಿಮಾದಲ್ಲಿ ಜವಾರಿ ನಟ
  • ಸೀಟ್ ಎಡ್ಜ್​ ಇದೇ 30ಕ್ಕೆ ರಾಜ್ಯಾದ್ಯಂತ ರಿಲೀಸ್
ಬೆಂಗಳೂರು: ‘ಚಿಕ್ಕ ಪಾತ್ರಗಳಿಂದಲೇ ಸಿನಿ ಜರ್ನಿ ಆರಂಭಿಸಿದ್ದೆ. ಮೊದಲ ಬಾರಿಗೆ ನಾಯಕನಾಗಬೇಕು ಎಂದಾಗ ನನಗೆ ಯಾವುದೇ ಆಯ್ಕೆ ಇರಲಿಲ್ಲ. ಸಿಗುವ ಅವಕಾಶದಲ್ಲಿಯೇ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕಿತ್ತು. ಆ ರೀತಿಯಾಗಿ ಸಾಬೀತುಪಡಿಸಿಕೊಂಡ ಕಾರಣಕ್ಕೆ ಇದೀಗ ಅವಕಾಶಗಳು ಹೆಚ್ಚುತ್ತಿವೆ ಹಾಗೂ ಆಯ್ಕೆಗಳು ಸಿಗುತ್ತಿವೆ. ಪ್ರತಿಭೆ ಪ್ರದರ್ಶನವಾದಾಗಲೇ ನಾವು ಯಶಸ್ವಿಯಾಗುವುದು’-ಇದು 14 ವರ್ಷಗಳ ಸಿನಿ ಜರ್ನಿಯಲ್ಲಿ ಸಾಗುತ್ತಿರುವ ಸಿದ್ದು ಮೂಲಿಮನಿ ಅನುಭವದ ಮಾತು.
ಕನ್ನಡದ ‘ವಿಕ್ರಾಂತ್ ರೋಣ’, ‘ಅಜ್ಞಾತವಾಸಿ’, ‘ಲವ್ ಯು ಮುದ್ದು’ ಬಳಿಕ ಜವಾರಿ ಪ್ರತಿಭೆ ಸಿದ್ದು ಮೂಲಿಮನಿ ಅಭಿನಯಿಸಿರುವ ಹಾರರ್-ಥ್ರಿಲ್ಲರ್ ‘ಸೀಟ್ ಎಡ್ಜ್’ ಚಿತ್ರ ಇದೇ 30ಕ್ಕೆ ರಿಲೀಸ್ ಆಗಲಿದೆ. ಇಲ್ಲಿ ವ್ಲಾಗರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘‘ಸೀಟ್ ಎಡ್ಜ್’ ನೈಜ ಘಟನೆಯಾಧಾರಿತ ಚಿತ್ರ. ನಡೆದ ಘಟನೆಯನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಸವಾಲಿನ ಕೆಲಸ. ಅದನ್ನು ನಮ್ಮ ತಂಡ ಸಾಬೀತುಪಡಿಸಿದೆ. ಇಲ್ಲಿ ವ್ಲಾಗರ್‌ನೊಬ್ಬ ಪ್ರಸಿದ್ಧಿಯಾಗಬೇಕು ಎಂದು ಹೊರಟಾಗ ಆತನಿಗೆ ಎದುರಾಗುವ ಸವಾಲುಗಳ ಕುರಿತು ಹಾರರ್ ಜತೆಗೆ ನವಿರಾದ ಹಾಸ್ಯದೊಂದಿಗೆ ತೋರಿಸಲಾಗಿದೆ. ಸೆಕೆಂಡ್ ಹಾಫ್ ನಲ್ಲಿ ಘೋಷ್ಟ್ ಹಂಟ್ ಮಾಡಲು ಹೋಗುತ್ತೇನೆ. ಆ ದೃಶ್ಯವೇ ಸಾಕು ಸಿನಿಮಾದ ಟೈಟಲ್‌ನಂತೆ ಪ್ರೇಕ್ಷಕರನ್ನು ಸೀಟಂಚಿನ ತುದಿಗೆ ತಂದು ಕೂರಿಸುತ್ತದೆ. ಚಿತ್ರಕ್ಕಾಗಿ ರಿಹರ್ಸಲ್ ಮಾಡಿದ್ದೇವೆ ಅಷ್ಟೇ. ಪಾತ್ರಕ್ಕೆಂದೇ ತಯಾರಿ ಏನು ನಡೆಸಿಲ್ಲ. ಶೂಟಿಂಗ್‌ನಲ್ಲಿ ಹೆಚ್ಚು ಲೈವ್ ಆಗಿ ಕಾಣಿಸಿಕೊಳ್ಳಲು ಮುಂದಾಗಿದ್ದೇನೆ’ ಎಂದು ‘ಸೀಟ್ ಎಡ್ಜ್’ ಜರ್ನಿ ಬಗ್ಗೆ ಹಂಚಿಕೊಳ್ಳುತ್ತಾರೆ.
ಕನ್ನಡ, ತಮಿಳಿನಲ್ಲಿ ಬಿಜಿ
‘ಅಜ್ಞಾತವಾಸಿ’, ‘ಲವ್ ಯು ಮುದ್ದು’ ಚಿತ್ರಗಳಿಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಬಳಿಕ ಸಿದ್ದು ಮೂಲಿಮನಿ ಅವಕಾಶ ಹೆಚ್ಚುತ್ತಿವೆ. ಹಾಗೆಯೇ ಅವರ ನಟನೆಯ ಕನ್ನಡದ ‘ಗೊಂಬೆ ರಾಮ’, ‘ಉಗ್ರಾಣ’, ‘ಊರಬ್ಬ’ ಸೇರಿ ತಮಿಳಿನ ಡೆಬ್ಯೂ ಚಿತ್ರ ‘ಕೋಲ್ಡ್ ಕಾಲ್’ ರಿಲೀಸ್‌ಗೆ ಸಿದ್ಧವಾಗಿವೆ. ಜತೆಗೆ ಎರಡು ಪ್ರಾಜೆಕ್ಟ್‌ಗಳಿಗೆ ಸಿದ್ದು ಮೂಲಿಮನಿ ಸಹಿ ಮಾಡಿದ್ದು, ಒಂದು ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಿಸಿದ್ದಾರೆ.