ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡಿನ ವಿವಾದ, ರವಿ ಕಿಶನ್
- ವಿವಾದದ ಸುಳಿಯಲ್ಲಿ ಸಲುಕಿದ ಕೆಡಿ ಸಿನಿಮಾ
- ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಕೆಡಿ
- ಈ ಸಿನಿಮಾದ ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡಿನ ವಿವಾದ
- ಈ ರೀತಿಯ ಹಾಡುಗಳು ಯುವಕರ ಹಾದಿ ತಪ್ಪಿಸುತ್ತದೆ : ರವಿ ಕಿಶನ್
ನವದೆಹಲಿ: ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ ನಟನೆಯ ಸಿನಿಮಾ ಕೆಡಿ ಸಿನಿಮಾದ ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ (Sarse Ninna Seraga Sarse) ಎಂಬ ಹಾಡು ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಭೋಜಪುರಿ ನಾಯಕ ಹಾಗೂ ಸಂಸದ ರವಿ ಕಿಶನ್ ಆತಂಕ ವ್ಯಕ್ತ ಪಡಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಹಾಡುಗಳು ಯುವಕರನ್ನು ತಪ್ಪು ದಾರಿಗೆ ಎಳೆಯುವ ಅಪಾಯವಿದೆ. ಈ ಹಾಡಿನಲ್ಲಿ ಕೇವಲ ಅಶ್ಲೀಲ ಸಾಹಿತ್ಯದ ಹೊರತಾಗಿ ಬೇರೇನೂ ಇಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿಯ ಹಾಡುಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಮಾರಕವಾಗಿದ್ದು, ಈ ಹಾಡನ್ನು ಯಾವ-ಯಾವ ಭಾಷೆಯಲ್ಲಿ ಬಿಡುಗಡೆ ಮಾಡಿದ್ದಾರೋ ಅಷ್ಟು ಭಾಷೆಗಳಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.
ಇವರುಗಳು ಧುರಂಧರ್ ಸಿನಿಮಾ ನೋಡಿ ಕಲಿಯಬೇಕು, ಹೇಗೆ ತನ್ನ ಚಿತ್ರಕಥೆಯ ಮೂಲಕ ದೇಶದ ನಾಗರಿಕರ ಮನ ಮುಟ್ಟಬೇಕು ಎನ್ನುವುದನ್ನು ಇತರರು ಕಲಿಯಬೇಕೆಂದು ರವಿ ಕಿಶನ್ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಕಂಗನಾ ಕೆಂಡಾಮಂಡಲ
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಹ ಈ ಹಾಡಿದೆ ವಿರೋಧ ವ್ಯಕ್ತ ಪಡಿಸಿದ್ದು, ಸರ್ಕೆ ಚುನರ್ ತೇರಿ ಸರ್ಕೆ, ಈ ಹಾಡು ಬಹಳ ಕೀಳು ಮಟ್ಟದ ಹಾಡಾಗಿದೆ ಎಂದು ಜರಿದಿದ್ದಾರೆ.
ಬಾಲಿವುಡ್ ಸಿನಿಮಾ ರಂಗದಲ್ಲಿ ಅಸಭ್ಯತೆ ತುಂಬಿದೆ. ಅದು ಅಶ್ಲೀಲವೇ ಆಗಿರಲಿ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂಬ ಟ್ರೆಂಡ್ ಹಿಂದೆ ಬಿದ್ದಿರುವ ಬಾಲಿವುಡ್ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ. ಇಡೀ ದೇಶವು ಬಾಲಿವುಡ್ನ್ನು ಖಂಡಿಸುತ್ತಿದೆ. ಆದರೆ, ಅವರಿಗೆ ಮಾತ್ರ ಯಾವುದೇ ನಾಚಿಕೆ ಇಲ್ಲ ಎಂದು ಕಂಗನಾ ಕಿಡಿಕಾರಿದ್ದಾರೆ.
ಏನಿದು ವಿವಾದ?
ಇತ್ತೀಚೆಗಷ್ಟೇ ಬಿಡುಗಡೆಯಾದ ಕೆಡಿ : ದಿ ಡೆವಿಲ್ ಸಿನಿಮಾದ "ಸರ್ಸೆ ನಿನ್ನ ಸೆರಗ ಸರ್ಸೆ" ಎಂಬ ಐಟಂ ಸಾಂಗ್ನ ಹಿಂದಿ ವರ್ಷನ್ "ಸರ್ಕೆ ಚುನರ್ ತೇರಿ ಸರ್ಕೆ" ಹಾಡಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ. ಅಂದಹಾಗೆ, ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಅವರು ಈ ಹಾಡಿಗೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಹಿಂದಿ ವರ್ಷನ್ ಸಾಂಗ್ ಹಲವರ ಕೆಂಗಣ್ಣಿಗೆ ಗುರಿಯಾಯಿತು. ಅದಕ್ಕೆ ಕಾರಣ ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ನೋರಾ ಅವರ ಅತಿ ಮಾದಕ ನೃತ್ಯ. ಇದನ್ನು ನೋಡಿದ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಕ್ರೋಶ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿವಾದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದೇ ತಡ ಚಿತ್ರದ ನಿರ್ಮಾಪಕರು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಿಂದಿ ಹಾಡನ್ನು ಅಧಿಕೃತವಾಗಿ ತೆಗೆದುಹಾಕಿದ್ದಾರೆ. ಕನ್ನಡ ವರ್ಶನ್ ಇನ್ನೂ ಡಿಲೀಟ್ ಆಗದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ANI ವರದಿಯ ಪ್ರಕಾರ, 'ಸರ್ಕೆ ಚುನರ್ ತೇರಿ ಸರ್ಕೆ' ಹಿಂದಿ ಹಾಡಿಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಎಂಬುವವರು, ಹಾಡಿಗೆ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ವಿರೋಧಗಳು ಇನ್ನಷ್ಟು ಹೆಚ್ಚಾಯಿತು. ಈ ಸಾಂಗ್ ಸಾರ್ವಜನಿಕ ಬಳಕೆಗೆ ಸೂಕ್ತವಲ್ಲ. ಇದರಲ್ಲಿ ಅಶ್ಲೀಲತೆಯನ್ನು ಒಳಗೊಂಡ ಸಾಹಿತ್ಯವಿದೆ ಎಂದು ದೂರುದಾರರು ಆರೋಪಿಸಿದ್ದಾರೆ,(ಏಜನ್ಸೀಸ್).