ಸರ್ಸೆ ನಿನ್ನ ಸೆರಗ ಸರ್ಸೆ ವಿವಾದ: ಪ್ರೇಮ್ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಹಿಂದಿ ಸಾಹಿತ್ಯ ಬರೆದ ರಾಖಿಬ್! Sarse Ninna Seraga Sarse
- ವಿವಾದದ ಸುಳಿಯಲ್ಲಿ ಸಿಲುಕಿದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ
- ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಸಿನಿಮಾ
- ಸರ್ಸೆ ನಿನ್ನ ಸೆರಗ ಸರ್ಸೆ ಎಂಬ ಐಟಂ ಸಾಂಗ್ನ ಹಿಂದಿ ವರ್ಷನ್ಗೆ ಭಾರಿ ಆಕ್ರೋಶ
- ಸಂಚಲನ ಮೂಡಿಸಿದ ಹಿಂದಿ ವರ್ಷನ್ಗೆ ಸಾಹಿತ್ಯ ಬರೆದ ಗೀತರಚನೆಕಾರ ರಾಖಿಬ್ ಆಲಂ ಹೇಳಿಕೆ
Sarse Ninna Seraga Sarse : ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ "ಕೆಡಿ" ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ "ಸರ್ಸೆ ನಿನ್ನ ಸೆರಗ ಸರ್ಸೆ" ಎಂಬ ಐಟಂ ಸಾಂಗ್ನ ಹಿಂದಿ ವರ್ಷನ್ "ಸರ್ಕೆ ಚುನರ್ ತೇರಿ ಸರ್ಕೆ" ಹಾಡಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್‌ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ. ಈ ಹಾಡಿನಲ್ಲಿ ತೀರಾ ಅಶ್ಲೀಲ ಪದಗಳನ್ನು ಬಳಸಿರುವ ಕಾರಣ ಕೆಡಿ ಸಿನಿಮಾ ವಿವಾದದ ಕೇಂದ್ರ ಬಿಂದುವಾಗಿದೆ. ಇದರ ನಡುವೆ ಹಿಂದಿ ವರ್ಷನ್ಗೆ ಸಾಹಿತ್ಯ ಬರೆದ ಗೀತರಚನೆಕಾರ ರಾಖಿಬ್ ಆಲಂ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸುತ್ತಿದೆ.
ಅಂದಹಾಗೆ, ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಅವರು 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿಗೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಹಿಂದಿ ವರ್ಸನ್ ಸಾಂಗ್ ಹಲವರ ಕೆಂಗಣ್ಣಿಗೆ ಗುರಿಯಾಯಿತು. ಅದಕ್ಕೆ ಕಾರಣ ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ನೋರಾ ಅವರ ಅತಿ ಮಾದಕ ನೃತ್ಯ. ಇದನ್ನು ನೋಡಿದ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ, ಈ ಹಾಡನ್ನು ಬರೆದ ಗೀತರಚನೆಕಾರ ರಾಖಿಬ್ ಆಲಂ ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಗೀತರಚನೆಕಾರ ರಾಖಿಬ್ ಆಲಂ ಅವರು ಇದೀಗ ಸ್ಪಷ್ಟನೆಯನ್ನು ನೀಡಿದ್ದಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ರಾಖಿಬ್ ಆಲಂ, ಈ ಹಾಡನ್ನು (ಕೆಡಿ ಸಾಂಗ್) ನಾನು ಬರೆದಿಲ್ಲ. ನಾನು ಅದನ್ನು ಕೇವಲ ಅನುವಾದಿಸಿದ್ದೇನೆ ಅಷ್ಟೇ. ನಿರ್ದೇಶಕ ಪ್ರೇಮ್ ಆರಂಭದಲ್ಲಿ ಕನ್ನಡದಲ್ಲಿ ಬರೆಯಲಾಗಿದ್ದ ಸಾಹಿತ್ಯವನ್ನು ಹಿಂದಿಗೆ ಯಥಾವತ್ತಾಗಿ ಪರಿವರ್ತಿಸುವಂತೆ ನನ್ನ ಮೇಲೆ ಒತ್ತಡ ಹೇರಿದರು. ಹೇಳಬೇಕೆಂದರೆ, ಈ ಹಾಡನ್ನು ಬರೆಯಲು ಆರಂಭದಲ್ಲಿ ನಾನು ನಿರಾಕರಿಸಿದ್ದೆ ಏಕೆಂದರೆ, ಆ ಹಾಡಿನಲ್ಲಿ ಅಶ್ಲೀಲ ಪದಗಳಿದ್ದವು ಮತ್ತು ಸೆನ್ಸಾರ್ ಸಮಸ್ಯೆಗಳು ಎದುರಾಗುತ್ತವೆ ಎಂದು ನಾನು ಎಚ್ಚರಿಸಿದ್ದೆ. ಆದರೆ, ಪ್ರೇಮ್ ಅವರು ಕೇಳಲಿಲ್ಲ ಮತ್ತು ಮೂಲ ಆವೃತ್ತಿಯನ್ನೇ ಅನುವಾದಿಸಲು ನನ್ನನ್ನು ಕೇಳಿದರು ಎಂದು ಹೇಳಿದ್ದಾರೆ.
ಪ್ರೇಮ್ ತುಂಬಾ ಒತ್ತಾಯ ಮಾಡಿದ್ದರಿಂದ ನಾನು ಅದೇ ರೀತಿ ಮಾಡಬೇಕಾಯಿತು. ಹಾಡಿನ ಕೆಲವು ಸಾಲುಗಳು ಡಬ್ಬಲ್ ಮೀನಿಂಗ್ ನೀಡುತ್ತವೆ. ಈ ಹಾಡು ಮುಖ್ಯವಾಗಿ ಮದ್ಯದ ಬಾಟಲಿಯನ್ನು ಬಣ್ಣಿಸುತ್ತದೆ. ಆದರೆ, ಹಾಡಿನ ಮಧ್ಯದಲ್ಲಿ ಬಳಸಲಾದ ಪದಗಳು ತುಂಬಾ ಅಸಭ್ಯವಾಗಿವೆ ಎಂದ ರಾಖಿಬ್ ಆಲಂ, ನಾವು ಬರೆಯುವ ಎಷ್ಟೋ ಒಳ್ಳೆಯ ಹಾಡುಗಳಿಗೆ ಸಿಗದ ಮನ್ನಣೆ ಇಂತಹ ವಿವಾದಗಳಿಗೆ ಸಿಗುತ್ತದೆ. ನಿಜಕ್ಕೂ ಇದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಇನ್ನು ಈ ಹಾಡಿನ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ನಿರ್ಮಾಪಕರು ಅಧಿಕೃತ ಹಿಂದಿ ಆವೃತ್ತಿಯ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿದ್ದಾರೆ. ಆದಾಗ್ಯೂ, ಹಾಡಿನ ಬಗ್ಗೆ ಚರ್ಚೆಗಳು ಮತ್ತು ಟೀಕೆಗಳು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಕ್ರೋಶ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿವಾದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದೇ ತಡ ಚಿತ್ರದ ನಿರ್ಮಾಪಕರು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಿಂದಿ ಹಾಡನ್ನು ಅಧಿಕೃತವಾಗಿ ತೆಗೆದುಹಾಕಿದ್ದಾರೆ. ಕನ್ನಡ ವರ್ಶನ್ ಇನ್ನೂ ಡಿಲೀಟ್ ಆಗದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ANI ವರದಿಯ ಪ್ರಕಾರ, 'ಸರ್ಕೆ ಚುನರ್ ತೇರಿ ಸರ್ಕೆ' ಹಿಂದಿ ಹಾಡಿಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಎಂಬುವವರು, ಹಾಡಿಗೆ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ವಿರೋಧಗಳು ಇನ್ನಷ್ಟು ಹೆಚ್ಚಾಯಿತು. ಈ ಸಾಂಗ್ ಸಾರ್ವಜನಿಕ ಬಳಕೆಗೆ ಸೂಕ್ತವಲ್ಲ. ಇದರಲ್ಲಿ ಅಶ್ಲೀಲತೆಯನ್ನು ಒಳಗೊಂಡ ಸಾಹಿತ್ಯವಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸಿಡಿದೆದ್ದ ಮಹಿಳೆಯರು
ಸರ್ಸೆ ನಿನ್ನ ಸೆರಗ ಸರ್ಸೆ ಕನ್ನಡ ವರ್ಶನ್ ಹಾಡಿಗೂ ಭಾರಿ ವಿರೋಧ ವ್ಯಕ್ತವಾಗಿದೆ. ಮಹಿಳೆಯನ್ನು ಅವಮಾನಿಸುವ ಇಂಥ ಹಾಡುಗಳನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಈ ಹಾಡನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಲೇಖಕಿಯರು, ಮಹಿಳಾ ಪರ ಮನಸ್ಸುಗಳಿರುವ ಎಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಸಂಘ, ಜನವಾದಿ ಮಹಿಳಾ ಸಂಘಟನೆಗಳು ಸೆನ್ಸಾರ್ ಮಂಡಳಿ, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿವೆ.