ಸರಳ ಸುಬ್ಬರಾವ್ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

sarala subbarao film review: ಸರಸ-ಸಲ್ಲಾಪ ದುಗುಡ-ದುಮ್ಮಾನ

ಪ್ರಮುಖ ಮುಖ್ಯಾಂಶಗಳು

  • ಸೂಕ್ಷ್ಮವಾಗಿಯೇ ಕೆಲಸ ಮಾಡಿರುವುದು ಪ್ರತಿ ದೃಶ್ಯಗಳಲ್ಲಿ ಎದ್ದು ಕಾಣುತ್ತದೆ.
  • ನವಿರು ಪ್ರೇಮಕಥೆಯಲ್ಲಿ ಹಿತವಾದ ಸಂಭಾಷಣೆ, ಇಂಪಾದ ಸಂಗೀತ ಇಷ್ಟವಾಗುತ್ತದೆ
  • ಅಜೇಯ್ ರಾವ್ ಭಾವಪೂರ್ಣ ಅಭಿನಯದ ಮೂಲಕ ಇಡೀ ಚಿತ್ರ ಹೊತ್ತು ಸಾಗಿದ್ದಾರೆ.
ಚಿತ್ರ: ಸರಳ ಸುಬ್ಬರಾವ್
ನಿರ್ದೇಶನ: ಮಂಜು ಸ್ವರಾಜ್
ತಾರಾಗಣ: ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ಶ್ರೀರಾಮ್, ವೀಣಾ ಸುಂದರ್, ವಿಜಯ್ ಚೆಂಡೂರ್ ಮತ್ತಿತರರು.
ಶಿವ ಸ್ಥಾವರಮಠ
ರೆಟ್ರೋ ಕಥೆ ಹೇಳಲು ಸೂಕ್ಷ್ಮತೆ ಅಗತ್ಯ. ಹಿಂದಿನ ಕಾಲವನ್ನು ಮರುಸೃಷ್ಟಿಸುವುದರಿಂದ ನಿರ್ದೇಶಕರು ಕಿವಿ, ಕಣ್ಣು ತೆರೆದೇ ಕೆಲಸ ಮಾಡಬೇಕು. ಸ್ವಲ್ಪ ಹಳಿ ತಪ್ಪಿದರೂ ಅಭಾಸ ಅನಿಸಿಬಿಡುತ್ತದೆ. ಹೀಗಿರುವಾಗ ನಿರ್ದೇಶಕ ಮಂಜು ಸ್ವರಾಜ್ ‘ಸರಳ ಸುಬ್ಬರಾವ್’ ಮೂಲಕ 1970ರ ಕಾಲದ ಲವ್‌ಸ್ಟೋರಿ ಹೇಳಿದ್ದು, ಸೂಕ್ಷ್ಮವಾಗಿಯೇ ಕೆಲಸ ಮಾಡಿರುವುದು ಪ್ರತಿ ದೃಶ್ಯಗಳಲ್ಲಿ ಎದ್ದು ಕಾಣುತ್ತದೆ. ನವಿರು ಪ್ರೇಮಕಥೆಯ ಹಿತವಾದ ಸಂಭಾಷಣೆ, ಇಂಪಾದ ಸಂಗೀತ, ಹಳೆಯ ಕಾಲದ ಜೀವನ ಶೈಲಿ, ಪ್ರತಿ ಪಾತ್ರಗಳ ವಸಾಲಂಕಾರದ ಮೂಲಕ ಪ್ರೇಕ್ಷಕರನ್ನು ರೆಟ್ರೋ ಕಾಲಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಮಹಾರಾ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಸುಬ್ಬರಾವ್ (ಅಜೇಯ್). ಆಸ್ಪತ್ರೆಯಲ್ಲಿ ದಾಖಲಾಗಿರುವ ಅಕ್ಕನನ್ನು (ವೀಣಾ) ನೋಡಲು ಹೋಗಿದ್ದಾಗ, ಸುಂದರಿ ಸರಳ (ಮಿಶಾ) ಆತನ ಕಣ್ಣಿಗೆ ಬೀಳುತ್ತಾಳೆ. ಆಕೆಯೋ ತುಂಟಿ, ತಿಂಡಿಪೋತಿ. ಕಣ್ಣಿಗೆ ಕಂಡಿದ್ದೆಲ್ಲ ಬೇಕು ಎನ್ನುವ ಮಗು ಮನಸ್ಸಿನ ಹುಡುಗಿ. ಸುಬ್ಬಾರಾವ್, ಸರಳಳನ್ನು ಒಪ್ಪಿಸಿ ಮದುವೆಯಾಗುತ್ತಾನೆ. ಮುಂದೆ ಇಬ್ಬರದು ದಾಂಪತ್ಯದ ಅನುರಾಗ. ಪ್ರಣಯದಿಂದ ಜೋಡಿಯ ದಾಂಪತ್ಯ ಸಾಗುತ್ತಿರುವಾಗ ಸರಳ ತಾಯಿಯಾಗುವ ಖುಷಿ ಸುದ್ದಿ ನೀಡುತ್ತಾಳೆ. ಸುಬ್ಬರಾವ್‌ಗೆ ತಂದೆಯಾಗುವ ಖುಷಿ ಒಂದೆಡೆಯಾದರೆ, ಇನ್ನೊಂದು ಕಡೆ ದುಗುಡ. ಪತ್ನಿ ಸರಳ ತಾಯ್ತನವನ್ನು ಹೇಗೆ ಎದುರಿಸುತ್ತಾಳೆ ಎಂಬ ಅಂಜಿಕೆ. ಅದೇ ವೇಳೆ ಭಾರತದಲ್ಲಿ ಯುದ್ಧದ ಭೀತಿ. ಜತೆಗೆ ಸರಳ ಮತ್ತು ಸುಬ್ಬರಾವ್ ಇಬ್ಬರ ಅಂತರಂಗದಲ್ಲಿ ಇನ್ನೊಂದು ಯುದ್ಧ ನಡೆಯುತ್ತಿರುತ್ತದೆ. ಈ ಎರಡು ಸಂಗತಿಗಳ ಮಧ್ಯೆ ‘ಸರಳ ಸುಬ್ಬರಾವ್’ ಹ್ಯಾಪಿ ಎಂಡಿಂಗ್ ಕಾಣುತ್ತಾ? ಸಿನಿಮಾ ನೋಡಿ. ಲೇಖಕಿ ತ್ರಿವೇಣಿ ಅವರ ಕಾದಂಬರಿಯಾಧಾರಿತ ಚಿತ್ರವಿದು. ಇಡೀ ಸಿನಿಮಾ ಕಾದಂಬರಿ ಓದಿದ ಅನುಭವ ನೀಡುವಂತೆಯೇ ನಿರ್ದೇಶಕರು ದೃಶ್ಯರೂಪ ನೀಡಿದ್ದಾರೆ. ಮೊದಲರ್ಧ ಸರಳ-ಸುಬ್ಬರಾವ್ ಸರಸ, ಸಲ್ಲಾಪಕ್ಕೆ ಸೀಮಿತವಾಗಿದ್ದು ದ್ವಿತೀಯಾರ್ಧದಲ್ಲಿ ಕಥೆ ಭಾವನಾತ್ಮಕ ತಿರುವು ಪಡೆದುಕೊಳ್ಳುತ್ತದೆ. ಅಜೇಯ್ ರಾವ್ ಭಾವಪೂರ್ಣ ಅಭಿನಯದ ಮೂಲಕ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಮಿಶಾ ಅಪ್ಪಟ ಕನ್ನಡತಿಯಂತೆ ಕಂಗೊಳಿಸಿದ್ದು, ಅವರ ಮುಗ್ಧ ನಟನೆ ಇಷ್ಟವಾಗುತ್ತದೆ. ಅಜನೀಶ್ ಲೋಕನಾಥ್ ನವಿರಾದ ಸಂಗೀತ, ರಂಜಿತ್ ರೆಟ್ರೋ ವಸಾಲಂಕಾರ ಇಡೀ ಸಿನಿಮಾವನ್ನು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ.
ರೇಟಿಂಗ್: 3