"ಮಹೀರಾ', "ಗಿಲ್ಕಿ', "ತಲೆದಂಡ', "ಟೋಬಿ', "ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಸೇರಿ ಹಲವು ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸಹಜ ಅಭಿನಯದ ಮೂಲಕ ಗಮನ ಸೆಳೆದವರು ನಟಿ ಚೈತ್ರಾ ಜೆ. ಆಚಾರ್. ಕಳೆದ ವರ್ಷ ಸಿದ್ಧಾರ್ಥ್ ನಾಯಕನಾಗಿದ್ದ "3 ಬಿಎಚ್ಕೆ' ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದ ಅವರು, ಸದ್ಯ ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಅವರು ಶಶಿಕುಮಾರ್ಗೆ ಜೋಡಿಯಾಗಿದ್ದ ತಮಿಳಿನ "ಮೈಲಾರ್ಡ್' ಬಿಡುಗಡೆಯಾಗಿತ್ತು. ಇದೀಗ ರಿಶಿತ್ ಶೆಟ್ಟಿ ನಿರ್ದೇಶನದಲ್ಲಿ ರಿತ್ವಿಕ್ ಮಠದ್ ಜತೆ ನಟಿಸಿರುವ "ಮಾರ್ನಮಿ' ಶುಕ್ರವಾರ ರಿಲೀಸ್ ಆಗುತ್ತಿದೆ. ಹೀಗೆ ಎರಡು ವಾರಗಳಲ್ಲಿ, ಎರಡು ಬೇರೆ ಬೇರೆ ಭಾಷೆಗಳ ಚಿತ್ರಗಳು ರಿಲೀಸ್ ಆಗುತ್ತಿರುವ ಕಾರಣ, ಚೈತ್ರಾ ಪ್ರಚಾರದಲ್ಲಿ ಬಿಜಿಯಿದ್ದಾರೆ. "ರಿಶಿತ್ "ಮಾರ್ನಮಿ' ಕಥೆ ಹೇಳಲು ಕರೆ ಮಾಡಿದ್ದರು. ಕಥೆ ಇಷ್ಟವಾಯಿತಾದರೂ ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಇಲ್ಲ ಎಂದಿದ್ದೆ. ತುಂಬ ಒಳ್ಳೆ ಕಥೆ ಮಿಸ್ ಆಯಿತಲ್ಲ ಅಂತ ನನಗೂ ಅನ್ನಿಸುತ್ತಿತ್ತು. ಇದಾಗಿ ಒಂದೂವರೆ ತಿಂಗಳಾದರೂ ಅವರು ಹುಡುಕಾಟ ಮುಂದುವರಿಸಿದ್ದರು. "ಮಾರ್ನಮಿ' ತಂಡಕ್ಕೆ ಹೀರೋಯಿನ್ ಬೇಕು ಅಂತ ನಾನೂ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ಒಮ್ಮೆ ಸಂಗೀತ ನಿರ್ದೇಶಕ ಚರಣ್ ರಾಜ್ ಸಿಕ್ಕಿ "ಮಾರ್ನಮಿ' ಕಂಟೆಂಟ್ ಮತ್ತು ಪಾತ್ರ ಚೆನ್ನಾಗಿತ್ತು, ನೀವು ಮಾಡಬೇಕಿತ್ತು ಅಂದರು. ಅದೇ ರೀತಿ ಮೂರ್ನಾಲ್ಕು ಜನ ಹೇಳಿದರು. ಅಂದು ಸಂಜೆಯೇ ರಿಶಿತ್ಗೆ ಮೆಸೇಜ್ ಮಾಡಿ ನಾಯಕಿ ಸಿಕ್ಕಿದರಾ ಅಂತ ಕೇಳಿದೆ. ಇಲ್ಲ ಅಂದರು. ತಕ್ಷಣ ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳುವುದಾದರೆ ನಟಿಸುತ್ತೇನೆ ಎಂದೆ. ಅವರು ಒಪ್ಪಿದ ಕಾರಣ ತಂಡ ಸೇರಿಕೊಂಡೆ' ಎಂದು ಮಾಹಿತಿ ನೀಡುತ್ತಾರೆ.
ನಾನು ಮಾಡಿದ್ದಲ್ಲ, ಅವರು ಮಾಡಿಸಿದ್ದು...
"ಮಾರ್ನಮಿ'ಯಲ್ಲಿ ಚೈತ್ರಾ, ಮೂರು ಶೇಡ್ಗಳಿರುವ ದೀಕ್ಷಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ದೀಕ್ಷಾ ಚಂಚಲ ಮನಸ್ಸಿನ ಹುಡುಗಿ. "ಸಪ್ತಸಾಗರದಾಚೆ ಎಲ್ಲೋ', "ಟೋಬಿ' ಚಿತ್ರಗಳಲ್ಲಿ ನಟಿಸಿದ್ದ ಕಾರಣ, ನನಗೆ ಮಂಗಳೂರು ಕನ್ನಡ ಪರಿಚಯವಿತ್ತು. ಆದರೆ, ಸಿನಿಮಾಗಳಲ್ಲಿ ಬಳಸಿರಲಿಲ್ಲವಷ್ಟೇ. ರಿತೇಶ್ಗೆ ಪಾತ್ರ ಹೀಗೇ ಇರಬೇಕು ಅಂತ ಸ್ಪಷ್ಟತೆ ಇತ್ತು. ಅದಕ್ಕೆ ತಕ್ಕಂತೆ ನನ್ನಿಂದ ಕೆಲಸ ತೆಗೆಸಿಕೊಂಡರು. ಹೊಸ ಭಾಷೆಯ ಕಲಿಕೆಯ ಜತೆಗೆ ನಾನಲ್ಲದ ಹಲವು ಶೇಡ್ಗಳಿರುವ ಮತ್ತೊಂದು ಪಾತ್ರವಾಗುವುದು ಥ್ರಿಲ್ಲಿಂಗ್ ಅನುಭವ ನೀಡಿತು. ನಾವು ನೋಡಿರುವ ಅಥವಾ ಕೇಳಿರುವ, ಆದರೆ, ನಮ್ಮ ಜೀವನದಲ್ಲಿ ಊಹಿಸಲೂ ಸಾಧ್ಯವಿಲ್ಲದ ವಿಭಿನ್ನ ಲವ್ಸ್ಟೋರಿ ಇದು. ಪ್ರೀಮಿಯರ್ ಶೋ ನೋಡಿದವರು ಚಿತ್ರ ಮತ್ತು ಪಾತ್ರದ ಬಗ್ಗೆ ತುಂಬ ಒಳ್ಳೆ ರೆಸ್ಪಾನ್ಸ್ ನೀಡುತ್ತಿದ್ದಾರೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಚೈತ್ರಾ.
ಎರಡಲ್ಲಿ, ಎರಡಿಲ್ಲಿ!
ಎರಡು ವಾರಗಳಲ್ಲಿ ಎರಡು ಭಾಷೆಗಳಲ್ಲಿ ಎರಡು ಚಿತ್ರಗಳು ರಿಲೀಸ್ ಆದ ಖುಷಿಯ ಜತೆಜತೆಗೆ ಚೈತ್ರಾ ಸದ್ಯ ತಲಾ ಎರಡು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ "ಎಲ್ಎಸ್ಡಿ' ಜತೆಗೆ ಇನ್ನೂ ಹೆಸರಿಡದ ಇನ್ನೊಂದು ಪ್ರಾಜೆಕ್ಟ್ನಲ್ಲಿ ಅವರು ನಟಿಸುತ್ತಿದ್ದು, ತಮಿಳಿನಲ್ಲಿ ಒಂದು ಚಿತ್ರದ ಶೂಟಿಂಗ್ ಮುಗಿಸಿದ್ದು, ಇನ್ನೊಂದು ಚಿತ್ರೀಕರಣ ಭರದಿಂದ ಸಾಗಿದೆ. ಅದರ ನಡುವೆಯೇ ತಮಿಳು ವೆಬ್ಸರಣಿಯಲ್ಲೂ ಚೈತ್ರಾ ನಟಿಸಿದ್ದು, ಒಟಿಟಿಯಲ್ಲಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.