ಡ್ಯಾಡ್​, ಲ್ಯಾಂಡ್ ಲಾರ್ಡ, ಪಬ್ಬಾರ್ ಪೋಸ್ಟರ್​ 
ಸ್ಯಾಂಡಲ್‌ವುಡ್

ಸ್ಯಾಂಡಲ್‌ವುಡ್‌ಗೆ ‘ಸಂಕ್ರಾಂತಿ’ ಬಂಪರ್ : ಪೋಸ್ಟರ್, ಟೀಸರ್, ಹಾಡು ಬಿಡುಗಡೆ ಮಾಡಿ ಸಂಭ್ರಮಿಸಿದ ಚಿತ್ರತಂಡಗಳು

ಪ್ರಮುಖ ಮುಖ್ಯಾಂಶಗಳು

  • ಸುಗ್ಗಿ ಹಬ್ಬಕ್ಕೆ ಖ್ಯಾತ ನಟರ ಚಿತ್ರಗಳಿಂದ ಅಪ್​ಡೇಟ್
  • ಶಿವಣ್ಣ ಅಭಿನಯದ ಡ್ಯಾಡ್ ಚಿತ್ರದ ವಿಶೇಷ ಟೀಸರ್
  • ಪಬ್ಬಾರ್, ಸೀತಾ ಪಯಣ ಸೇರಿ ಹಲವು ಚಿತ್ರಗಳಿಂದ ವಿಶೇಷ ಕೊಡುಗೆ
ಸುಗ್ಗಿ ಹಬ್ಬ ಸಂಕ್ರಾಂತಿ ಶುಭದಾಯಕ. ಹೊಸ ಕಾರ್ಯಕ್ಕೆ ಶುಭ ಘಳಿಗೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ತಂಡಗಳು ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಸಂಕ್ರಾಂತಿ ಆಚರಿಸಿವೆ. ಟೀಸರ್, ಟ್ರೇಲರ್, ಹಾಡು ಹಾಗೂ ಪಾತ್ರ ಪರಿಚಯ ಸೇರಿ ಸಿನಿಮಾದ ಹೊಸ ಮಾಹಿತಿ ಹಂಚಿಕೊಂಡು ಹಬ್ಬದ ಸಂಭ್ರಮ ಹೆಚ್ಚಿಸಿವೆ.


‘ಡ್ಯಾಡ್’ ಸ್ವ್ಯಾಗ್

‘45’ ಬಳಿಕ ನಟ ಶಿವರಾಜಕುಮಾರ್ ಅಭಿನಯಿಸುತ್ತಿರುವ ಸಿನಿಮಾ ‘ಡ್ಯಾಡ್’. ತಂದೆ-ಮಗಳ ಬಾಂಧವ್ಯ ಸಾರುವ ಚಿತ್ರವಾಗಿದ್ದು, ಶಿವಣ್ಣ ಜತೆ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರಾ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ರಿಲೀಸ್‌ಗೆ ಸಿದ್ಧವಾಗಿದೆ. ಹಬ್ಬದ ಪ್ರಯುಕ್ತ ‘ಸ್ವ್ಯಾಗ್ ಆಫ್ ಡ್ಯಾಡ್’ ಶೀರ್ಷಿಯಲ್ಲಿ ಶಿವಣ್ಣ ಎಂಟ್ರಿ ವಿಡಿಯೋ ಹರಿಬಿಡಲಾಗಿದೆ. ಕಿರುನಗೆ ಬೀರುತ್ತಾ ಆಡಿ ಕಾರಿನಿಂದ ಸ್ಟೈಲಿಶ್‌ಆಗಿ ಇಳಿದು ನಡೆದುಕೊಂಡು ಬರುವ ರೀತಿಯಲ್ಲಿ ಅವರ ಪಾತ್ರವನ್ನು ಪರಿಚಯಿಸಿದ್ದಾರೆ. ತೆಲುಗಿನ ‘ಹಿಡಿಂಬ’ ಖ್ಯಾತಿಯ ಅನಿಲ್ ಕನ್ನಗೇಟಿ ‘ಡ್ಯಾಡ್’ ನಿರ್ದೇಶಿಸುತ್ತಿದ್ದಾರೆ.

ಕುಟುಂಬ ಸಮೇತ ‘ರಾಚಯ್ಯ'

ದುನಿಯಾ ವಿಜಯ್, ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ ‘ಲ್ಯಾಂಡ್‌ಲಾರ್ಡ್’ ಬಹುತಾರಾಗಣ ಇರುವ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ‘ಗುರುಶಿಷ್ಯರು’ ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರ ಇದೇ 23ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 18ರಂದು ಟ್ರೇಲರ್ ರಿಲೀಸ್‌ಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ‘ಲ್ಯಾಂಡ್‌ಲಾರ್ಡ್’ನ ರಾಚಯ್ಯ ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್, ರಿತನ್ಯಾ ವಿಜಯ್ ಮತ್ತು ಶಿಶಿರ್ ಬೈಕಾಡಿ ಚಿತ್ರದಲ್ಲಿದ್ದಾರೆ.

ಪಬ್ಬಾರ್ ಕಣಿವೆಯ ಪೊಲೀಸ್

ಧೀರೆನ್ ರಾಮಕುಮಾರ್ ಮತ್ತು ‘ಶಾಖಾಹಾರಿ’ ನಿರ್ದೇಶಕ ಸಂದೀಪ್ ಸುಂಕದ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಬ್ಬಾರ್’. ಸಂಕ್ರಾಂತಿ ಸಂಭ್ರಮದಲ್ಲಿ ವಿಶೇಷ ಟೀಸರ್ ಮೂಲಕ ನಾಯಕನ ಪಾತ್ರವನ್ನು ಪರಿಚಯಿಸಲಾಗಿದೆ. ಧೀರೆನ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು, ಒಂದೂವರೆ ನಿಮಿಷದಲ್ಲಿ ಪಾತ್ರವನ್ನು ಪರಿಚಯಿಸಲಾಗುತ್ತದೆ. ಆದರೆ, ‘ಪಬ್ಬಾರ್’ ಕ್ಯಾರೆಕ್ಟರ್ ಟೀಸರ್ 4.19 ನಿಮಿಷ ಇರುವುದು ವಿಶೇಷ. ಟೀಸರ್‌ನಲ್ಲಿ ಧೀರೆನ್ ಜತೆ ಯತೀಶ್ ಕೊಳ್ಳೆಗಾಲ, ಮಾಸ್ಟರ್ ಆರ್ಯನ್ ಕಾಣಿಸಿಕೊಂಡಿದ್ದಾರೆ. ಪಾತ್ರ ಪರಿಚಯಿಸುವ ಟೀಸರ್ ಮೂಲಕವೇ ಕುತೂಹಲ ಮೂಡಿಸುವಲ್ಲಿ ಚಿತ್ರತಂಡ ಸಕ್ಸಸ್ ಆಗಿದೆ.

‘ಸೀತಾ ಪಯಣ’ ಬಸವಣ್ಣ, ‘ಪೀಕಬೂ’ ಜೋಡಿ

ಅರ್ಜುನ್ ಸರ್ಜಾ ನಿರ್ದೇಶನದ, ನಿರಂಜನ್ ಸುಧೀಂದ್ರ, ಐಶ್ವರ್ಯಾ ಅರ್ಜುನ್ ಅಭಿನಯದ ‘ಸೀತಾ ಪಯಣ’ ಪ್ರೇಮಿಗಳ ದಿನದಂದು (ಫೆ..14) ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಕೂಡ ಅತಿಥಿ ಪಾತ್ರದಲ್ಲಿದ್ದಾರೆ. ಧ್ರುವ ಇರುವ ‘ಬಸವಣ್ಣ’ ಎಂದು ಸಾಗುವ ರಿಲೀಸ್ ಮಾಡಲಾಗಿದೆ. ಭರತ್ ಜನನಿ ರಚಿಸಿರುವ ಹಾಡಿಗೆ ಅನೂಪ್ ರುಬೆನ್ ಸಂಗೀತ ಸಂಯೋಜಿಸಿದ್ದು, ನಕಾಶ್ ಅಜೀಜ್, ಕೀರ್ತನಾ ಧ್ವನಿಯಾಗಿದ್ದಾರೆ. ‘ಮಾಸ್ತಿಗುಡಿ’ ಬಳಿಕ ನಟಿ ಅಮೂಲ್ಯ ‘ಪೀಕಬೂ’ ಮೂಲಕ ಸ್ಯಾಂಡಲ್‌ವುಡ್‌ಗೆ ರಿ-ಎಂಟ್ರಿಯಾಗಿದ್ದು ಗೊತ್ತೇ ಇದೆ. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಮೂಲ್ಯ ಜೋಡಿಯಾಗಿ ‘ಹೊಂದಿಸಿ ಬರೆಯಿರಿ’ ನಟ ಶ್ರೀರಾಮ್ ಅಭಿನಯಿಸಲಿದ್ದಾರೆ. ಅವರ ಪಾತ್ರವನ್ನು ಸ್ವತಃ ಅಮೂಲ್ಯ ಅವರೇ ಪರಿಚಯಿಸಿದ್ದಾರೆ.
‘ಮಹಾನ್’ ರೈತ, ಕೆಚ್ಚೆದೆಯ ‘ಬೆನ್ನಿ’
ಪಿ.ಸಿ. ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಸ್ವಾಭಿಮಾನಿ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಸ್ಟ್‌ಲುಕ್ ಬಿಡುಗೊಳಿಸಲಾಗಿದ್ದು, ದೇಸಿ ಲುಕ್‌ನಲ್ಲಿ ವಿಜಯ್ ಮಿಂಚಿದ್ದಾರೆ. ಇನ್ನು ‘ಪೆಪೆ’ ಬಳಿಕ ಶ್ರೀಲೇಶ್ ನಾಯರ್ ಮಹಿಳಾ ಪ್ರಧಾನ ‘ಬೆನ್ನಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಂದ ಲವ್ಸ್ ನಂದಿತಾ’ ಖ್ಯಾತಿಯ ನಂದಿತಾ ಶ್ವೇತಾ ಈ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಸಂಕ್ರಾಂತಿ ಖುಷಿಯಲ್ಲಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ಉರಿಯುವ ಕಾಡಿನ ಮಧ್ಯೆ ಶ್ವೇತಾ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ.