ಖಳನಾಯಕ್ ರಿಟರ್ನ್ಸ್ ಪೋಸ್ಟರ್
- ಖಳನಾಯಕ್ ಸೀಕ್ವೆಲ್ ಘೋಷಣೆ
- ಟೀಸರ್ ಮೂಲಕ ಹೊಸ ಸಿನಿಮಾ ಅನೌನ್ಸ್
- 33 ವರ್ಷಗಳ ಬಳಿಕ ಸೀಕ್ವೆಲ್ ಘೋಷಿಸಿದ ಬಾಲಿವುಡ್ ನಟ
ಸಂಜಯ್ ದತ್, ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್ ಅಭಿನಯದಲ್ಲಿ ಮೂಡಿಬಂದಿದ್ದ ಚಿತ್ರ ‘ಖಳನಾಯಕ್’. 1993ರಲ್ಲಿ ರಿಲೀಸ್ ಆಗಿದ್ದ ಚಿತ್ರವು ಉತ್ತಮ ವಿಮರ್ಶೆ ಪಡೆದು, ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಇನ್ನು 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿ, ಬಿಡುಗಡೆಯಾಗಿದ್ದ ನಟ ಸಂಜಯ್ ದತ್‌ಗೆ ‘ಖಳನಾಯಕ್’ ವೃತ್ತಿ ಜೀವನಕ್ಕೆ ಮರುಜನ್ಮ ನೀಡಿತ್ತು. ಈ ಚಿತ್ರ ಬಿಡುಗಡೆಯಾಗಿ 33 ವರ್ಷಗಳು ಕಳೆದಿದ್ದು, ಇದೀಗ ಸಂಜಯ್ ದತ್ ‘ಖಳನಾಯಕ್’ ಚಿತ್ರದ ಸೀಕ್ವೆಲ್ ಘೋಷಿಸಿದ್ದಾರೆ. ಇತ್ತೀಚೆಗೆ ಟೈಟಲ್ ಟೀಸರ್ ಮೂಲಕ ‘ಖಳನಾಯಕ್ ರಿಟರ್ನ್ಸ್’ ಅನೌನ್ಸ್ ಮಾಡಲಾಗಿದ್ದು, ಟೀಸರ್‌ನಲ್ಲಿ ಸಂಜಯ್ ದತ್ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ‘ಕೆಲ ಕಥೆಗಳಿಗೆ ಅಂತ್ಯ ಇರುವುದಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಶುರು ಆಗುತ್ತಿರುತ್ತವೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ‘ಖಳನಾಯಕ್’ ಚಿತ್ರಕ್ಕೆ ಸುಭಾಷ್ ಘಾಯ್ ಆ್ಯಕ್ಷನ್-ಕಟ್ ಹೇಳಿದ್ದರು. ಆದರೆ, ಸೀಕ್ವೆಲ್‌ನಿಂದ ಅವರು ಹೊರಗುಳಿದಿದ್ದಾರೆ. ‘ಖಳನಾಯಕ್ ರಿಟರ್ನ್ಸ್’ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ. -ಏಜೆನ್ಸೀಸ್
ಎರಡು ವಾರ, ಮೂರು ಸಿನಿಮಾ
ಸದ್ಯ ಸಂಜಯ್ ದತ್ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ಮುಂದಿನ 15 ದಿನಗಳ ಅಂತರದಲ್ಲಿ ಸಂಜಯ್ ದತ್ ಅಭಿನಯದ ಮೂರು ಚಿತ್ರಗಳು ರಿಲೀಸ್ ಆಗುತ್ತಿವೆ. ಕನ್ನಡದ ‘ಕೆಡಿ: ದ ಡೆವಿಲ್’ (ಏ.30), ಹಿಂದಿಯ ‘ರಾಜಾ ಶಿವಾಜಿ’ ಮೇ 1ಕ್ಕೆ ತೆರೆಗೆ ಬರಲಿವೆ. ಮೇ 8ಕ್ಕೆ ‘ಆಖ್ರಿ ಸವಾಲ್’ ಬಿಡುಗಡೆಯಾಗಲಿದೆ. ಉಳಿದಂತೆ ಅವರು ‘ಬಾಪ್’ ಎಂಬ ಮತ್ತೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ.