ಚೈತ್ರಾ, ಭಾವನಾ, ಐಶ್ವರ್ಯಾ 
ಸ್ಯಾಂಡಲ್‌ವುಡ್

ಆಭರಣ ಸುಂದರಿಯರು: ಒಡವೆಗಳ ಒಲವಿನ ಬಗ್ಗೆ ನಲಿವಿನಿಂದ ಮಾತನಾಡಿದ ಸ್ಯಾಂಡಲ್‌ವುಡ್ ತಾರೆಯರು

ಪ್ರಮುಖ ಮುಖ್ಯಾಂಶಗಳು

  • ಅಕ್ಷಯಾ ತೃತೀಯಾ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ತಾರೆಯರು
  • ಹಬ್ಬಕ್ಕೆ ಬಂಗಾರ ಖರೀದಿಸುವ ಹಂಬಲ
  • ಹಬ್ಬದ ಮಹತ್ವ, ಖುಷಿ ಹಂಚಿಕೊಂಡ ನಟಿಯರು

ಬಂಗಾರದ ಹಬ್ಬ ‘ಅಕ್ಷಯ ತೃತೀಯಾ’ಗೆ ಕ್ಷಣಗಣನೆ ಆರಂಭವಾಗಿದೆ. ಒಡವೆ ಖರೀದಿಸಲು ಈ ದಿನ ಶುಭ. ಹೀಗಾಗಿಯೇ ಅಕ್ಷಯ ತೃತೀಯಾ ಸೀಯರಿಗೆ ಸಂಭ್ರಮದ ಹಬ್ಬ. ಅಂದು ಒಂದು ಗ್ರಾಂ ಚಿನ್ನವನ್ನಾದರೂ ಖರೀದಿಸಬೇಕು ಎಂಬುದು ಹಂಬಲ. ಇನ್ನು, ಕೆಲಸದ ಒತ್ತಡದ ನಡುವೆಯೂ ಸ್ಯಾಂಡಲ್‌ವುಡ್ ನಟಿಯರಾದ ಚೈತ್ರಾ ಹಳ್ಳಿಕೇರಿ, ಭಾವನಾ ರೆಡ್ಡಿ, ಐಶ್ವರ್ಯಾ ಪಿಸ್ಸೆ ಅಕ್ಷಯ ತೃತೀಯಾ ಹಬ್ಬದ ಉತ್ಸಾಹದಲ್ಲಿದ್ದು, ಆಚರಣೆಯ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಸಿರಿ ಹೆಚ್ಚಾಗುವ ನಂಬಿಕೆ

ಚಿಕ್ಕಂದಿನಿಂದಲೂ ಅಕ್ಷಯ ತೃತಿಯಾ ಹಬ್ಬದ ಬಗ್ಗೆ ನನಗೆ ಒಲವು ಹೆಚ್ಚು. ಅದಕ್ಕೆ ಕಾರಣ ನನಗೆ ಬಂಗಾರ ಎಂದರೆ ಇಷ್ಟ. ಮನೆಯಲ್ಲಿ ಯಾವುದೇ ಶುಭ ಸಮಾರಂಭವಿರಲಿ ಅಥವಾ ಪ್ರತಿ ವರ್ಷ ನನ್ನ ಹುಟ್ಟುಹಬಕ್ಕೆ ಒಂದು ಗ್ರಾಂ ಬಂಗಾರ ಖರೀದಿಸುತ್ತೇನೆ. ಇನ್ನು ಅಕ್ಷಯ ತೃತೀಯಾ ದಿನವಂತೂ ಸುಮ್ಮನಿರುವ ಮಾತೇ ಇಲ್ಲ. ಕಳೆದ ವರ್ಷ ಬಂಗಾರದ ಬಳೆ ಖರೀದಿಸಿದ್ದೆ. ಈ ವರ್ಷ ಬ್ರೇಸ್‌ಲೈಟ್ ಅಥವಾ ಕಿವಿಯೋಲೆ ಖರೀದಿಸಬೇಕು ಅಂತ ಅಂದುಕೊಂಡಿದ್ದೇನೆ. ಅಂದು ಬಂಗಾರ ಖರೀದಿಸಿದರೆ ಮನೆಯ ಸಿರಿ ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಅದನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ಇನ್ನು ಅಕ್ಷಯ ತೃತೀಯಾ ದಿನ ದೇವರ ಮುಂದೆ ಆಭರಣಗಳ ಜತೆಗೆ ಕಲ್ಲು ಉಪ್ಪು, ಅರಿಶಿಣ ಇಟ್ಟು ಪೂಜೆ ಮಾಡಿ, ಇಡೀ ವರ್ಷ ಮನೆಗೆ ಸಿರಿ ಬರಲಿ ಎಂದು ಪ್ರಾರ್ಥಿಸುತ್ತೇವೆ. ಹಬ್ಬದ ಬಳಿಕ ನನ್ನ ಕರಿಯರ್‌ನಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದದಲ್ಲಿದ್ದೇನೆ. ಇಡೀ ವರ್ಷ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು, ಜತೆಗೆ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎನ್ನುವುದು ನನ್ನ ಗುರಿ.
| ಭಾವನಾ ರೆಡ್ಡಿ, ನಟಿ

ಮನೆಯಲ್ಲಿದ್ದರೆ ಚಿನ್ನ, ಬದುಕು ಚೆನ್ನ

ಅಕ್ಷಯ ತೃತೀಯಾ ದಿನ ಹೊಸ ಕಾರ್ಯಗಳನ್ನು ಆರಂಭಿಸಿದರೆ ಶುಭವಾಗುತ್ತದೆ ಎಂಬುದು ನಂಬಿಕೆ. ಇನ್ನು ಅಂದೇ ಬಸವ ಜಯಂತಿ ಇರುವ ಕಾರಣ ನಮಗೆ ಹಬ್ಬದ ಡಬಲ್ ಸಂಭ್ರಮ. ನಮ್ಮ ಮನೆ ದೇವರು ಬಸವಣ್ಣ. ಅಂದು ದೇವಸ್ಥಾನಕ್ಕೆ ತೆರಳಿ, ಪೂಜೆ ಮಾಡುತ್ತೇವೆ. ಅಕ್ಷಯ ತೃತಿಯಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಂದು ಹೆಚ್ಚಿನ ಜನರು ಬಂಗಾರ ಖರೀದಿಗೆ ಮುಗಿಬೀಳುತ್ತಾರೆ. ನಾವು ಕೂಡ ಅಂದು ಸ್ವಲ್ಪವಾದರೂ ಆಭರಣ ಖರೀದಿಸುತ್ತೇವೆ. ಈ ಹಿಂದೆ ಹಬ್ಬದಂದು ಮಗಳಿಗೆ ಬಳೆ ತೆಗೆದುಕೊಂಡಿದ್ದೆ. ಈ ಬಾರಿ ಓಲೆ ಅಥವಾ ನಾಣ್ಯ ಖರೀದಿಸಬೇಕು ಎಂದು ಯೋಚಿಸಿದ್ದೇನೆ. ಇನ್ನು ಮನೆಯಲ್ಲಿ ಇದ್ದರೆ ಚಿನ್ನ, ಬದುಕು ಚೆನ್ನ ಎಂಬ ಮಾತಿದೆ. ಆಭರಣಗಳು ಕೇವಲ ಶೃಂಗಾರಕ್ಕಷ್ಟೇ ಸೀಮಿತವಾಗಿಲ್ಲ. ಇದು ಕೂಡ ಒಂದು ಹೂಡಿಕೆಯಾಗಿದೆ. ಬಂಗಾರ ಮನೆಯಲ್ಲಿದ್ದರೆ, ಜೀವನವೂ ಸುಭದ್ರವಾಗಿರುತ್ತದೆ.
| ಚೈತ್ರಾ ಹಳ್ಳಿಕೇರಿ, ನಟಿ

ಶೃಂಗಾರದ ಪ್ರತೀಕ

ಆಭರಣಗಳು ಸೀಯರಿಗೆ ಶೃಂಗಾರದ ಪ್ರತೀಕ. ಒಡವೆ ಖರೀದಿಗೆ ಎಲ್ಲ ದಿನವೂ ಹೆಣ್ಣು ಮಕ್ಕಳು ಆಸಕ್ತಿ ವಹಿಸುತ್ತಾರೆ, ಅದರಲ್ಲಿ ಅಕ್ಷಯ ತೃತೀಯಾ ದಿನವಂತೂ ಒಂದು ಹೆಜ್ಜೆ ಮುಂದೆ. ಅಂದು ಆಭರಣ ಖರೀದಿ ಮಾಡಿದರೆ ಜೀವನಕ್ಕೆ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ. ಅದೇ ದಿನವಲ್ಲವಾದರೂ ಹಬ್ಬದ ವಾರದಲ್ಲಿ ಖಂಡಿತ ಚಿನ್ನ ಖರೀದಿಸುತ್ತೇವೆ. ಸೀಯರು ಅಂದವಾಗಿ ಕಾಣಲು ಸೀರೆಯಷ್ಟೇ ಆಭರಣಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಬಂಗಾರದ ಒಡವೆಗಳು ಸೌಂದರ್ಯವನ್ನು ಹೆಚ್ಚಿಸಿ, ಮಹಾಲಕ್ಷ್ಮೀ ಕಳೆ ತರುತ್ತವೆ. ಈ ಬಾರಿ ನಾವು ಮನೆಯಲ್ಲಿ ಅಕ್ಷಯ ತೃತೀಯಾ ಸರಳವಾಗಿ ಆಚರಿಸುತ್ತಿದ್ದೇವೆ. ಬ್ರೇಸ್‌ಲೈಟ್ ಅಥವಾ ಉಂಗುರ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದೇನೆ. ಸದ್ಯ ಕಿರುತೆರೆಯಲ್ಲಿ ಬಿಜಿಯಾಗಿದ್ದೇನೆ. ನನಗೆ ಅಲ್ಲಿಯೇ ‘ಬಂಗಾರದ ಬದುಕು’ ಸಿಕ್ಕಿದೆ. ಮತ್ತಷ್ಟು ಒಳ್ಳೆಯ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮೂಲಕ ಇಂಡಸ್ಟ್ರಿಗೆ ನನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ಆಸೆ.
| ಐಶ್ವರ್ಯಾ ಪಿಸ್ಸೆ, ನಟಿ