ಬೆಳಕಿನ ಮೂಲಕ ಬದುಕಿನ ಖುಷಿ, ಸಂಭ್ರಮ ಹೆಚ್ಚಿಸುವ ದೀಪಾವಳಿ ಹಬ್ಬ ಇಂದಿನಿಂದ ಆರಂಭವಾಗಿದೆ. ಹೊಸ ಭರವಸೆಯಿಂದ ಎಲ್ಲರೂ ಆಚರಿಸುತ್ತಾರೆ. ಹಾಗೆಯೇ ಸ್ಯಾಂಡಲ್ವುಡ್ ತಾರೆಯರ ಬದುಕಿನಲ್ಲಿ ಈ ದೀಪಾವಳಿ ಹೊಸ ಭರವಸೆ ಮೂಡಿಸುತ್ತಿದೆ. ಇದೇ ಉತ್ಸಾಹದಲ್ಲಿರುವ ನಟಿಯರಾದ ಸ್ವರೂಪಿಣಿ ಮತ್ತು ಸಂಹಿತಾ ವಿನ್ಯಾ ಬೆಳಕಿನ ಹಬ್ಬದ ವಿಶೇಷದ ಬಗ್ಗೆ ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈಗೆ ಶ್ಟಿ ಆದೆ. ಇನ್ಮುಂದೆ ಇಲ್ಲೇ ಚಿಕ್ಕಪ್ಪ-ಚಿಕ್ಕಮ್ಮನ ಜತೆ ಇರಲಿದ್ದೇನೆ. ಹಾಗಾಗಿ, ಈ ಬಾರಿಯ ಬೆಳಕಿನ ಹಬ್ಬವನ್ನು ಚೆನ್ನೈನಲ್ಲಿ ಆಚರಿಸಲಿದ್ದೇನೆ. ದೀಪಾವಳಿ ನಮಗೆ ವಿಶೇಷ. ಬಹುಶಃ ಇಡೀ ಕುಟುಂಬದವರು ಕೂಡುವುದು ಇದೇ ಹಬ್ಬದಲ್ಲಿ. ಸುಮಾರು 20ಕ್ಕೂ ಅಧಿಕ ಕುಟುಂದವರು, ಸಂಬಂಧಿಕರು ಒಂದೆಡೆ ಸೇರುತ್ತೇವೆ. ಸೀರೆ ಅಂದರೆ ನನಗೆ ಇಷ್ಟ. ಈ ಬಾರಿ ಹಬ್ಬಕ್ಕೆ ಹೊಸ ಸೀರೆ ಖರೀದಿಸಿದ್ದೇನೆ. ಮನೆಯಲ್ಲಿ ಇಂದು ಬೆಳಗ್ಗೆ ಮತ್ತು ಸಂಜೆ ಲಕ್ಷ್ಮೀ ಪೂಜೆ ಮಾಡುತ್ತೇವೆ. ಬೆಂಗಳೂರು ಮತ್ತು ಚೆನ್ನೈ ದೀಪಾವಳಿಗೆ ಸ್ವಲ್ಪ ವ್ಯತ್ಯಾಸವಿದೆ. ನಾವು ಯುಗಾದಿಗೆ ಬೇವು-ಬೆಲ್ಲ ತಿಂದು ಹಬ್ಬ ಆಚರಿಸಿದಂತೆ, ಇಲ್ಲಿ ದೀಪಾವಳಿಗೆ ಯಾವುದಾದರೂ ಸಿಹಿ-ಕಹಿ ಖಾದ್ಯವನ್ನು ಸೇವಿಸುತ್ತಾರೆ. ಹಬ್ಬಕ್ಕೆ ನನ್ನ ಅಭಿನಯದ ‘ಲಾರ್ಡ್ ಗಾಗ’ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಹಾಗೆಯೇ, ಕನ್ನಡದ ಹೊಸ ಸಿನಿಮಾ ಸೈನ್ ಮಾಡಿದ್ದೇನೆ. ತಮಿಳು ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ಹಾಗಾಗಿ, ಹಬ್ಬದ ಖುಷಿ ಹೆಚ್ಚಿದೆ. ನಮ್ಮಲ್ಲಿರುವ ನೆಗಟಿವಿಟಿಯನ್ನು ಆಚೆ ಆಕೆ ಉತ್ಸಾಹದಿಂದ ಕೆಲಸ ಮಾಡಲು ಬೆಳಕಿನ ಹಬ್ಬ ಪ್ರೇರಣೆಯಾಗಿದೆ. ಹಬ್ಬ ಎಲ್ಲರಿಗೂ ಹೊಸತನ ತರುತ್ತದೆ. ಖುಷಿಯಿಂದಲೇ ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸೋಣ.
ಸ್ವರೂಪಿಣಿ, ನಟಿ
ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಾರೆ. ನಮ್ಮ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ. ದೀಪಾವಳಿ ಹಬ್ಬಕ್ಕೆ ಬಂಧುಗಳು ಬರುವುದು ಹೆಚ್ಚು. ನಾನೇನೋ ಬೆಳಕಿನ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಶೂಟಿಂಗ್ ನಿಗದಿಯಾದ ಕಾರಣ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದೇನೆ. ಕೆಲಸದ ನಡುವೆಯೇ ಹಬ್ಬ ಆಚರಿಸಬೇಕಿದೆ. ಈ ಬಾರಿ ಮನೆಯಲ್ಲಿ ಇರುವುದಿಲ್ಲ ಎಂಬುದನ್ನು ಬಿಟ್ಟರೆ ಹಬ್ಬದ ಖುಷಿಯಂತೂ ಇರಲಿದೆ. ಶೂಟಿಂಗ್ ಬಿಡುವು ಪಡೆದು ಹೊಸ ಬಟ್ಟೆ ಧರಿಸಿ, ಪಟಾಕಿ ಸಿಡಿಸಬೇಕು. ಇನ್ನು ಮನೆಯಲ್ಲಿ ಅಮ್ಮ ಹಬ್ಬದಂದು ನೆರೆ-ಹೊರೆಯವರಿಗೆ ಸಿಹಿ ತಿಂಡಿ ಹಂಚುತ್ತಾರೆ. ಮೂರು ದಿನ ಮನೆಯ ತುಂಬಾ ದೀಪ ಹಚ್ಚುತ್ತೇವೆ. ಜೀವನದಲ್ಲಿ ಕಷ್ಟ, ಸಮಸ್ಯೆಗಳು ಬರುವುದು ಸಹಜ. ಅವೆಲ್ಲವನ್ನು ಎದುರಿಸುವ ಭರವಸೆ ನಮಗೆ ದೀಪಾವಳಿ ಹಬ್ಬ ನೀಡುತ್ತದೆ. ಸದ್ಯ ‘ಬಾಂಧವ್ಯ’ ಮತ್ತು ‘ದೈವಜ್ಞರು’ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಬಳಿಕ ತೆಲುಗು, ತಮಿಳಿನ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ಸಂಹಿತಾ ವಿನ್ಯಾ, ನಟಿ