ಪುನೀತ್ ರಾಜಕುಮಾರ್ 
ಸ್ಯಾಂಡಲ್‌ವುಡ್

ನಗುವಿನ ಒಡೆಯ : ಪುನೀತ್ ರಾಜಕುಮಾರ್ ಒಡನಾಟ ನೆನೆದ ‘ಆಕಾಶ್’, ‘ಅರಸು’ ನಿರ್ದೇಶಕ ಮಹೇಶ್ ಬಾಬು

ಪ್ರಮುಖ ಮುಖ್ಯಾಂಶಗಳು

  • ಅಪ್ಪು ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ಮಹೇಶ್​ ಬಾಬು
  • ಏಳು ವರ್ಷಗಳ ಒಡನಾಟ, ಸ್ನೇಹ-ಸಲುಗೆ
  • ಇಬ್ಬರ ಸ್ನೇಹ ಎಲ್ಲದಕ್ಕೂ ಮಿಗಿಲು ಎಂದ ನಿರ್ದೇಶಕ
ಇಂದು ನಟ ಪುನೀತ್ ರಾಜಕುಮಾರ್ ಜನ್ಮದಿನ. ಅವರು ಬದುಕಿದ್ದರೆ 51ನೇ ವರ್ಷದ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗುತ್ತಿದ್ದರು. ದುರಾದೃಷ್ಟವಶಾತ್, ಇಂದು ಭೌತಿಕವಾಗಿ ಅವರು ನಮ್ಮೊಂದಿಗಿಲ್ಲ. ಆದರೂ, ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಸದಾ ಪ್ರೇರಣಾದಾಯಿಯಾಗಿದ್ದಾರೆ. ಇನ್ನು ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಅವರ ಅಭಿನಯದ ‘ಆಕಾಶ್’ ಚಿತ್ರವನ್ನು ರಿ-ರಿಲೀಸ್ ಮಾಡಲಾಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೂಲಕವೇ ಮಹೇಶ್ ಬಾಬು ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು. ಆ ಬಳಿಕ ‘ಅರಸು’ ಚಿತ್ರದಲ್ಲಿ ಮತ್ತೊಮ್ಮೆ ಅಪ್ಪುಗೆ ಆ್ಯಕ್ಷನ್-ಕಟ್ ಹೇಳಿದ್ದರು. ನಂತರವೂ ಪುನೀತ್ ಜತೆ ಉತ್ತಮ ಒಡನಾಟ ಹೊಂದಿದ್ದರು. ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಜತೆಗಿನ ನೆನಪುಗಳನ್ನು ಅವರು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.
ಮಹೇಶ್ ಬಾಬು, ನಿರ್ದೇಶಕ
ನನ್ನ ಮತ್ತು ಅಪ್ಪು ಸರ್ ಒಡನಾಟ ತುಂಬಾ ದೊಡ್ಡದು. ‘ಅಪ್ಪು’, ‘ಅಭಿ’ ಮತ್ತು ‘ವೀರ ಕನ್ನಡಿಗ’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ‘ಆಕಾಶ್’, ‘ಅರಸು’ ಚಿತ್ರಗಳಿಗೆ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಮ್ಮ ಒಡನಾಟ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅದಕ್ಕೂ ಮಿಗಿಲಾದದು. ಅವರಿಗೆ ನಾನೊಬ್ಬ ಉತ್ತಮ ಸ್ನೇಹಿತನಾಗಿದ್ದೆ. ನನ್ನ ಜತೆ ಲೋಕವಿಹಾರಿಯಾಗಿ ಚರ್ಚಿಸುತ್ತಿದ್ದರು. ಹಾಗಾಗಿ, ಅಪ್ಪು ಜತೆ ಏಳು ವರ್ಷಗಳ ಕಾಲ ಕೆಲಸ ಮಾಡಲು ಸಾಧ್ಯವಾಯಿತು. ‘ಆಕಾಶ್’ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬಳಿಕ ಮುಂದಿನ ಸಿನಿಮಾ ನೀವೆ ನಿರ್ದೇಶಿಸಬೇಕು ಎಂದು ‘ಅರಸು’ ಚಿತ್ರಕ್ಕೆ ಅವಕಾಶ ನೀಡಿದರು. ನನಗೆ ಜೀವನ ನೀಡಿದ್ದು ದೊಡ್ಮನೆ ಕುಟುಂಬ. ಹಾಗಾಗಿ, ನೀವು ಎಷ್ಟು ಸಿನಿಮಾ ಹೇಳಿದರೂ ಖುಷಿಯಿಂದ ಕೆಲಸ ಮಾಡುವೆ ಎಂದಿದ್ದೆ. ಇದೀಗ 21 ವರ್ಷಗಳ ಬಳಿಕ ‘ಆಕಾಶ್’ ರಿ-ರಿಲೀಸ್ ಆಗಿದೆ. ಈಗಲೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ.
ಸರಳತೆಯೇ ದೊಡ್ಡ ಗುಣ
2001 ವರ್ಷದಿಂದ 2007ರವರೆಗೆ ಪುನೀತ್ ಜತೆ ಕೆಲಸ ಮಾಡಿದ್ದೇನೆ. ತಾವೊಬ್ಬ ಸ್ಟಾರ್ ಅನುವುದನ್ನು ಮರೆತು ತುಂಬಾ ಸರಳ ಹಾಗೂ ಸ್ನೇಹಿತನಂತೆ ಇರುತ್ತಿದ್ದರು. ಸದಾ ಕಾಲ ನಗು ನಗುತ್ತಾ ಖುಷಿಯಿಂದ ಇರುತ್ತಿದ್ದರು. ಪ್ರತಿದಿನ ಅಪ್ಪು ಜತೆ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದ್ದೆ. ಅವರ ಜತೆ ಕಳೆದ ಸಮಯದಲ್ಲಿ ಇದೇ ಅಮೋಘ ಕ್ಷಣ ಎನ್ನಲಾಗದು, ಪ್ರತಿ ಕ್ಷಣವು ಅಮೋಘವಾದದು. ಅಪ್ಪುಗೆ ಒಳ್ಳೆಯ ಹಾಸ್ಯ ಪ್ರಜ್ಞೆ ಇತ್ತು. ಒಮ್ಮೊಮ್ಮೆ ನನಗೆ ಹುಡುಗಿ ಧ್ವನಿಯಲ್ಲಿ ಕರೆ ಮಾಡಿ, ಪ್ರ್ಯಾಂಕ್ ಮಾಡುತ್ತಿದ್ದರು. ಸೆಟ್‌ಬಾಯ್‌ನಿಂದ ಹಿಡಿದು ಎಲ್ಲರ ಜತೆ ಉತ್ತಮ ಅನ್ಯೋನ್ಯವಾಗಿರುತ್ತಿದ್ದರು. ಆ ಸರಳತೆಯೇ ಅವರ ದೊಡ್ಡಗುಣ.

ಹೊಸಬರಿಗೆ ಅವಕಾಶ

ಪುನೀತ್ ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಅವರಿಗೆ ಒಂದು ಪಾತ್ರ ಇಷ್ಟವಾಯಿತು ಎಂದರೆ, ಯಾರೇನೇ ಹೇಳಿದರೂ ಆ ಪಾತ್ರವನ್ನು ಬಿಡುತ್ತಿರಲಿಲ್ಲ. ಮಾಡುತ್ತಿದ್ದರು. ಪ್ರತಿ ಪಾತ್ರದಲ್ಲೂ ತೃಪ್ತಿ ಕಾಣುವ ವ್ಯಕ್ತಿಯಾಗಿದ್ದರು. ಹೊಸಬರಿಗೆ ಅವಕಾಶ ಕೊಡುತ್ತಿದ್ದರು. ಯಾವುದೇ ವ್ಯಕ್ತಿಯ ಬಗ್ಗೆ ಗಾಳಿಸುದ್ದಿಗಳನ್ನು ಕೇಳುತ್ತಿರಲಿಲ್ಲ. ಎಲ್ಲರ ಜತೆ ಬಾಂಧವ್ಯದಿಂದ ಇದ್ದು, ಪ್ರತಿ ವ್ಯಕ್ತಿಯನ್ನು ಗೌರವಿಸುತ್ತಿದ್ದರು. ಮನೆ ಹತ್ತಿರ ಯಾರೇ ಸಹಾಯ ಕೇಳಿಕೊಂಡು ಬಂದರೂ ನೆರವು ನೀಡುತ್ತಿದ್ದರು. ಆಸ್ಪತ್ರೆ, ಸ್ಕೂಲ್‌ಗಳಿಗೆ ತಮ್ಮ ತಂಡದ ಕಡೆಯಿಂದ ಖುದ್ದಾಗಿ ಭೇಟಿ ನೀಡಿ, ಸಹಾಯ ಮಾಡುತ್ತಿದ್ದರು.