- 22 ವರ್ಷಗಳ ಬಳಿಕ ಹಿಂದಿ ಚಿತ್ರದಲ್ಲಿ ನಟಿಸಿದ ಹಿರಿಯ ನಟ
- ಇದೇ ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ಅಭಿನಯಿಸಿದ ನಟ
- ಟ್ರೇಲರ್ ನಲ್ಲಿ ಅನಂತ್ ನಾಗ್ ಲುಕ್ ರಿವೀಲ್
ಪದ್ಮಭೂಷಣ ಪುರಸ್ಕೃತ ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್ ನಾಗ್ ಕನ್ನಡವಷ್ಟೇ ಅಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಮಿಂಚಿದ್ದಾರೆ. ಎಲ್ಲ ಭಾಷೆ ಸೇರಿ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಅವರದು. ಇಂತಹ ಅನಂತ್ ನಾಗ್ 1974ರಲ್ಲಿಯೇ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ‘ಅಂಕುರ್’ ಚಿತ್ರದ ಮೂಲಕ ಸುಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್, ಅನಂತ್ ನಾಗ್‌ರನ್ನು ಬಾಲಿವುಡ್‌ಗೆ ಪರಿಚಯಿಸಿದ್ದರು. ಬಳಿಕ ‘ನಿಶಾಂತ್’, ‘ಮಂಥನ್’, ‘ಭೂಮಿಕಾ: ದ ರೋಲ್’ ಸೇರಿ 13 ಚಿತ್ರಗಳಲ್ಲಿ ಅವರು ನಟಿಸಿದ್ದರು. 2004ರಲ್ಲಿ ತೆರೆಕಂಡಿದ್ದ ಮಣಿರತ್ನಂ ನಿರ್ದೇಶನದ ‘ಯುವ’ ಹಿಂದಿಯಲ್ಲಿ ಅವರ ಕೊನೆಯ ಚಿತ್ರವಾಗಿತ್ತು. ಇದೀಗ ಬರೋಬ್ಬರಿ 22 ವರ್ಷಗಳ ಬಳಿಕ ಅನಂತ್ ನಾಗ್ ಮತ್ತೆ ಬಾಲಿವುಡ್‌ಗೆ ಮರಳಿದ್ದಾರೆ. ಅನಿಲ್ ಕಪೂರ್, ವಿಜಯ್ ವರ್ಮಾ ನಟಿಸಿರುವ ‘ಫ್ಯಾಮಿಲಿ ಬಿಜಿನೆಸ್’ ಎಂಬ ವೆಬ್‌ಸರಣಿಯಲ್ಲಿ ಅನಂತ್ ಮುಖ್ಯಪಾತ್ರದಲ್ಲಿದ್ದಾರೆ. ಇತ್ತೀಚೆಗಷ್ಟೇ ವೆಬ್‌ಸರಣಿ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ಅನಂತ್ ನಾಗ್‌ರನ್ನು ತಂಡ ಪರಿಚಯಿಸಿದೆ. ಆದರೆ, ಪಾತ್ರದ ಹೆಸರನ್ನು ರಿವೀಲ್ ಮಾಡಬೇಕಷ್ಟೇ. ಇನ್ನು ‘ಫ್ಯಾಮಿಲಿ ಬಿಜಿನೆಸ್’ ಮೂಲಕ ಅನಂತ್ ನಾಗ್ ಇದೇ ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. -ಏಜೆನ್ಸೀಸ್